ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ನಾನಾ ಠಾಣೆಗಳ ಪೊಲೀಸರು ಜಿಲ್ಲೆಯಲ್ಲಿ ದಾಖಲಾಗಿದ್ದ ಭೂ ಹಗರಣ, ಆನಲೈನ್ ವಂಚನೆ ಹಾಗೂ ದರೋಡೆ ಸೇರಿದಂತೆ ನಾನಾ ಪ್ರಕರಣಗಳನ್ನು ಭೇದಿಸುವ ಮೂಲಕ ಗಮನ ಸೆಳೆದಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಋಷಿಕೇಶ ಸೋನಾವಣೆ, ಮೊದಲ ಪ್ರಕರಣದಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ವಂಚಿಸಿ ಭೂ ಹಗರಣ ಮಾಡುತ್ತಿದವರನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಬಳಿ ಬಾಬಾನಗರ ಗ್ರಾಮದ ನಿವಾಸಿ ಸಾಹೇಬಗೌಡ ಮಲ್ಲನಗೌಡ ರುದ್ರಗೌಡರ ಅವರು ರೂ. 46.50 ಲಕ್ಷ ವೆಚ್ಚದಲ್ಲಿ ಅರ್ಗನ್ ಉರ್ಫ್ ಅಗನು ಧೋಳು ಕಾಳೆ ಅವರಿಂದ ಇಟ್ಟಂಗಿಹಾಳ ಬಳಿ ಸರ್ವೆ ಸಂಖ್ಯೆ 48/1ರಲ್ಲಿ 20 ಎಕರೆ ಜಮೀನು ಖರೀದಿಸಿದ್ದರು. ಆದರೆ, ನಂತರ ತಮ್ಮನ್ನು ಖೊಟ್ಟಿ ದಾಖಲೆ ಸೃಷ್ಠಿಸಿ ವಂಚಿಸಲಾಗಿದೆ ಎಂದು ಸಾಹೇಬಗೌಡ ಮಲ್ಲನಗೌಡ ರುದ್ರಗೌಡರ ಅವರು ಸಿಇಎನ್ ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಈ ಪ್ರಕರಣ ಸಂಬಂಧ ರಾಜು ಮಾಳಪ್ಪ ಮಾನೆ, ದಯಾನಂದ ಅಮಯ್ಯ ಸಂಗಮದ, ಕಿರಣ ತಂದೆ ವಾಸುದೇವ ಬೇಡೆಕರ, ದಶರಥ ಸಿದ್ರಾಮ ಹೊಸಮನಿ, ದತ್ತಾತ್ರೇಯ ಶರಣಪ್ಪ ಶಿವಶರಣ, ಸಾಕೀಫ್ ಬಶೀರಅಹ್ಮದ ನಂದವಾಡಗಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಇನ್ನೂ ಕೆಲವರು ಕೂಡಿಕೊಂಡು ಈ ಕೃತ್ಯ ಎಸಗಿರುವುದನ್ನು ಪತ್ತೆ ಮಾಡಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿದ ಸಿಇಎನ್ ಸಿಪಿಐ ಸುನೀಲಕುಮಾರ ನಂದೆಶ್ವರ ಮತ್ತು ಸಿಬ್ಬಂದಿ ವಂಚನೆ ಮಾಡಿದ ಆರೋಪಿಗಳನ್ನು ಬಂಧಿಸಿ ರೂ. 46.50 ಹಣವನ್ನು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಅಲ್ಲದೇ, ಈ ಪ್ರಕರಣದಲ್ಲಿ ಭಾಗಿಯಾಗಿರುವ ನಕಲಿ ಆಧಾರ ಮತ್ತು ಪ್ಯಾನ್ ಕಾರ್ಡ ಸೃಷ್ಟಿ ಮಾಡಿದವರಿಗೆ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಈ ಪ್ರಕರಣದ ಭೇದಿಸಿದ ಸಿಇಎನ್ ಪೊಲೀಸರ ಕಾರ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆ.
