ಮತದಾರರ ತೀರ್ಪನ್ನು ಒಪ್ಪುತ್ತೇವೆ- ಪ್ರೊ. ರಾಜು ಆಲಗೂರ ಪರ ಮತ ಹಾಕಿದವರಿಗೆ ಧನ್ಯವಾದಗಳು- ಸಚಿವ ಎಂ. ಬಿ. ಪಾಟೀಲ

ವಿಜಯಪುರ: ಪ್ರೊ. ರಾಜು ಆಲಗೂರ ಮತ್ತು ಕಾಂಗ್ರೆಸ್ ಪರ ಮತದಾನ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳುವುದಾಗಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ವಿಜಯಪುರದಲ್ಲಿ ಮಂಗಳವಾರ ಸಂಜೆ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಮತದಾರರು ನೀಡಿರುವ ತೀರ್ಪನ್ನು ಒಪ್ಪುತ್ತೇವೆ.  ಈ ಬಾರಿ ಚುನಾವಣೆಯಲ್ಲಿ ವಿಜಯಪುರದಲ್ಲಿ ನಾವು ಗೆಲ್ಲುವ ಬಲವಾದ ವಿಶ್ವಾಸವಿತ್ತು.  ಸಂಘಟಿತ ಪ್ರಯತ್ನ ಮಾಡಲಾಗಿತ್ತು.  ಎಲ್ಲ ಜಿ. ಪಂ. ವ್ಯಾಪ್ತಿವಾರು ಮತದಾರರನ್ನು ತಲುಪಿದ್ದೇವು.  ಇಷ್ಟಾದರೂ ಕೂಡ ಮತದರಾರು ನಮಗೆ ಆಶೀರ್ವಾದ ಮಾಡಿಲ್ಲ.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.

ಜಯಪುರ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಮತ್ತು ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ.  ಈ ಸೋಲಿನ ಪರಾಮರ್ಶೆಯನ್ನು ಮಾಡಲಾಗುವುದು.  ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಎಲ್ಲ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ. ನಾವು ಧೈರ್ಯದಿಂದ ಮುನ್ನಡೆಯುತ್ತೇವೆ.  ಪ್ರೊ. ರಾಜು ಆಲಗೂರ ಅವರಿಗೂ ಧೈರ್ಯ ತುಂಬಿದ್ದೇನೆ.  ಮುಂದೆಯೂ ನಾವು ಸಂಘಟಿತವಾಗಿ ನಡೆಯುತ್ತೇವೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ನಾವು 14 ಸ್ಥಾನಗಳ ನಿರೀಕ್ಷೆ ಹೊಂದಿದ್ದೇವು.  ಆದರೆ, ಐದು ಕಡಿಮೆ ಸೀಟುಗಳು ಬಂದಿವೆ.  ಎಲ್ಲ ಎಕ್ಸಿಟ್ ಪೋಲ್ ಗಳ ಸಮೀಕ್ಷೆ ಸುಳ್ಳಾಗಿದೆ.  ಸ್ವಂತ ಬಲದಿಂದ ಬಿಜೆಪಿ ಬಂದಿಲ್ಲ.  ಏನೆಲ್ಲ ಬೆಳವಣಿಗೆಗಳ ನಡೆಯುತ್ತವೆ ಎಂಬುದನ್ನು ಕಾದು ನೋಡೋಣ.  ಎಐಸಿಸಿ ಅಧ್ಯಕ್ಷರು, ಇಂಡಿ ಒಕ್ಕೂಟದ ಅಂಗ ಪಕ್ಷಗಳ ಎಲ್ಲ ನಾಯಕರು ಕೇಂದ್ರದ ವಿಚಾರಗಳನ್ನು ನಿರ್ಧರಿಸಲಿದ್ದಾರೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಫಲ ನೀಡುತ್ತವೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವು.  ಹೈದರಾಬಾದ ಕರ್ನಾಟಕದಲ್ಲಿ ಜನ ಒಪ್ಪಿದ್ದಾರೆ.  ಆದರೆ, ಮುಂಬೈ ಕರ್ನಾಟಕದಲ್ಲಿ ಹಿನ್ನೆಡೆಯಾಗಿದೆ.  ಗ್ಯಾರಂಟಿ ಯೋಜನೆಗಳು ಇಲ್ಲಿ ತಕ್ಕಮಟ್ಟಿಗೆ ಯಶಸ್ಸು ನೀಡಿಲ್ಲ.  ಈ ಕುರಿತು ಕೆಪಿಸಿಸಿ ಅಧ್ಯಕ್ಷರು, ಸಿಎಂ ಮತ್ತು ಪಕ್ಷದಲ್ಲಿ ಈ ಕುರಿತು ಪರಾಮರ್ಶೆ ಮಾಡಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ಕೇಂದ್ರದಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದಿಲ್ಲ.  240ರ ಗಡಿ ತಲುಪುವುದಿಲ್ಲ ಎಂದು ಬೆಂಗಳೂರು ಸೇರಿದಂತೆ ಎಲ್ಲ ಕಡೆ 10 ಬಾರಿ ಹೇಳಿದ್ದೇನೆ.  ಕಳೆದ ಬಾರಿ ಪುಲ್ವಾಮಾ ದಾಳಿ, ಬಾಲಾಕೋಟ ಮೇಲೆ ಸರ್ಜಿಕಲ್ ಸ್ಟ್ರೈಕ್ ನಂಥ ರಾಷ್ಟ್ರೀಯ ವಿಚಾರಗಳ ಹಿನ್ನೆಲೆಯಲ್ಲಿ ಮತದಾರರು ಬಿಜೆಪಿಯನ್ನು ಬೆಂಬಲಿಸಿದ ಪರಿಣಾಮ 300 ಸ್ಥಾನ ಪಡೆದಿದ್ದರು.  ಈ ಬಾರಿ ಆ ಪ್ರಮಾಣದಲ್ಲಿ ಮೋದಿ ಅಲೆ ಇರಲಿಲ್ಲ.  ನಾನು ಹೇಳಿದಂತೆ ಉತ್ತರ ಪ್ರದೇಶದಲ್ಲಿ 20ಕ್ಕಿಂತ ಹೆಚ್ಚಿನ ಸ್ಥಾನ ಕಳೆದುಕೊಂಡಿದ್ದಾರೆ.  ಮಹಾರಾಷ್ಟ್ರ, ರಾಜಸ್ಥಾನಗಳಲ್ಲಿಯೂ ನಾನು ಹೇಳಿದಂತೆ ಫಲಿತಾಂಶ ಬಂದಿದೆ ಎಂದು ಅವರು ತಿಳಿಸಿದರು.

ವಿಜಯಪುರ ಲೋಕಸಭೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ನಾವು ಸಂಘಟಿತವಾಗಿ ಬಹಳ ವ್ಯವಸ್ಥಿತವಾಗಿ ನಾವು ಪ್ರಚಾರ ಮಾಡಿದ್ದೇವು.  ಬೇರೆ ಲೋಕಸಭೆ ಕ್ಷೇತ್ರಗಳಿಗಿಂತ ಚೆನ್ನಾಗಿ ಕೆಲಸ ಮಾಡಿದ್ದೇವೆ.  ಸಿಎಂ, ಕೆಪಿಸಿಸಿ ಅಧ್ಯಕ್ಷರು, ಸಚಿವ ಮಹಾದೇವಪ್ಪ ಅವರು ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ನಾವು ಮಾಡಿದ ವ್ಯವಸ್ಥಿತ ಪ್ರಚಾರ ಮತ್ತು ರೂಪಿಸಿದ ಕಾರ್ಯತಂತ್ರಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.  ಆದರೆ, ಹಿನ್ನೆಡೆಗೆ ಕಾರಣಗಳ ಕುರಿತು ಪರಾಮರ್ಶೆ ಮಾಡುತ್ತೇವೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತು ಈ ಬಾರಿ ಲಿಂಗಾಯಿತರಿಗೆ ಅಧ್ಯಕ್ಷ ಸ್ಥಾನ ನೀಡುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಲೋಕಸಭೆ ಚುನಾವಣೆಯವರೆಗೆ ಕೆಪಿಸಿಸಿ ಅಧ್ಯಕ್ಷರು ಮುಂದುವರೆಯಲಿದ್ದಾರೆ ಎಂದು ಸರಕಾರ ರಚನೆ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ ಹೇಳಿದ್ದಾರೆ.  ಲೋಕಸಭೆ ಚುನಾವಣೆ ಬಳಿಕ ಹೊಸ ಅಧ್ಯಕ್ಷರು ನೇಮಕವಾಗಲಿದ್ದಾರೆ.  ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ.  ಈ ಹಿಂದೆ ನನಗೆ ಅವಕಾಶ ಒದಗಿ ಬಂದಿದ್ದರೂ ನಾನು ಒಪ್ಪಿಲ್ಲ.  ಪಕ್ಷ ಈ ನಿಟ್ಟಿನಲ್ಲಿ ನಿರ್ಧರಿಸುತ್ತದೆ.  ನಾನು ಆ ಸ್ಪರ್ಧೆಯಲ್ಲಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬೆಂಬಲಿತ ಅಭ್ಯರ್ಥಿಗಳು ಸೋತಿದ್ದಾರೆ ಎಂಬ ಮಾತುಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಧ್ಯಕ್ಷರ ಬೆಂಬಲಿತರು, ಅವರ ಇವರ ಬೆಂಬಲಿತರು ಸೋತಿದ್ದಾರೆ ಎಂಬುದು ಸುಳ್ಳು ಎಂದು ಎಂ. ಬಿ. ಪಾಟೀಲ ಸ್ಪಷ್ಟಪಡಿಸಿದರು.

Leave a Reply

ಹೊಸ ಪೋಸ್ಟ್‌