ವಿಜಯಪುರ: ಜಿಲ್ಲಾಸ್ಪತ್ರೆಗೆ ಶನಿವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ ನೀಡಿ ಆಸ್ಪತ್ರೆಯ ಕಾರ್ಯವೈಖರಿ ಹಾಗೂ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ವೈದ್ಯರು ಹಾಗೂ ರೋಗಿಗಳಿಂದ ಆಸ್ಪತ್ರೆಯ ಮಾಹಿತಿ ಪಡೆದುಕೊಂಡರು.
ಒಪಿಡಿ, ಆಪರೇಶನ್ ಥೀಯೆಟರ್, ಚಿಕ್ಕಮಕ್ಕಳ ವಿಭಾಗ, ಮೆಡಿಸಿನ್ ವ್ಯವಸ್ಥೆ, ಸರ್ಜರಿ ವಿಭಾಗ, ಅರ್ಥೋಪೆಡಿಸ್, ಕಣ್ಣಿನ ವಿಭಾಗ, ಇಎನ್‌ಟಿ ವಿಭಾಗ, ಪ್ರಯೋಗಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಲ್ಲಿನ ಸ್ವಚ್ಚತೆ ಹಾಗೂ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಅವರು, ಮಕ್ಕಳ ವಿಭಾಗ, ಹೆರಿಗೆ ವಿಭಾಗಗಳಲ್ಲಿ ಕಷ್ಟಕರವಾದ ಚಿಕಿತ್ಸೆಗಳನ್ನು ಮಾಡಿದ ಹಾಗೂ ಪರಿಹರಿಸಿದ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು.
ಹೊಸದಾಗಿ ನಿರ್ಮಾಣವಾಗುತ್ತಿರುವ 250 ಹಾಸಿಗೆಯುಳ್ಳ ಆಸ್ಪತ್ರೆಗೆ ಭೇಟಿ ನೀಡಿ ಆದಷ್ಟು ಬೇಗ ನಿರ್ಮಾಣವನ್ನು ಪೂರ್ಣಗೊಳಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿರುವ ಡಿಎನ್‌ಬಿಯ ತರಬೇತಿಯಲ್ಲಿ 35 ಜನ ವಿದ್ಯಾರ್ಥಿಗಳಿದ್ದು, ಅವರಿಗೆ ಹಾಸ್ಟೇಲ್ ವ್ಯವಸ್ಥೆ ಮಾಡಬೇಕು. ಹೊರ ರೋಗಿಗಳ ವಿಭಾಗದಲ್ಲಿ ಸರತಿ ಸಾಲನ್ನು ತಪ್ಪಿಸಲು ಕ್ಯೂಆರ್ ಕೋಡ್ ಮೂಲಕ ಅಭಾ ಆ್ಯಪ್ ಮೂಲಕ ನೋಂದಣಿ ಮಾಡುವ ಕಾರ್ಯವೈಖರಿಯನ್ನು ಪರೀಶೀಲಿಸಿ ಸ್ವತಹ ಕ್ಯೂಆರ್ ಕೋಡ್ ಸ್ಕಾö್ಯನ್ ಮಾಡಿ ಅದರ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಿದರು.
ಜಿಲ್ಲಾಸ್ಪತ್ರೆಯಲ್ಲಿದೆ ಗಂಟೆಗೆ 500 ರೊಟ್ಟಿ ಮಾಡುವ ಯಂತ್ರ ಪರಿಶೀಲನೆ
ಜಿಲ್ಲಾಸ್ಪತ್ರೆಯಲ್ಲಿರುವ ಅಡುಗೆ ಕೋಣೆಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ಪಡೆದರು. ಅಲ್ಲದೇ, ಅಲ್ಲಿ ಹೊಸದಾಗಿ ರೊಟ್ಟಿ ಮಾಡುವ ಯಂತ್ರವನ್ನು ವೀಕ್ಷಿಸಿದರು. ಈ ಯಂತ್ರವು ಗಂಟೆಗೆ 500 ರೊಟ್ಟಿಗಳನ್ನು ಮಾಡುತ್ತದೆ. ಈ ಯಂತ್ರವನ್ನು ಆಸ್ಪತ್ರೆಯ ವೈದ್ಯರು ಮತ್ತು ಕೆಲವು ಎನ್‌ಜಿಒಗಳ ಸಹಕಾರದಲ್ಲಿ ಖರೀದಿ ಮಾಡಿದ್ದು, ಇದರಿಂದ ಆಸ್ಪತ್ರೆಗೆ ಧಾಖಲಾಗುವ ಒಳರೋಗಿಗಳ ಊಟೋಪಚಾರದ ವ್ಯವಸ್ಥೆಗಾಗಿ ನಿರ್ಮಿಸಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವ್ಯದ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.