ಮೊಬೈಲ್ ಕಳ್ಳರ ಬಂಧನ
ಎರಡನೇ ಪ್ರಕರಣದಲ್ಲಿ ಸಿಇಎನ್ ಪೊಲೀಸರು ವಿಜಯಪುರ ನಗರ ಮತ್ತು ಜಿಲ್ಲಾದ್ಯಂತ ನಾನಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ 23 ವಿವೋ, ಐದು ರೆಡಮಿ, ನಾಲ್ಕು ಸ್ಯಾಮಸಂಗ್, ಐದು ಒನ್ ಪ್ಲಸ್, ಒಂದು ಎಲ್. ಜಿ, ಎಂಟು ಓಪ್ಪೊ, ತಲಾ ಒಂದು ರಿಯಲ್‌ಮಿ, ಫೋಕೋ, ಸ್ಯಾಮಸಂಗ್, ಐಪೋನ್ ಕಂಪನಿಯ ಹೀಗೆ ಒಟ್ಟು 50 ಮೋಬೈಲ್ ಫೋನುಗಳನನು ವಶಪಡಿಸಿಕೊಂಡಿದ್ದಾರೆ. ಇವುಗಳ ಅಂದಾಜು ಮೊತ್ತ ರೂ. 10.73 ಲಕ್ಷ ಎಂದು ಎಸ್ಪಿ ತಿಳಿಸಿದ್ದಾರೆ.
ಮೋಬೈಲ್ ಫೋನುಗಳ ಪತ್ತೆ ಮಾಡುವಲ್ಲಿ ಸಿಇಎನ್ ಪೊಲೀಸ್ ಸಿಪಿಐ ಸುನೀಲಕುಮಾರ ನಂದೀಶ್ವರ, ಸಿಬ್ಬಂದಿಾದ ಎಸ್. ಆರ್. ಉಮನಾಬಾದಿ ಮತ್ತು ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆನಲೈನ್ ವಂಚನೆ ಪ್ರಕರಣ ಭೇದಿಸಿ ನಾಲ್ಕು ಜನ ಅಂತಾರಾಜ್ಯ ಕಳ್ಳರನ್ನು ಬಂಧಿಸಿದ ಪೊಲೀಸರು
ಮೂರನೇ ಪ್ರಕರಣದಲ್ಲಿ ಎರಡು ಆನಲೈನ್ ವಂಚನೆ ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು ನಾಲ್ಕು ಜನ ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.
ವಿಜಯಪುರದ ವೈದ್ಯ ಡಾ. ಅನಿರುದ್ದ ರಾಘವೇಂದ್ರ ಉಮರ್ಜಿ ಅವರಿಗೆ ಮುಂಬೈ ನಾಕ್ರೊಟಿಕ್ಸ್ ಪೊಲೀಸರ ಹೆಸರಿನಲ್ಲಿ ಬೆದರಿಸಿ ಅವರ ಎಫ್. ಡಿ ಖಾತೆಯಲ್ಲಿದ್ದ ರೂ. 54 ಲಕ್ಷ ವಂಚನೆ ಮಾಡಿದ್ದರು. ವಂಚಕರು ಫೆಡೆಕ್ಸ್ ಕೋರಿಯರ್ ಮೂಲಕ ಅಫ್ಘಾನಿಸ್ತಾನದ ಕಾಬೂಲ್ ಗೆ 15 ಅಂತಾರಾಷ್ಟ್ರೀಯ ಸಿಮ್ ಕಾರ್ಡ್ಸ್ 950 ಗ್ರಾಂ ಎಂಡಿಎಂಎ ಡ್ರಗ್ಸ್ ಮತ್ತು ಇತರೆ ವಸ್ತುಗಳನ್ನು ಕಳುಹಿಸಿದ್ದೀರಿ. ಈ ಬಗ್ಗೆ ಮುಂಬೈ ನಾಕ್ಟೊಟಿಕ್ಸ್ ಕ್ರೈಂ ಬ್ರ್ಯಾಂಚ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಂದು ಹೆದರಿಸಿದ್ದರು. ಅಲ್ಲದೇ, ಇದರಿಂದ ಪಾರಾಗಲು ನಿಮ್ಮ ಎಫ್. ಡಿ ಖಾತೆಯಲ್ಲಿರುವ ರೂ. 54 ಲಕ್ಷ ಹಣವನ್ನು ತಮ್ಮ ಪಂಜಾಬ ನ್ಯಾಶನಲ್ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಹೇಳಿ ಹಣ ವಂಚಿಸಿದ್ದರು. ಅಲ್ಲದೇ, ಈ ಸಂದರ್ಭದಲ್ಲಿ ಆನಲೈನ್ ಮೂಲಕ ಡಿಜಿಟಲ್ ಅರೆಸ್ಟ್ ಮಾದರಿಯಲ್ಲಿ ಮೋಸ ಮತ್ತು ವಂಚನೆ ಮಾಡಿದ್ದರು. ಈ ಕುರಿತು ವಿಜಯಪುರ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅಲ್ಲದೇ, ಮಖಣಾಪೂರ ಎಲ್. ಟಿ. 1ರ ನಿವಾಸಿ ಬಬನ್ ನಾಮದೇವ ಚವ್ಹಾಣ ಎಂಬುವರಿಗೆ ಪಾರ್ಟ್ ಟೈಂ ಕೆಲಸ ಕೊಡುವುದಾಗಿ ನಂಬಿಸಿ ಆನಲೈನ್ ಮೂಲಕ ರೂ. 14.77 ಲಕ್ಷಣ ಹಣ ಪಡೆದು ವಂಚಿಸಿದ್ದರು. ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಯಲ್ಲಿ ದೂರು ದಾಖಲಾಗಿತ್ತು.
