ಜ್ಞಾನದಾಹ: 83ನೇ ಇಳಿ ವಯಸ್ಸಿನಲ್ಲಿ 5ನೇ ಎಂ ಎ ಪರೀಕ್ಷೆ ಬರೆದ ಹಿರಿಯ ನಾಗರಿಕ- ಇವರು ಎಲ್ಲರಿಗೂ ಮಾದರಿ

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಜೆ. ಎಸ್. ಎಸ್. ಮಹಾವಿದ್ಯಾಲಯದಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(ಇಗ್ನೊ) ಕೇಂದ್ರ ಆಯೋಜಿಸಿರುವ ಎಂ. ಎ. ಇಂಗ್ಲಿಷ್ ಪರೀಕ್ಷೆಗೆ 83 ವರ್ಷ ಮತ್ತು 68 ವರ್ಷದ ಹಿರಿಯರು ಹಾಜರಾಗಿ ಪರೀಕ್ಷೆ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ. 

ಇಂದು ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ಇಂಗ್ಲಿಷ್ ಪರೀಕ್ಷೆ ನಡೆಯಿತು.  ಈ ವೇಳೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರಿನ 83 ವರ್ಷದ ನಿಂಗಯ್ಯ ಬಸಯ್ಯ ಒಡೆಯರ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿಯ 68 ವರ್ಷದ ಪಿ. ಎಂ. ಮಡಿವಾಳ ಹಾಗೂ ನಾಲ್ಕೈದು ವರ್ಷದಲ್ಲಿ ಸೇವಾ ನಿವೃತ್ತಿಯಾಗಲಿರುವ ಶಿವಮೊಗ್ಗದ 55 ವರ್ಷದ ಕಲಾ ಶಿಕ್ಷಕ ನಾಗನಗೌಡ ಎ. ಪಾಟೀಲ ಪರೀಕ್ಷೆ ಬರೆದು ಗಮನ ಸೆಳೆದರು.

ಈ ಪರೀಕ್ಷೆಯ ಕುರಿತು ಪ್ರತಿಕ್ರಿಯೆ ನೀಡಿದ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಸಹ- ಪ್ರಾಧ್ಯಾಪಕ ಮತ್ತು ಇಗ್ನೊ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಮಂಜುನಾಥ ಕೋರಿ ಮಾತನಾಡಿ, ನಮ್ಮ ಬಿ. ಎಲ್. ಡಿ. ಇ ಸಂಸ್ಥೆಯ ಜೆ. ಎಸ್. ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿರುವ ಇಗ್ನೋ ಕೇಂದ್ರದಲ್ಲಿ ಸಾಕಷ್ಟು ಜನ ಹಿರಿಯ ನಾಗರಿಕರು ಪರೀಕ್ಷೆ ಬರೆಯುತ್ತಿದ್ದಾರೆ.  ಯುವಕರಿಗೂ ಇವರು ಸ್ಪೂರ್ತಿಯಾಗಿದ್ದಾರೆ.  ಇಲ್ಲಿ ಎಲ್ಲ ಸೌಲಭ್ಯಗಳು ಲಭ್ಯವಿವೆ.  ಅತೀ ಕಡಿಮೆ ಖರ್ಚಿನಲ್ಲಿ ಪದವಿ, ಸ್ನಾತಕೋತ್ತರ ಪದವಿ, ಸರ್ಟಿಫಿಕೆಟ್ ಲಭ್ಯವಿವೆ.  ಬಾಹ್ಯ ಪರೀಕ್ಷೆ ಬರೆಯುವವರಿಗೆ ಉತ್ತಮ ವಾತಾವರಣವಿದೆ.  85 ವರ್ಷದ ಹಿರಿಯರು, 65 ವರ್ಷದ ಹಿರಿಯರು, 55 ವರ್ಷದ ಹಿರಿಯರು ಪರೀಕ್ಷೆ ಬರೆದಿದ್ದಾರೆ.  ನಿವೃತ್ತ ನೌಕರರು ಶಿಕ್ಷಣದ ಬಗ್ಗೆ ಆಸಕ್ತಿ ಹೊಂದಿ ಪರೀಕ್ಷೆ ಬರೆಯುತ್ತಿರುವುದು ನನಗೆ ಖುಷಿ ಎನಿಸುತ್ತಿದೆ.  ಈಗ ಇಂಗ್ಲಿಷ್ ಪರೀಕ್ಷೆಗೆ 25 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ತಿಳಿಸಿದರು.

