ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆ ದೇಶದಲ್ಲಿಯೇ ಅತೀ ಹೆಚ್ಚು ಮತ್ತು ವಿಶಿಷ್ಠ ಜಾತ್ರೆಗಳಿಗೆ ಹೆಸರುವಾಸಿ. ಜಿಲ್ಲೆಯಲ್ಲಿ ವರ್ಷವಿಡೀ ಒಂದಿಲ್ಲೋಂದು ಊರಿನಲ್ಲಿ ಒಂದಿಲ್ಲೋಂದು ಜಾತ್ರೆಗಳು ನಡೆಯುತ್ತಲೇ ಇರುತ್ತವೆ. ಈ ಜಾತ್ರೆಗಳಲ್ಲಿ ಭಕ್ತರು ತಮ್ಮಿಷ್ಠದ ಹರಕೆ ಹೊತ್ತು ಬಯಕೆ ಈಡೇರಿದ ಬಳಿಕ ಹರಕೆ ತೀರಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಿರುತ್ತಾರೆ.
ಈ ಸುದ್ದಿ ಕೂಡ ಅಂಥದ್ದೆ ಒಂದು ವಿಶೇಷತೆಯಿಂದ ಕೂಡಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹುಲ್ಲೂರು ಗ್ರಾಮದ ಬಿ.ಎಸ್ಸಿ ಓದುತ್ತಿರುವ ಯುವಕ ಚಂದನಗೌಡ ಶಿವಪ್ಪಗೌಡ ಕೊಡಗಾನೂರ ವಿನೂತನವಾಗಿ ದೇವರ ಸೇವೆ ಮಾಡುವ ಮೂಲಕ ಗಮನ ಸೆಳೆದಿದ್ದಾನೆ.
ಹುಲ್ಲೂರಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಜಾತ್ರೆಯ ಅಂಗವಾಗಿ ಓಕುಳಿ ಕಾರ್ಯಕ್ರಮ ನಡೆಯಿತು. ಈ ಓಕಳಿ ಆಟಕ್ಕೆ ಹೊಂಡವೊಂದನ್ನು ನಿರ್ಮಿಸಲಾಗಿತ್ತು. ಈ ಹೊಂಡ ಸುಮಾರು 6000 ಲೀಟರ್ ನೀರು ಸಂಗ್ರಹಿಸಬೇಕಿತ್ತು. ಈ ಹೊಂಡ ತುಂಬಿಸಲು ಅನೇಕ ಜನ ಶ್ರಮ ವಹಿಸಬೇಕಿತ್ತು. ಆದರೆ, ಬಿ.ಎಸ್ಸಿ ಓದುತ್ತಿರುವ ಯುವಕ ತಾನೊಬ್ಬನೇ ಈ ಹೊಂಡವನ್ನು ತುಂಬಿಸುವ ಮೂಲಕ ನೆರೆದ ಜನ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುಂತೆ ಮಾಡಿದ್ದಾನೆ.
ಗ್ರಾಮದಲ್ಲಿರುವ ಸೇದು ಬಾವಿಯಿಂದ ಸುಮಾರು ೪೦ ಲೀಟರ್ ಸಾಮರ್ಥ್ಯದ ಪಟ್ಟಿಕೊಡದಿಂದ ನೀರು ತುಂಬಿಸಿಕೊಂಡು ಹೊಂಡಕ್ಕೆ ಬಂದು ನೀರನ್ನು ಸುರಿದು ತುಂಬಿಸಿದ್ದಾನೆ. ಹೆಗಲ ಮೇಲೆ ಕೊಡ ಹೊತ್ತುಕೊಂಡು ಬರುತ್ತಿದ್ದ ಯುವಕನ ಹುಮ್ಮಸ್ಸು ಕಂಡು ನೆರೆದ ಗ್ರಾಮಸ್ಥರು ಕೆಕೆ ಹಾಕುತ್ತ ಹುರುದುಂಬಿಸಿದ್ದಾರೆ.
ಮೆರವಣಿಗೆ ಮಾಡಿದ ಗ್ರಾಮಸ್ಥರು
ಯುವಕ ಹೊಂಡ ತುಂಬುಸುತ್ತಿದ್ದಂತೆ ಗ್ರಾಮದ ಯುವಕರು ಕುಣಿದು ಕುಪ್ಪಳಿಸುತ್ತ ಪರಸ್ಪರ ಗುಲಾಲು ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅಲ್ಲದೇ, ಈ ವಿನೂತನ ಸೇವೆ ಮಾಡಿದ ಚಂದನಗೌಡ ಶಿವಪ್ಪಗೌಡ ಕೊಡಗಾನೂರ ಅವರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಓಕಳಿ ನಡೆಯುವ ಸ್ಥಳಕ್ಕೆ ಕರೆತಂದಿದ್ದಾರೆ.
ಪಾರಂಪರಿಕವಾಗಿ ಬಂದಿರುವ ಸಂಪ್ರದಾಯ
ಹಲವಾರು ವರ್ಷಗಳ ಹಿಂದೆ ಈಗಿನ ಹಿರಿಯರು ಅಂದರೆ ಆಂದು ಯುವಕರಾಗಿದ್ದವರು ಕೂಡ ಈಗಿನಕ್ಕಿಂತ 10 ಪಟ್ಟು ದೊಡ್ಡದಾಗಿದ್ದ ಹೊಂಡಕ್ಕೆ ಇದೇ ಪಟ್ಟಿ ಕೊಡದಿಂದ ಒಬ್ಬರೇ ನೀರು ತುಂಬಿಸಿ ಸಾಧನೆ ಮಾಡುತ್ತಿದ್ದರು ಎಂದು ಈಗಲೂ ಸ್ಮರಿಸುತ್ತಾರೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಪೈಪ್ ಮೂಲಕ ನೀರು ತುಂಬಿಸುವುದು ಕಷ್ಟ ಎಂಬುದನ್ನು ಅರಿತು ಗ್ರಾಮಸ್ಥರು ಹೊಂಡಕ್ಕೆ ನೀರು ತುಂಬಿಸುವ ಸಮಸ್ಯೆಗೆ ಪರಿಹಾರವಾಗಿ ಕಳೆದ ಕೆಲವು ವರ್ಷಗಳಿಂದ ಒಬ್ಬೊಬ್ಬ ಯುವಕರು ಪ್ರತಿ ಜಾತ್ರೆಯ ಸಂದರ್ಭದಲ್ಲಿ ನೀರು ತುಂಬಿಸುತ್ತ ಬಂದಿದ್ದಾರೆ. ಈ ಸಂಪ್ರದಾಯ ಈ ಬಾರಿಯೂ ಮುಂದುವರೆದಿದೆ.
ಯುವಕನ ಈ ಸಾಧನೆ ಮೆಚ್ಚಿ ಗ್ರಾಮದ ಹಿರಿಯರು ಜಾತ್ರಾ ಕಮೀಟಿಯಿಂದ ಸನ್ಮಾನಿಸಿ ಗೌರವಿಸಿದ್ದಾರೆ. ಅಲ್ಲದೇ, ಯುವಕ ಚಂದನಗೌಡ ಶಿವಪ್ಪಗೌಡ ಕೊಡಗಾನೂರ ಬಂಧುಗಳು ಮತ್ತು ಸ್ನೇಹಿತರು ಚಿನ್ನ, ಬೆಳ್ಳಿ, ಬಟ್ಟೆ, ನಗದು ಆಯೇರಿ ಮಾಡಿ ಪ್ರೋತ್ಸಾಹಿಸಿದ್ದಾರೆ.