ಈ ಕುರಿತು ವಿಜಯಪುರ ಎಸ್ಪಿ ಅವರು, ಹೆಚ್ಚುವರಿ ಎಸ್ಪಿ ಮಾರ್ಗದರ್ಶನದಲ್ಲಿ ಸಿಇಎನ್ ಸಿಪಿಐ ಸುನೀಲಕುಮಾರ ಎಸ್. ನಂದೇಶ್ವರ ನೇತೃತ್ವದಲ್ಲಿ ತನಿಖೆಗಾಗಿ ತಂಡ ರಚಿಸಿದ್ದರು. ಈ ತಂಡ ತನಿಖೆ ಕೈಗೊಂಡು ತಾಂತ್ರಿಕ ದಾಖಲೆಗಳನ್ನು ಸಂಗ್ರಹಿಸಿ ಹರಿಯಾಣ ಮತ್ತು ರಾಜ್ಯಸ್ಥಾನ ಮೂಲದ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನನು ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಥಾನೆಸರ ಮೂಲದ ರಾಜೀವ ಸತ್ಪಾಲ್ ವಾಲಿಯಾ, ರಾಜಸ್ಥಾನದ ಉದಯಪುರ ಜಿಲ್ಲೆಯ ಲಸದಿಯಾ ಮೂಲದ ರಾಜಶೇಖರ ಶಂಕರಲಾಲ ಟೇಲರ್, ಗಿರೌ ಮೂಲದ ತೇಜಪಾಲ್ ಯಾದವ, ಹಾಗೂ ನಾಕೋಡ ನಗರ ಮೂಲದ ಸುರೇಂದ್ರ ಸಿಂಗ್ ಶ್ರೀರಾಮಸಿಂಗ್ ಅವರನ್ನು ಬಂಧಿಸಿದ್ದಾರೆ.
ಅಲ್ಲದೇ, ಆರೋಪಿಗಳು ವಂಚನೆಗೆ ಬಳಸಿದ ನಾನಾ ಕಂಪನಿಗಳ ಒಂಬತ್ತು ಮೊಬೈಲುಗಳು, ಏಳು ಸಿಮ್ ಕಾರ್ಡುಗಳು, ಒಂದು ಟ್ಯಾಬ್ ವಶಪಡಿಸಿಕೊಂಡಿದ್ದಾರೆ. ಅಲ್ಲದೇ, ಅವರ ಬ್ಯಾಂಕ್ ಖಾತೆಗಳನ್ನು ಡೆಬಿಟ್ ಪ್ರೀಜ್ ಮಾಡಿಸಿದ್ದಾರೆ.
ಈ ಎರಡೂ ಪ್ರಕರಣಗಳಲ್ಲಿ ಒಟ್ಟು ರೂ. 68.77 ವಂಚನೆ ಮಾಡಲಾಗಿದ್ದು, ಈ ಪೈಕಿ ಈಗಾಗಲೇ ರೂ. 40 ಲಕ್ಷ ಹಣವನ್ನು ದೂರುದಾದರಿಗೆ ಮರಳಿಸಿದ್ದಾರೆ.