ವಿಜಯಪುರ ಇಗ್ನೊ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ರವಿಕಾಂತ ಕಮಲೇಕರ, ಇಂದು ಪರೀಕ್ಷೆ ಆರಂಭವಾಗಿದ್ದು, ಜುಲೈ 15ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಇಲ್ಲಿ ಸರ್ಟಿಫಿಕೆಟ್ ಕೋರ್ಸ್ ನಿಂದ ಹಿಡಿದು, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಕೋರ್ಸುಗಳು ಲಭ್ಯವಿವೆ.  ಹಿರಿಯ ನಾಗರಿಕರೂ ಉತ್ಸಾಹದಿಂದ ಪರೀಕ್ಷೆ ಬರೆಯುತ್ತಿದ್ದಾರೆ.  ಉತ್ತರ ಕರ್ನಾಟಕದಲ್ಲಿ ನಾವು 12 ಜಿಲ್ಲೆಗಳು ಮತ್ತು ಮಹಾರಾಷ್ಟ್ರದ ಎರಡು ಜಿಲ್ಲೆಗಳು ನಮ್ಮ ಇಗ್ನೋ ಕೇಂದ್ರದ ವ್ಯಾಪ್ತಿಯಲ್ಲಿ ಬರುತ್ತವೆ.  ಉತ್ಸಾಹದಿಂದ ವಿದ್ಯಾರ್ಥಿಗಳು ಪಾಲ್ಗೋಳ್ಳುತ್ತಿರುವುದು ಗಮನಾರ್ಹವಾಗಿದೆ ಎಂದು ತಿಳಿಸಿದರು.

ವಿಜಯಪುರ ಜೆ.ಎಸ್.ಎಸ್. ಬಿ.ಎಡ್ ಕಾಲೇಜಿನ ಇಗ್ನೊ ಕೇಂದ್ರದಲ್ಲಿ ಪರೀಕ್ಷೆ ಬರೆದ ಹಿರಿಯ ನಾಗರಿಕರಾದ ನಿಂಗಯ್ಯ ಬಸಯ್ಯ ಒಡೆಯರ ಮತ್ತು ಪಿ. ಎಂ. ಮಡಿವಾಳ

83 ಇಳಿಯ ವಯಸ್ಸಿನಲ್ಲಿ ಪರೀಕ್ಷೆ ಬರೆಯುತ್ತಿರುವ ಕುರಿತು ಮಾತನಾಡಿದ ನಿಂಗಯ್ಯ ಬಸಯ್ಯ ಒಡೆಯರ, ನಾನೊಬ್ಬ ಆರೋಗ್ಯ ಇಲಾಖೆಯ ನಿವೃತ್ತ ನೌಕರ.  2000ನೇ ಇಸವಿಯಲ್ಲಿ ನಿವೃತ್ತಿಯಾಗಿದ್ದೇನೆ.  ನಾನು ಬಡತನದಿಂದ ಬಂದಿದ್ದೇನೆ.  ಸಾಹಿತ್ಯ ರಚನೆ ಮಾಡಿದ್ದೇನೆ.  15 ಕೃತಿಗಳು ಕನ್ನಡದಲ್ಲಿ ಪ್ರಕಟವಾಗಿವೆ.  ಹಿಂದಿ, ಇಂಗ್ಲಿಷ್, ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಭ್ಯಾಸ ಮಾಡುತ್ತ ಸಾಹಿತ್ಯವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದೇನೆ.  ನನಗೆ ವಯಸ್ಸಾದರೂ ಆಸಕ್ತಿ ಕಡಿಮೆಯಾಗಿಲ್ಲ.  ಯಾವಾಗ ನಾವು ಕಲಿಯುವುದನ್ನು ಬಿಡುತ್ತೇವೋ ಆವಾಗ ಅದು ಕಬ್ಬಿಣ ತುಕ್ಕು ಹಿಡಿದಂತಾಗುತ್ತದೆ.  ಹೀಗಾಗಿ ಆಗಾಗ, ಚರ್ಚೆ, ಅಧ್ಯಯನ, ಪರೀಕ್ಷೆ, ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡರೆ ಜ್ಞಾಪಕ ಶಕ್ತಿ ಬೆಳೆಯುತ್ತದೆ.  ಇದು ನಾನು ಬರೆಯುತ್ತಿರುವ ಐದನೇ ಪರೀಕ್ಷೆಯಾಗಿದೆ.  ಈಗಾಗಲೇ ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಸಮಾಜ ಶಾಸ್ತ್ರ ವಿಷಯಗಳಲ್ಲಿ ಎಂ. ಎ. ಮಾಡಿದ್ದೇನೆ.  1956ರಲ್ಲಿ ನಾನು ಮೊದಲು ಶಾಲೆಗೆ ಸೇರಿ ಒಂದನೇ ತರಗತಿಯಲ್ಲಿ ಪರೀಕ್ಷೆ ಬರೆದೆ.  ಅದೇ ಉತ್ಸಾಹ ಈಗಲೂ ಇದೆ.   ಎಂದು ಸಂತಸ ವ್ಯಕ್ತಪಡಿಸಿದರು.

