ವಿಜಯಪುರ: ಇಂಡಿ ತಾಲೂಕಿನ ತಡವಲಗಾ ಕೆರೆಗೆ ನೀರು ಹರಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ರೈತರು ನಡೆಸಿದ ಎರಡು ದಿನಗಳ ಅಹೋರಾತ್ರಿ ಹೋರಾಟಕ್ಕೆ ಫಲ ಸಿಕ್ಕಿದೆ. ಅನ್ನದಾತರ ಹೋರಾಟಕ್ಕೆ ಮಣಿದ ಅಧಿಕಾರಿಗಳು ಕೊನೆಗೂ ತಡವಲಗಾ ಕೆರೆಗೆ ನೀರು ಹರಿಸಿದ್ದು, ರೈತರು ಹೋರಾಟವನ್ನು ಹಿಂಪಡೆದಿದ್ದಾರೆ.
ತಡವಲಾಗ ಕೆರೆಗೆ ನೀರು ಹರಿಸಿ ಈ ಭಾಗದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ಭೀಮಸೇನ ಕೋಕರೆ ನೇತೃತ್ವದಲ್ಲಿ ರೈತರು ಇಂಡಿ ತಾಲೂಕಿನ ತಡವಲಗಾ ಹತ್ತಿರ ಇರುವ ಜೋಡು ಗುಡಿಯ ಹತ್ತಿರ ಮೇ 24ರಿಂದ ಧರಣಿ ನಡೆಸಿದ್ದರು. ಆದರೂ, ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ರಸ್ತೆ ತಡೆ ಸೇರಿದಂತೆ ಹೋರಾಟವನ್ನು ತೀವ್ರಗೊಳಿಸಿದ್ದರು.
ರೈತರ ಹೋರಾಟಕ್ಕೆ ಫಲ ಸಿಕ್ಕಿದ್ದು, ಅಧಿಕಾರಿಗಳು ಕೊನೆಗೂ ಕೆರೆಗೆ ನೀರು ಹರಿಸಿದ್ದಾರೆ. ಈ ಕೆರೆಗೆ ನೀರು ಹರಿದು ಬಂದಿರುವುದಕ್ಕೆ ಭಾರತೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ಭೀಮಸೇನ ಎಂ. ಕೋಕರೆ, ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ ಡೋಮನಾಳ, ಉಪಾಧ್ಯಕ್ಷ ಗುರುನಾಥ ಬಗಲಿ, ಚಿದಾನಂದ ಮದರಿ, ಚನ್ನಪ್ಪ ಮಿರಗಿ, ವಿಠೋಬಾ ಹುಣಶ್ಯಾಳ, ಮಲ್ಲಪ್ಪ ನೇಕಾರ, ಮಹಾದೇವ ಸುದಾಮ, ಈರಪ್ಪ ಗೋಟ್ಯಾಳ, ಸುಭಾಷ ಗೊಳ್ಳಗಿ ಸೇರಿದಂತೆ ನಾನಾ ರೈತ ಮುಖಂಡರು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಇದಕ್ಕೆ ನೀರು ಹರಿಸಲು ಕ್ರಮ ಕೈಗೊಂಡ ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ, ಜಿಲ್ಲಾಡಳಿತ ಹಾಗೂ ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಅಲ್ಲದೇ, ಈ ಬಾರಿ ಮುಂಗಾರಿ ಹಂಗಾಮಿನಲ್ಲಿಯೇ ಎಲ್ಲ ಕೆರೆಗಳನ್ನು ತುಂಬಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದಾರೆ.