ಭೂಹಗರಣ ಸಿಓಡಿ ತನಿಖೆಗೆ ವಹಿಸಿ- ಸಚಿವ ಎಂ. ಬಿ. ಪಾಟೀಲ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿಿ

ವಿಜಯಪುರ ಜಿಲ್ಲೆಯಲ್ಲಿ ನಡೆದಿರುವ ಭೂ ಹಗರಣ ಕುರಿತು ಸಿಓಡಿ ತನಿಖೆ ನಡೆಸುವಂತೆ ಆಗ್ರಹಿಸಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅಪ್ಪು ಪಟ್ಟಣಶೆಟ್ಟಿ, ತಮ್ಮ ಬೇಡಿಕೆಗೆ ಸ್ಪಂದಿಸಿರುವ ಸಚಿವರು ತಾವೂ ಕೂಡ ಈ ನಿಟ್ಟಿನಲ್ಲಿ ಸರಕಾರಕ್ಕೆ ಮನವರಿಗೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ತಾವು ಸಚಿವರನ್ನು ಭೇಟಿಯಾದ ಸಂದರ್ಭದಲ್ಲಿ ವಿಜಯಪುರ ನಗರದಲ್ಲಿ ನಕಲಿ ಭೂ-ದಾಖಲೆ ಸೃಷ್ಟಿ ಮಾಡಿ ಜನರನ್ನು ದೊಡ್ಡ ಪ್ರಮಾಣದಲ್ಲಿ ವಂಚನೆ ಮಾಡುತ್ತಿರುವ ಅನೇಕ ಪ್ರಕರಣಗಳು ನಡೆಯುತ್ತಿವೆ.  ಇದರಿಂದ ಬಡಜನರು ನಿತ್ಯ ಶೋಷಣೆಗೆ ಒಳಗಾಗುತ್ತಿದ್ದಾರೆ.  ಜಮೀನು ಮತ್ತು ನಿವೇಶನಗಳ ಖೊಟ್ಟಿ ದಾಖಲೆ ಸೃಷ್ಟಿಸಿ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಖರೀದಿ ಮತ್ತು ಮಾರಾಟ ಮಾಡುವ ಕಾನೂನು ಬಾಹಿರ ಕೃತ್ಯಗಳು ಅವ್ಯಾಹತವಾಗಿ ನಡೆದಿವೆ.  ಜನರನ್ನು ವಂಚಿಸುವ ವ್ಯವಸ್ಥಿತ ಜಾಲ ಜಿಲ್ಲೆಯಲ್ಲಿ ಹುಟ್ಟಿಕೊಂಡಿದೆ. ಈ ಜಾಲಕ್ಕೆ ಈಗಾಗಲೇ ನೂರಾರು ಜನ ಹಣ-ಆಸ್ತಿ ಕಳೆದುಕೊಂಡಿದ್ದಾರೆ.

ಇಂಥ ವಂಚಕರ ಜಾಲ ವಿಜಯಪುರ ಜಿಲ್ಲೆ ಹಾಗೂ ನಗರದಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಈಗಾಗಲೇ ಸಾಕಷ್ಟು ಬಡ ಜನರು ಮೋಸ ಹೋಗಿದ್ದಾರೆ.  ಕಷ್ಟಪಟ್ಟು ದುಡಿದು, ಸಾಲ-ಸೋಲ ಮಾಡಿ ನಿವೇಶನ, ಜಮೀನು ಖರೀದಿ ಮಾಡುವ ಬಡವರು, ಈ ರೀತಿಯ ವಂಚನೆಗೆ ಒಳಗಾಗಿ ತಮ್ಮ ಆಸ್ತಿ ಕಳೆದುಕೊಂಡು ಕಷ್ಟ ಅನುಭವಿಸುತ್ತಿದ್ದಾರೆ.  ಈ ಜಾಲಕ್ಕೆ ಸಿಲುಕಿ ವಂಚನೆಗೊಳಗಾದವರು ಮತ್ತು ಜಮೀನು ಕಳೆದುಕೊಂಡವರು ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವ ಪ್ರಯೋಜನವೂ ಆಗುತ್ತಿಲ್ಲ.  ಈಗಾಗಲೇ ಎಸ್ಪಿ ಅವರನ್ನು ಭೇಟಿ ಮಾಡಿ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಒತ್ತಾಯಿಸಿದ್ದೇನೆ.  ಹಲವಾರು ಬಾರಿ ಪತ್ರಿಕಾಗೋಷ್ಠಿ ನಡೆಸಿ ಒತ್ತಾಯಿಸಿದ್ದೇನೆ.

ತಾವು ಕೂಡ ಈ ಹಿಂದೆ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ್ದೀರಿ.  ಹೀಗಾಗಿ ಸರಕಾರದ ಮೇಲೆ ಒತ್ತಡ ಹೇರಿ ಈ ರೀತಿ ಪ್ರಕರಣಗಳ ತನಿಖೆ ನಡೆಸಿ, ಈ ರೀತಿ ಪ್ರಕರಣ ನಡೆಯದಂತೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲು ಸರಕಾರದ ಗಮನ ಸೆಳೆಯಬೇಕು ಎಂದು ಅಪ್ಪು ಪಟ್ಟಣಶೆಟ್ಟಿ ಅವರು ಸಚಿವ ಎಂ. ಬಿ. ಪಾಟೀಲ ಅವರನ್ನು ಒತ್ತಾಯಿಸಿದೆ.  ಆಗ ಸಚಿವರು ತಾವು ಕೂಡ ಈ ನಿಟ್ಟಿನಲ್ಲಿ ಸರಕಾರಕ್ಕೆ ಮನವಿ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಅಪ್ಪು ಪಟ್ಟಣಶೆಟ್ಟಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಜಗದೀಶ ಮುಚ್ಚಂಡಿ ಉಪಸ್ಥಿತರಿದ್ದರು

Leave a Reply

ಹೊಸ ಪೋಸ್ಟ್‌