ಈ ಆರೋಪಿಗಳು ದೇಶಾದ್ಯಂತ ಒಟ್ಟು 502 ಜನರಿಗೆ ವಂಚನೆ ಮಾಡಿರುವ ಕುರಿತು ಎನ್‌ಸಿಆರ್‌ಪಿ(NCRP) ಪೋರ್ಟಲ್ ನಲ್ಲಿ ಮಾಹಿತಿ ಇದೆ. ಆರೋಪಿಗಳು ಅನಾಮಧೆಯರ ಹೆಸರಿನಲ್ಲಿ ನಾನಾ ಬ್ಯಾಂಕುಗಳಲ್ಲಿ ಸುಮಾರು 170 ಖಾತೆಗಳನ್ನು ತೆರೆದು ವಂಚನೆ ಮಾಡಿದ್ದಾರೆ. ಅಲ್ಲದೇ, ಅನಾಮಧೆಯರ ಹೆಸರಿನಲ್ಲಿ ನಾನಾ ಕಂಪನಿಗಳ 120 ಸಿಮ್ ಕಾರ್ಡುಗಳನ್ನು ಉಪಯೋಗ ಮಾಡಿರುವುದು ಪತ್ತೆಯಾಗಿದೆ. ಈ ಪ್ರಕರಣದ ತನಿಖೆಯಲ್ಲಿ ಪ್ಲೊಂಡ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆ.
ಕಾಂಟರ್ ತಡೆದು ದರೋಡೆ ಪ್ರಕರಣ ಬೇಧಿಸಿದ ಪೊಲೀಸರು
ಇತ್ತೀಚೆಗೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಹೊರವಲಯದಲ್ಲಿ ಕ್ಟಾಂಟರ್ ತಡೆದು ಚಾಲಕ ಮತ್ತು ಕ್ಲೀನರ್ ಮೇಲೆ ಖಾರದ ಪುಡಿ ಎರಚಿ, ಹಲ್ಲೆ ಮಾಡಿ ರೂ. 32.29 ಲಕ್ಷ ದೋಡೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದರೋಡೆ ನಡೆದ ಬಳಿಕ ಎಸ್ಪಿ ಅವರು ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ ಮತ್ತು ಶಂಕರ ಮರಿಹಾಳ, ಬಸವನ ಬಾಗೇವಾಡಿ ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ವಿಜಯಪುರ ಗ್ರಾಮೀಣ ಡಿವೈಎಸ್ಪಿ ಗಿರಿಮಲ್ಲ ತಳಕಟ್ಟಿ, ಮಾರ್ಗದರ್ಶನದಲ್ಲಿ ನಿಡಗುಂದಿ ಸಿಪಿಐ ಶರಣಗೌಡ ಬಿ ಗೌಡರ, ಕೊಲ್ಹಾರ ಪಿಎಸ್ಐ ಪ್ರವೀಣಕುಮಾರ ಗರೇಬಾಳ, ಕೂಡಗಿ ಪಿಎಸ್‌ಐ ಯತೀಶಕುಮಾರ ಕೆ. ಎನ್ ಮತ್ತು ಐ. ಆರ್. ಮಾದರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು.
ಮೇ 17 ರಂದು ಮಧ್ಯರಾತ್ರಿ ಕೊಲ್ಹಾರ ಪಟ್ಟಣದ ಉಪ್ಪಲದಿನ್ನಿ ಕ್ರಾಸ ಹತ್ತಿರ ನಡೆದ ಕ್ಯಾಂಟರ ದರೋಡೆ ಪ್ರಕರಣವನ್ನು ಬೇಧಿಸಿದ ಪೊಲೀಸರು ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಶಾಮಿಲಾಗಿದ್ದ ಕ್ಯಾಂಟರ ಚಾಲಕ ಸೇರಿದಂತೆ ನಾಲ್ಕು ಜನರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಬುಲೆರೋ ವಾಹನ, ಬಡಿಗೆ, ರಾಡ್ ಹಾಗೂ ಸುಲಿಗೆಯಾದ ಹಣದ ಪೈಕಿ ರೂ. 31.04 ಲಕ್ಷ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕೊರಳ್ಳಿ ಗ್ರಾಮದ ಕ್ಯಾಂಟರ್ ಚಾಲಕ ಮಹಾಂತೇಶ ಶಿವಗೊಂಡ ತಳವಾರ(35), ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಧರೇಶ ರೇವಣಸಿದ್ದ ದಳವಾಯಿ(21), ಸುನೀಲ ರಾಮಪ್ಪ ವಡ್ಡರ(21), ಶಿವಾನಂದ ಬಸಪ್ಪ ದಳವಾಯಿ(21) ಮತ್ತು ಸಿಂದಗಿ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಶಿವಪ್ಪ ಶರಣಪ್ಪ ಮಾಶ್ಯಾಳ(39) ಎಂದು ಗುರುತಿಸಲಾಗಿದೆ.