ಸಿಂದಗಿಯಿ ನಿವೃತ್ತ ಉಪನ್ಯಾಸಕ ಪಿ. ಎಂ. ಮಡಿವಾಳ ಮಾತನಾಡಿ, ಈಗ ನನಗೆ 68 ವರ್ಷ ವಯಸ್ಸಾಗಿದೆ.  ನನ್ನ ಮಗಳು ಈ ಮುಂಚೆ ಇಗ್ನೋದಿಂದ ಪರೀಕ್ಷೆಗೆ ಅರ್ಜಿ ಸಲ್ಲಿಸಿದಾಗ ನಾನೂ ಕೂಡ ಅವಳೊಂದಿಗೆ ಅರ್ಜಿ ಹಾಕಿದೆ.  ಇಗ್ನೋ ಉತ್ತಮವಾಗಿ ಪರೀಕ್ಷೆ ನಡೆಸುತ್ತಿದ್ದು, ಎಲ್ಲ ಪರೀಕ್ಷಾರ್ಥಿಗಳ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.  ಓರ್ವ ಪ್ರಾಧ್ಯಾಪಕನಾಗಿ ದಿನನಿತ್ಯ ಅಧ್ಯಯನಶೀಲನಾಗಿರಬೇಕು.  ಜ್ಞಾನ ಸಂಪಾದನೆ ಮಾಡಬೇಕು.  ಹೊಸ ಹೊಸ ಪುಸ್ತಕಗಳನ್ನು ಓದುವುದು, ಸಂಶೋಧನೆಗಳ ಬಗ್ಗೆ ಅಧ್ಯಯನ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಮಾಡಬಹುದು.  ನಮ್ಮ ನಾನು, ನಮ್ಮ ಸಂಸ್ಕೃತಿ ಬೆಳೆಯಲು ಇದು ನಾಂದಿಯಾಗುತ್ತಿದೆ. ಎಂದು ಹೇಳಿದರು.

ಪರೀಕ್ಷೆಯ ಬಳಿಕ ಕಾಲೇಜಿನ ಪ್ರಾಚಾರ್ಯೆ ಮತ್ತು ಇಗ್ನೋ ಅಧ್ಯಯನ ಕೇಂದ್ರದ ಮೇಲ್ವಿಚಾರಕಿ ಡಾ. ಭಾರತಿ ವೈ. ಖಾಸನೀಸ್, ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ರವಿಕಾಂತ ಕಮಲೇಕರ, ಸಂಯೋಜಕ ಡಾ. ಮಂಜುನಾಥ ಕೋರಿ ಅವರು ಹಿರಿಯ ವಯಸ್ಸಿನಲ್ಲಿ ಪರೀಕ್ಷೆ ಬರೆದು ಇತತರಿಗೆ ಮಾದರಿಯಾದ ನಿಂಗಯ್ಯ ಬಸಯ್ಯ ಒಡೆಯರ, ಪಿ. ಎಂ. ಮಡಿವಾಳ ಮತ್ತು ನಾಗನಗೌಡ ಎ ಪಾಟೀಲ ಅವರಿಗೆ ಶುಭಾಷಯ ಕೋರಿದರು.

Leave a Reply

ಹೊಸ ಪೋಸ್ಟ್‌