ಈ ಸಂದರ್ಭದಲ್ಲಿ ಮುದ್ದೇಬಿಹಾಳ ತಾ. ಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಪಿಕೆಪಿಎಸ್ ಅಧ್ಯಕ್ಷ ಸುರೇಶ ಹಳೇಮನಿ, ಎಚ್. ಎಚ್. ಬೊಮ್ಮಣಗಿ, ನ್ಯಾಯವಾದಿ ಸಂತೋಷ ಕಡಿ, ಹಣಮಂತರಾಯಗೌಡ ಕೊಡಗಾನೂರ, ಸಂಗಪ್ಪಗೌಡ ಕೊಡಗಾನೂರ, ನಿಂಗಪ್ಪ ಓಲೇಕಾರ, ವೈ. ಎನ್. ಸಾಲೋಟಗಿ, ಭೀಮನಗೌಡ ಬಿರಾದಾರ, ಭೀಮಣ್ಣ ತೊಂಡಿಕಟ್ಟಿ, ರಾಮನಗೌಡ ಭಗವತಿ, ಮಲ್ಲನಗೌಡ ಬಿರಾದಾರ, ಯಮನಪ್ಪ ಇಂಗನಾಳ, ವೈ. ಜಿ. ಕೊಡಗಾನೂರ, ಮುದಕಪ್ಪಗೌಡ ಕೊಡಗಾನೂರ, ರಾಮು ಬಿರಾದಾರ, ಗ್ರಾ. ಪಂ. ಸದಸ್ಯ ದಯಾನಂದ ಹಲಕಾವಟಗಿ, ರಾಘವೇಂದ್ರ ಕುಲಕರ್ಣಿ, ವಿನೋದ ಓಲೇಕಾರ ಮುಂತಾದವರು ಉಪಸ್ಥಿತರಿದ್ದರು.
ಗಮನ ಸೆಳೆದ ಸಂಭ್ರಮದ ಓಕುಳಿ
ಬೆಳಗ್ಗೆ ಚಂದನಗೌಡ ಶಿವಪ್ಪಗೌಡ ಕೊಡಗಾನೂರ ನೀರು ತುಂಬಿಸಿದ ಹೊಂಡದಲ್ಲಿ ಸಂಜೆ ಬಾಬುದಾರರ ಸಮ್ಮುಖದಲ್ಲಿ ಮಾರುತೇಶ್ವರ ದೇವಸ್ಥಾನದ ಪೂಜಾರರು ಪೂಜೆ ನೆರವೇರಿಸಿದ್ದಾರೆ. ನಂತರ ಇದನ್ನೇ ಕಾತುರದಿಂದ ಕಾಯುತ್ತಿದ್ದ ಭಕ್ತರು ಓಕುಳಿಯಾಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ನೆರದಿದ್ದ ಭಕ್ತಸಮೂಹ ಹರ್ಷೋದ್ಘಾರ ಮಾಡುತ್ತಾ ಸಂಭ್ರಮಿಸಿದ್ದಾರೆ.
ಜಾತ್ರೆಯ ಅಂಗವಾಗಿ ಹುಲ್ಲೂರ ಗ್ರಾಮದ ಆರಾಧ್ಯದೈವ ಮಾರುತೇಶ್ವರಿನಿಗೆ ದೇವಸ್ಥಾನದ ಪೂಜಾರಿ ಯಲಗೂರೇಶ ಹೂಗಾರ ಮತ್ತು ಗ್ರಾಮಸ್ಥ ಮಡಿವಾಳಪ್ಪ ಪತ್ತಾರ ಅವರು ಗೊಡಂಬಿ ಮತ್ತು ಬಾದಾಮಿಯಿಂದ ವಿಶೇಷವಾಗಿ ಅಲಂಕಾರ ಮಾಡಿ ಭಕ್ತಿ ಸಮರ್ಪಿಸಿದ್ದಾರೆ.
ಹುಲ್ಲೂರು ಗ್ರಾಮದಲ್ಲಿ ಜಾತ್ರೆ ನಿಮಿತ್ತ ಭಾನುವಾರ ಓಕುಳಿ ಹೊಂಡವನ್ನು ತುಂಬಿಸಿದ ಚಂದನಗೌಡ ಕೊಡಗಾನೂರ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.