ಈ ಪ್ರಕರಣ ಬೇಧಿಸಿ ಆರೋಪಿಗಳನ್ನು ಪತ್ತೆ ಮಾಡಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಎಸ್ಸಿ ಶ್ಲಾಘಿಸಿದ್ದಾರೆ. ಅಲ್ಲದೇ, ಹಿರಿಯ ಅಧಿಕಾರಿಗಳ ಜೊತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿಯಾದ ಬಿ. ಸಿ. ಪಾಟೀಲ, ಎಸ್. ಸಿ. ರೆಡ್ಡಿ, ಸೋಮರಾಯ ಲಮಾಣಿ, ಸಿದ್ದು ಅಂಗಡಿ, ವೀರೇಶ.ಎಸ್. ಸಂಗಮೇಶ ಹಡಲಗೇರಿ, ಚಿದಾನಂದ ತೋಳಮಟ್ಟಿ, ಪಿ. ಎಸ್. ಕುಂಬಾರ, ಎಂ. ಎಸ್. ಬಿರಾದಾರ, ಪರಮಾನಂದ ಠಕ್ಕೋಡ, ಉಮೇಶ ಬನಸೋಡೆ, ಎಂ. ವೈ. ಮೇಲಿನಮನಿ, ರಾಜ್ ಅಹ್ಮದ ಕರಜಗಿ, ಶೇಖರ ರಾಠೋಡ, ಬಸಯ್ಯ ಹಿರೇಮಠ. ಜಿಲ್ಲಾ ಗಣಕಯಂತ್ರ ಘಟಕದ ಸಿಬ್ಬಂದಿಯಾದ ಸುನೀಲ ಗೌಳಿ, ಗುಂಡು ಗಿರಣಿವಡ್ಡರ, ಎಂ. ಎ. ಬಾಗವಾನ, ಜಬ್ಬಾರ ಇಲಕಲ್ ಅವರಿಗೆ ಬಹುಮಾನ ಘೋಷಣೆ ಮಾಡಿದ್ದಾರೆ.
ವಂಚಕರ ಬಗ್ಗೆ ಎಚ್ಚರ ವಹಿಸಲು ಎಸ್ಪಿ ಸೂಚನೆ
ವಂಚಕರು RAT(Remote access tool) ಗಳ ಸಹಾಯದಿಂದ APK file ಅಥವಾ App ಸಿದ್ಧಪಡಿಸಿ, what’sApp ಅಥವಾ text message ಮುಖಾಂತರ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗಳಿಗೆ ಕಳುಹಿಸಿಕೊಡುತ್ತಾರೆ. ಅದನ್ನು ಓಪನ್ ಮಾಡಿದಾಗ automatically install ಅಗಿ ಸಾರ್ವಜನಿಕರಿಗೆ ಬರುವ ಎಲ್ಲಾ text message ಗಳು ವಂಚಕರ ಮೊಬೈಲ್ ಗಳಿಗೆ ಸ್ವಯಂ ಚಾಲಿತವಾಗಿ forwarding ಆಗುತ್ತವೆ. ಆ ಮೂಲಕ ವಂಚಕರು ಸುಲಭವಾಗಿ OTP ಪಡೆದುಕೊಂಡು ಸಾರ್ವಜನಿಕರ ಖಾತೆಗಳಿಗೆ Internet mobile banking services ಗಳನ್ನು ಅಳವಡಿಸಿಕೊಂಡು ಕ್ಷಣ ಮಾತ್ರದಲ್ಲಿ ಸಾರ್ವಜನಿಕರ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಾರೆ. ಕಳೆದ ಮೂರು ದಿನಗಳಿಂದ ಇಂಥ ಪ್ರಕರಣಗಳು ವರದಿಯಾಗುತ್ತಿವೆ. ಈ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕವಾಗಿ ಅರಿವು ಮೂಡಿಸಲಾಗುತ್ತಿದೆ ಎಂದು ಎಸ್ಪಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.