ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನವೇ ಅಂತಿಮ- ಸಂಗಮೇಶ ಬಬಲೇಶ್ವರ

ವಿಜಯಪುರ: ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನವೇ ಅಂತಿಮ.  ಅದನ್ನು ಎಲ್ಲರೂ ಗೌರವಿಸಲೇಬೇಕು.  ವಿಜಯಪುರದಲ್ಲಿ ಪ್ರೊ. ರಾಜು ಆಲಗೂರ ಅವರ ಸೋಲನ್ನು ನಿರೀಕ್ಷಿಸಿರಲಿಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅತ್ಯುತ್ತಮ ಸಾಧನೆ ತೋರಿದೆ.  ಆದರೆ, ನಿರೀಕ್ಷಿತ ಫಲಿತಾಂಶ ಬರದಿರುವುದು ಬೇಸರ ಮೂಡಿಸಿದೆ ಎಂದು ತಿಳಿಸಿದ್ದಾರೆ.

ವಿಜಯಪುರ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರವರ ಸೋಲನ್ನು ನಿರೀಕ್ಷಿಸಿರಲಿಲ್ಲ.  ಆದರೆ ಅವರಿಗೆ ಗಣನೀಯ ಪ್ರಮಾಣದಲ್ಲಿ ಮತದಾನ ಮಾಡಿದ ಮತದಾರರಿಗೆ ಪಕ್ಷದ ಪರವಾಗಿ ನಾನು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.  ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸೋತಿರಬಹುದು.  ಆದರೆ, ಅವರು ಸದಾ ಜನರೊಂದಿಗೆ ಬೆಳೆದು ಬಂದವರು.  ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮತ್ತು ಜಿಲ್ಲೆಯ ಶಾಸಕರು, ಪಕ್ಷದ ಮುಖಂಡರ ಜೊತೆಗೂಡಿ ಮತ್ತೆ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇವೆ.  ಇಂಡಿ ಮೈತ್ರಿಕೂಟ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಚೇತರಿಸಿಕೊಂಡಿರುವುದು ಭಾರತದ ಜನತೆ ಬದಲಾವಣೆಯನ್ನು ಬಯಸುತ್ತಿದ್ದಾರೆ ಎನ್ನುವುದರ ಪ್ರಬಲ ಮುನ್ಸೂಚನೆಯಾಗಿದೆ.  ಹೀಗಾಗಿ ನಮ್ಮ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ.  ಸದಾ ಜನರ ನೋವಿಗೆ ಸ್ಪಂದಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಅತ್ಯುತ್ತಮ ಕೆಲಸ ಮಾಡುತ್ತಿದೆ.  ನಾವು ಈ ತಾತ್ಕಾಲಿಕ ಸೋಲನ್ನು ಸವಾಲಾಗಿ ಸ್ವೀಕರಿಸಿ ನಿಷ್ಠೆಯಿಂದ ಪಕ್ಷದ ಕೆಲಸವನ್ನು ಮಾಡಿದರೆ ದೇಶದಲ್ಲಿ ಕಾಂಗ್ರೆಸ್ಸಿನ ವೈಭವದ ದಿನಗಳು ಮತ್ತು ಜನಪರ ಆಡಳಿತ ಮತ್ತೆ ಮರುಕಳಿಸಲಿದೆ ಎಂದು ಸಂಗಮೇಶ ಬಬಲೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