ವಿಜಯಪುರ: ನಾರದ ಮುನಿಗಳು ಬುದ್ದಿವಾದದ ಮೂಲಕ ಲೋಕಾದ್ಧಾರ ಮಾಡಿದ ಮಹಾನ್ ದೇವ ಎಂದು ಡಾ. ಆಯುರ್ವೇದ ವೈದ್ಯ ಡಾ. ಸಂಜೀವ ಜೋಶಿ ಹೇಳಿದ್ದಾರೆ.
ಮಂಥನ ವಿಜಯಪುರ ಚಿಂತಕರ ಚಾವಡಿ ಆದ್ಯ ಪತ್ರಕರ್ತ ದೇವಋಷಿ ನಾರದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾರದ ಮುನಿಗಳು ಧೃವ ಒಂದು ತಾರೆಯಾಗಲು, ಪ್ರಹ್ಲಾದ ಭಕ್ತ ಪ್ರಹ್ಲಾದನಾಗಲು ಪ್ರೇರಣೆಯಾಗಿದ್ದಾರೆ. ಅಷ್ಟೇ ಅಲ್ಲ, ಅನೇಕರ ಬದುಕನ್ನೇ ಉದ್ಧಾರ ಮಾಡಿದ್ದಾರೆ. ನಾರದ ಮುನಿ ಎಂದರೆ ಈ ವಿಷಯ ಅಲ್ಲಿಗೆ, ಅಲ್ಲಿನ ವಿಷಯ ಇಲ್ಲಿಗೆ ಹೇಳುತ್ತಾರೆ ಎಂಬುದು ಪ್ರಚಲಿತದಲ್ಲಿದೆ. ಆದರೆ ಅವರು ಬುದ್ದಿವಾದದ ಮೂಲಕ ಲೋಕೋದ್ದಾರ ಮಾಡಿದ್ದಾರೆ. ಧೃವ ಕಾಡಿನಲ್ಲಿ ಅಲೆದಾಡುತ್ತಿರುವಾಗ ಓಂ ನಮೋ ಭಗವತೇ ವಾಸುದೇವಾಯಃ ನಮಃ ಎಂಬ ಕಾರಣ ಆತ ಧೃವತಾರೆಯಾಗಲು ಕಾರಣವಾಯಿತು. ಅದೇ ರೀತಿ ಪ್ರಹ್ಲಾದನಲ್ಲಿ ಅದಮ್ಯ ಭಕ್ತಿ ಪ್ರವಹಿಸುವಂತೆ ಮಾಡಿ ಅವನನ್ನು ಭಕ್ತ ಪ್ರಹ್ಲಾದನನ್ನಾಗಿ ಮಾಡಿದ್ದಾರೆ ಎಂದು ಅವರು ಹೇಳಿದರು.
ನಾರದರು ಧರ್ಮದ ಪರವಾಗಿದ್ದರು, ನದಿ, ಗಿಡಮರಗಳಂತೆ ನಾರದರು ತಮಗಾಗಿ ಎಂದೂ ಬದುಕಲಿಲ್ಲ. ಗಾಲಬ ಋಷಿಗಳು ಸೂರ್ಯ ನಮಸ್ಕಾರ ಮಾಡುವ ಸಂದರ್ಭದಲ್ಲಿ ಗಂಧರ್ವನೋರ್ವ ತಾಂಬೂಲ ತಿಂದು ಅದರ ಉಗುಳು ಋಷಿಗಳ ಪವಿತ್ರ ಅಂಜನಿಯಲ್ಲಿ ಬೀಳುತ್ತದೆ. ಆಗ ಋಷಿಗಳು ಈ ವಿಷಯವನ್ನು ಕೃಷ್ಣನ ಗಮನಕ್ಕೆ ತರುತ್ತಾರೆ. ಈ ವಿಷಯವಾಗಿ ಗಂದರ್ವ ಪಶ್ಚಾತ್ತಾಪ ಪಡುವುದು ಗೊತ್ತಾಗುತ್ತದೆ. ನಾರದರು ಉಪಾಯದ ಮೂಲಕ ದ್ರೌಪದಿಗೆ ಆ ಗಂಧರ್ವನಿಗೆ ಅಭಯ ನೀಡುವಲ್ಲಿ ಯಶಸ್ವಿಯಾಗುತ್ತಾರೆ. ಈ ರೀತಿ ಅವರು ಅನೇಕರಿಗೆ ಶಾಪಮುಕ್ತರನ್ನಾಗಿ ಮಾಡಲು ನೆರವಾಗಿದ್ದಾರೆ. ಕಂಸನಂಥ ರಾಕ್ಷಸನ ಪಾಪದ ಕೊಡ ತುಂಬಲಿ. ಆತ ಕೂಡ ನಾರಾಯಣನ ಪಾದ ಸೇರಲಿ ಎಂಬ ಆಶಯ ನಾರದ ಮುನಿಯಲ್ಲಿತ್ತು. ನಾರದ ಮುನಿಗಳ ಜೀವನ ಅಧ್ಯಯನ ಮಾಡಿ ಅವರ ಶ್ರೇಷ್ಠ ತತ್ವಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಅವರು ಹೇಳಿದರು.
ಕಾನಿಪ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಟಿ. ಚೂರಿ ಮಾತನಾಡಿ, ನಾರದ ಮುನಿಗಳು ಭೂಮಿ, ಪಾತಾಳ, ಸ್ವರ್ಗಲೋಕ ಸೇರಿದಂತೆ ಒಂದು ರೀತಿ ಸರ್ವವ್ಯಾಪಿಯಾಗಿ ವರದಿಗಾಗರರಾಗಿದ್ದರು. ತ್ರಿಲೋಕದ ಸುವಾರ್ತೆ ನೀಡುತ್ತಿದ್ದ ಅವರು ಓರ್ವ ಶ್ರೇಷ್ಠ ಮತ್ತು ಆದ್ಯ ಪರ್ತಕರ್ತರಾಗಿದ್ದರು. ಮನುಕುಲಕ್ಕೆ ಜ್ಞಾನ ಕೊಡುವ ಶ್ರೇಷ್ಠ ವ್ಯಕ್ತಿಯಾಗಿದ್ದ ಅವರು, 64 ವಿದ್ಯೆಗಳಲ್ಲಿ ಪಾರಂಗತವಾಗಿದ್ದರು ಎಂದು ಹೇಳಿದರು.
ಇದಕ್ಕೂ ಮುನ್ನ ನಾರದ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು
ಈ ಸಂದರ್ಬದಲ್ಲಿ ಪತ್ರಕರ್ತರಾದ ವಾಸುದೇವ ಹೇರಕಲ, ಆರ್‌ಎಸ್‌ಎಸ್ ಮುಖಂಡ ಸಂಕೇತ ಬಗಲಿ, ಸಂಗನಗೌಡ ಪಾಟೀಲ, ರಘೋತ್ತಮ ಅರ್ಜುಣಗಿ, ರಂಜೀತ ರಜಪೂತ, ಅಕ್ಷಯ ಪಶ್ಚಾಪೂರ, ಶ್ರೀನಿವಾಸ ಗುಜ್ರಾಲ, ಸಂತೋಷ ಕಳ್ಳಿಗುಡ್ಡ, ವಿನೋದಕುಮಾರ ಮಣೂರ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.