ಬೆಂಗಳೂರು: ವಿಜಯಪುರ ನಗರ ಮತ್ತು ಜಿಲ್ಲೆಯಲ್ಲಿ ನಕಲಿ ಭೂದಾಖಲೆ ಸೃಷ್ಟಿಸಿ ಜನರನ್ನು ವಂಚಿಸುತ್ತಿರುವ ಭೂಮಾಫಿಯಾ ಮಟ್ಟ ಹಾಕಲು ಈ ಪ್ರಕರಣದ ಸಮಗ್ರ ತನಿಖೆಯನ್ನು ಸಿಓಡಿಗೆ ವಹಿಸುವಂತೆ ಆಗ್ರಹಿಸಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರು ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ಸಿಎಂ ಭೇಟಿ ಮಾಡಿದ ಅವರು, ಜಿಲ್ಲೆಯಲ್ಲಿ ಭೂ ಅಕ್ರಮಗಳ ಕುರಿತು ಮುಖ್ಯಮಂತ್ರಿಗಳಿಗೆ ಸುದೀರ್ಘವಾಗಿ ಮಾಹಿತಿ ನೀಡಿದರು.
ವಿಜಯಪುರ ನಗರ ಮತ್ತು ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಭೂದಾಖಲೆ ಸೃಷ್ಟಿಸಿ ಜಿಲ್ಲೆಯಲ್ಲಿ ಭೂಮಿ ಮತ್ತು ನಿವೇಶನ ಮಾರಾಟ ಮಾಡಿರುವ ನೂರಾರು ಪ್ರಕರಣಗಳು ನಡೆದಿವೆ. ಕೆಲವೊಂದು ಪ್ರಕರಣಗಳು ಮಾತ್ರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಇನ್ನೂ ಹಲವಾರು ಪ್ರಕರಣಗಳು ಇತ್ಯರ್ಥವಾಗದೆ ಉಳಿದಿವೆ. ಇಂಥ ಪ್ರಕರಣಗಳಿಗೆ ನೂರಾರು ಜನ ತಮ್ಮ ಜಮೀನು ಮತ್ತು ನಿವೇಶನಗಳು ಕಳೆದುಕೊಂಡಿದ್ದಾರೆ. ಖೋಟ್ಟಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿರುವ ಪ್ರಕರಣಗಳು ನನ್ನ ಗಮನಕ್ಕೆ ಬಂದ ನಂತರ ಹಲವಾರು ಬಾರಿ ಪತ್ರಿಕಾಗೋಷ್ಠಿ ನಡೆಸಿದ್ದೇನೆ. ಅಲ್ಲದೇ, ಈ ಹಿಂದಿನ ಸರಕಾರದ ಗಮನಕ್ಕೂ ತಂದಿದ್ದೇನೆ. ಆದರೂ ಕೂಡ ಈವರೆಗೆ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ಈ ಜಾಲ ವ್ಯವಸ್ಥಿತವಾಗಿ ವ್ಯಾಪಿಸಿರುವುದರಿಂದ ಇದರ ತನಿಖೆಯನ್ನು ಸಿಓಡಿ ವಹಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಪ್ರಕರಣದಲ್ಲಿ ಭೂಮಿ ಮತ್ತು ನಿವೇಶನಗಳನ್ನು ಕಳೆದುಕೊಂಡವರಿಗೆ ನ್ಯಾಯ ಒದಗಿಸಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಮೂಲ ಮಾಲಿಕರಿಗೆ ಅವರ ಜಮೀನು ಮತ್ತು ನಿವೇಶನಗಳನ್ನು ಹಿಂದಿರುಗಿಸಬೇಕು ಎಂದು ಅಪ್ಪು ಪಟ್ಟಣಶೆಟ್ಟಿ ಸಿಎಂ ಎಸ್. ಸಿದ್ಧಾರಮಯ್ಯ ಅವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಜಗದೀಶ ಮುಚ್ಚಂಡಿ ಉಪಸ್ಥಿತರಿದ್ದರು.