ವಿಜಯಪುರ: ವೋಟು ಹಾಕಿದ ಮತದಾರರು, ಕೆಲಸ ಮಾಡಿದ ಕಾರ್ಯಕರ್ತರು, ಸುಸೂತ್ರವಾಗಿ ಚುನಾವಣೆ ನಡೆಸಿದ ಅಧಿಕಾರಿಗಳಿಗೆ ಧನ್ಯವಾದ ಹೇಳುವುದಾಗಿ ಸತತ ಏಳನೇ ಬಾರಿಗೆ ಸಂಸದರಾಗಿ ಆಯ್ಗೆಯಾಗಿರುವ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಮಂಗಳವಾರ ಸಂಜೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಂದ ಗೆಲುವಿನ ಪ್ರಮಾಣ ಪತ್ರ ಸ್ವೀಕರಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನನ್ನ ಪಕ್ಷದ ಕಾರ್ಯಕರ್ತರು ಉರಿ ಬಿಸಿಲಿನಲ್ಲಿ ಚಪ್ಪಲಿ ಹರಿದುಕೊಂಡು, ಅಂಗಿ ಹರಿದುಕೊಂಡು ಶ್ರಮಪಟ್ಟು ನನ್ನನ್ನು ಗೆಲ್ಲಿಸಿದ್ದಾರೆ. ನಾನು ಅವರ ಎಷ್ಟೇ ಸೇವೆ ಮಾಡಿದರೂ ಅದು ಕಡಿಮೆಯೇ ಎಂದು ಅವರು ಮಾರ್ಮಿಕವಾಗಿ ಹೇಳಿದರು.
ಗ್ಯಾರಂಟಿ ಯೋಜನೆಗಳು ಕೈ ಹಿಡಿಯುತ್ತವೆ ಎಂದು ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ಈ ಚುನಾವಣೆ ಫಲಿತಾಂಶದಿಂದ ನಿರಾಸೆಯಾಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಸದರು, ಗ್ಯಾರಂಟಿ ಯೋಜನೆಗಳು ಸ್ವಲ್ಪ ಮಟ್ಟಿಗೆ ಕೆಲಸ ಮಾಡಿವೆ. ಏಕೆಂದರೆ, ಒಂದು ವೇಳೆ ಗ್ಯಾರಂಟಿ ಯೋಜನೆಗಳು ಕೈ ಹಿಡಿಯದಿದ್ದರೆ ಕಾಂಗ್ರೆಸ್ ರಾಜ್ಯದಲ್ಲಿ ಕೇವಲ ನಾಲ್ಕೈದು ಮತಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುತ್ತಿತ್ತು. ಸ್ವಲ್ಪ ಮಟ್ಟಿಗಾದರೂ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈ ಹಿಡಿದಿವೆ ಎಂದು ಸಂಸದರು ತಿಳಿಸಿದರು.
ವಿಜಯಪುರದಲ್ಲಿ ತಮ್ಮ ಗೆಲುವಿನ ಅಂತರ ಕಡಿಮೆಯಾಗಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪರಿಣಾಮ ಹೀಗಾಗಿದೆ. ಈಗ ಜನ ನನ್ನನ್ನು ವಿಜಯಪುರದಿಂದ ಸತತ ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆ ಮಾಡಿದ್ದಾರೆ. ಜನರು ಹೇಳಿದಂತೆ ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ನನ್ನದೇ ಆದ ಯಾವುದೇ ಅಜೆಂಡಾ ಇಲ್ಲ ಮತಕ್ಷೇತ್ರದ ಜನರ ನಿರೀಕ್ಷೆಗೆ ತಕ್ಕಂತೆ ಕೇಂದ್ರದಿಂದ ಆಗುವ ಕೆಲಸಗಳನ್ನು ಮಾಡುತ್ತೇನೆ ಎಂದು ಅವರು ಹೇಳಿದರು.
ಕೇಂದ್ರದಲ್ಲಿ ಸಚಿವ ಸಂಪುಟದಲ್ಲಿ ಸಚಿವನಾಗುವ ನಿರೀಕ್ಷೆ ಮಾಡಲ್ಲ. ನಾನೆಂದೂ ಮಂತ್ರಿಯಾಗಲು ಬಯಸಿಲ್ಲ. ಜನರ ಸೇವೆ ಮಾಡುವ ಗುರಿಯೊಂದಿಗೆ ಕಾಯಕ ಮಾಡುತ್ತೇನೆ. ಸಚಿವ ಸ್ಥಾನ ಕೊಡುವುದು, ಹೈಕಮಾಂಡಿಗೆ ಬಿಡುವುದು ಅವರಿಗೆ ಬಿಟ್ಟ ವಿಚಾರ. ದೇಶದ ಫಲಿತಾಂಶದ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಎನ್ ಡಿ ಎ ಮೈತ್ರಿಕೂಟ ಉತ್ತಮ ಸಾಧನೆ ಮಾಡಿದೆ. ಆದರೆ ನಾವು ಇಟ್ಟುಕೊಂಡಿದ್ದ ಅಪೇಕ್ಷೆಯಂತೆ ಫಲಿತಾಂಶ ಬಂದಿಲ್ಲ ಎಂದು ರಮೇಶ ಜಿಗಜಿಣಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ ಮಾಜಿ ಶಾಸಕ ಅರುಣ ಶಹಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ ಸೇರಿದಂತೆ ಬಿಜೆಪಿಯ ನಾನಾ ಮುಖಂಡರು ಉಪಸ್ಥಿತರಿದ್ದರು.
ಸಂಸದ ರಮೇಶ ಜಿಗಜಿಣಗಿ ಈ ಬಾರಿಯೂ ಗೆಲ್ಲುವ ಮೂಲಕ ಸತತ ಏಳನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದು, ಬಿಜೆಪಿಯಲ್ಲಿ ಅತೀ ಹಿರಿಯ ಸಂಸದರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ವಿಜಯಪುರ ಎಸ್. ಸಿ. ಮೀಸಲು ಕ್ಷೇತ್ರದಿಂದ ಸತತ ನಾಲ್ಕು ಬಾರಿ ಮತ್ತು ಈ ಮುಂಚೆ ಚಿಕ್ಕೋಡಿ ಎಸ್. ಸಿ. ಮೀಸಲು ಕ್ಷೇತ್ರದಿಂದ ಸತತ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅವರು, ಈವರೆಗೆ ವಿಧಾನ ಸಭೆ ಮತ್ತು ಲೋಕಸಭೆಗಳಿಗೆ ಒಟ್ಟು 13 ಚುನಾವಣೆಗಳನ್ನು ಎದುರಿಸಿದ್ದಾರೆ. ಇವುಗಳಲ್ಲಿ ವಿಧಾನ ಸಭೆಗೆ ಸ್ಪರ್ಧಿಸಿದ್ದ ಆರರಲ್ಲಿ ಒಂದು ಬಾರಿ ಸೋತಿದ್ದು, ಉಳಿದ ಐದು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ. ಅಷ್ಟೇ ಅಲ್ಲ, ಲೋಕಸಭೆಗೆ ಸ್ಪರ್ಧಿಸಿದ ಎಲ್ಲ ಏಳು ಚುನಾವಣೆಗಳಲ್ಲಿ ರಮೇಶ ಜಿಗಜಿಣಗಿ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ.