ಮಹೇಶ ವಿ. ಶಟಗಾರ
ವಿಜಯಪುರ: ಮಾಧ್ಯಮ ಲೋಕದ ದಿಗ್ಗಜ, ದೇಶಕ್ಕೆ ಸಾವಿರಾರು ಪತ್ರಕರ್ತರನ್ನು ನೀಡಿದ ಈ ನಾಡು ಸಂಸ್ಥೆ ಸ್ಥಾಪಿಸುವ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರುವ ರಾಮೋಜಿ ರಾವ(87) ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗಿನ ಜಾವ 4.50ಕ್ಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ರಾಮೋಜಿ ರಾವ ಈಗ ನೆನಪು ಮಾತ್ರ
ರಾಮೋಜಿ ರಾವ ಇನ್ನಿಲ್ಲ ಎಂಬ ಎಂಬ ಸುದ್ದಿ ತೀವ್ರ ದುಃಖ ತಂದಿದೆ. ನನ್ನಂಥ ಹಲವರು 2000ನೇ ಈ ದಿನ ಅಂದರೆ ಜೂನ್ 8 ರಂದು ಈ ಟಿವಿ ಕನ್ನಡ ಚಾನೆಲ್ ನಲ್ಲಿ ಕೆಲಸ ಮಾಡಲು ಆಯ್ಕೆಯಾಗಿ ಹೈದರಾಬಾದಿಗೆ ತರಬೇತಿಗೆ ತೆರಳಿದಾಗ ಅಲ್ಲಿನ ರಾಮೋಜಿ ಫಿಲಂ ಸಿಟಿ ನೋಡಿ ದಂಗಾಗಿದ್ದೇವು. ಗ್ರಾಮೀಣ ಭಾಗದಿಂದ ಬಂದಿದ್ದ ನಮ್ಮಂಥವರು ಅಲ್ಲಿನ ವಾತಾವರಣ ಕಂಡು ಪುಳಕಿತರಾಗಿದ್ದೇವು. ಸುಮಾರು 15 ದಿನ ಅಲ್ಲಿ ತರಬೇತಿ ಪಡೆದಾಗ ರಾಮೋಜಿ ರಾವ ಎಂಬ ಮೇರು ವ್ಯಕ್ತಿ ಮಾಧ್ಯಮ ಲೋಕದ ಜೊತೆಗೆ ಇನ್ನು ಏನೆಲ್ಲ ಸಾಧನೆ ಮಾಡಿದ್ದಾರೆ ಎಂಬುದನ್ನು ತಿಳಿದು ಸಂತಸ ಉಂಟು ಮಾಡಿತ್ತು.
ಮಲಯಾಳಂ ದಿನಪತ್ರಿಕೆಯೊಂದನ್ನು ಹೊರತು ಪಡಿಸಿದರೆ ಅಂದು ದೇಶದಲ್ಲಿ ಈ ನಾಡು ತೆಲಗು ದಿನಪತ್ರಿಕೆ ಎರಡನೇ ಸ್ಥಾನದಲ್ಲಿತ್ತು. ಆಗ ತಾನೆ ರಾಮೋಜಿ ರಾವ ಅವರು ಕನ್ನಡ ಭಾಷೆಯಲ್ಲಿ ಈ ಟಿವಿ ಕನ್ನಡ ನ್ಯೂಸ್ ಚಾನೆಲ್ ಪ್ರಾರಂಭಿಸಲು ನಿರ್ಧರಿಸಿ ನಮಗೆಲ್ಲರಿಗೂ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದರು. ರಾಮೋಜಿ ಸಿಟಿಯಲ್ಲಿ ಪ್ರತಿನಿತ್ಯ ನಮ್ಮ ತರಬೇತಿ ಆರಂಭಕ್ಕೂ ಮುಂಚೆ ಮತ್ತು ಮುಗಿದ ನಂತರ ತಿರುಗಾಡುವಾಗ ಅಲ್ಲಿ ನಡೆಯುತ್ತಿದ್ದ ಹಲವಾರು ಭಾಷೆಯ ಸಿನೇಮಾ ಶೂಟಿಂಗ್ ಗಳು, ಆಯಾ ಭಾಷೆಗಳ ಸ್ಟಾರ್ ನಟರನ್ನು ಕಣ್ಣಾರೆ ನೋಡುವ ಅವಕಾಶ ಸಿಕ್ಕಿತ್ತು. ಫಿಲ್ಮ್ ಸಿಟಿಯಲ್ಲಿರುವ ಕಟ್ಟಡಗಳು ನೈಜ ಬಿಲ್ಡಿಂಗ್ ಗಳಿಗಿಂತ ಹೆಚ್ಚು ಆಕರ್ಷಣೆ ಹೊಂದಿದ್ದವು.
ಈ ಟಿವಿ ಕನ್ನಡ ಚಾನೆಲ್ ಆರಂಭವಾದ ನಂತರ ಪ್ರತಿ ಮೂರು ತಿಂಗಳಿಗೊಳಿಗೊಮ್ಮೆ ನಡೆಯುತ್ತಿದ್ದ ತ್ರೈಮಾಸಿಕ ಸಭೆಗೆ ನಾವು ಕಳೆದ ಮೂರು ತಿಂಗಳಲ್ಲಿ ಮಾಡಿರುವ ಕಾಯಕ ಮತ್ತು ಮುಂದೆ ಮಾಡಲಿರುವ ಕೆಲಸ ಹಾಗೂ ಆಗಬೇಕಿರುವ ಬದಲಾವಣೆಗಳ ಕುರಿತು ವರದಿ ಸಲ್ಲಿಸಬೇಕಿತ್ತು. ಈ ಸಭೆ ನಡೆದಾಗ ಸ್ವತಃ ಹಾಜರಿರರುತ್ತಿದ್ದ ರಾಮೋಜಿರಾವ ಅವರು ಅಲ್ಲಿ ಪ್ರತಿಯೊಬ್ಬರ ವರದಿಯನ್ನು ಸಂಪೂರ್ಣವಾಗಿ ಓದಿರುತ್ತಿದ್ದರು. ಅಲ್ಲದೇ, ಅದರಲ್ಲಿ ಅವರು ಮೊದಲೇ ನಿರ್ಧರಿಸಿದಂತೆ ಆ ವರದಿಯಲ್ಲಿನ ಪ್ರಮುಖ ಮತ್ತು ಕುತೂಹಲಕಾರಿ ಶಬ್ದ ಹಾಗೂ ವಾಕ್ಯಗಳನ್ನು ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ಕಲ್ಪಿಸಿ ಸಲಹೆ, ಸೂಚನೆ ನೀಡುತ್ತಿದ್ದರು.
ಚಾನೆಲ್ ಕ್ರೆಡಿಬಿಲಿಟಿ ಮುಖ್ಯವಾಗಿದ್ದರಿಂದ ಅವರು, ಸುದ್ದಿಗೊಂದು ಚೌಕಟ್ಟು ಹಾಕಿದ್ದರು. ದೂರದರ್ಶನ ಮಾದರಿಯಂತೆಯೇ ಕೇವಲ ಲಾಭ ನೋಡದೇ, ಚಾನೆಲ್ ನಲ್ಲಿ ಧೂಮಪಾನ, ಮದ್ಯಪಾನ, ಅಹಿತರಕ ಜಾಹೀರಾತುಗಳಿಗೆ ಅವಕಾಶ ನೀಡುತ್ತಿರಲಿಲ್ಲ. ಸಭ್ಯರು ಮತ್ತು ಮನೆ ಮಂದಿಯೆಲ್ಲ ಕುಳಿತು ನೋಡುವಂತ ಕಾರ್ಯಕ್ರಮಗಳಿಗೆ ಮಾತ್ರ ಆದ್ಯತೆ ನೀಡುತ್ತಿದ್ದರು.
ಈ ಟಿವಿಯಲ್ಲಿ ಪ್ರತಿ ದಿನ ಬೆಳಿಗ್ಗೆ 6.30ಕ್ಕೆ ಆರಂಭವಾಗುತ್ತಿದ್ದ ಅನ್ನದಾತ ಕಾರ್ಯಕ್ರಮವಂತು ದೇಶಾದ್ಯಂತ ರೈತರ ಪಾಲಿಗೆ ಆಶಾಕಿರಣವಾಗಿತ್ತು. ಕನ್ನಡ ನಾಡಿ ಸುದ್ದಿಯಂತೂ ನಾಡಿನಾದ್ಯಂತ ಪ್ರತಿಯೊಬ್ಬರು ಕಾದು ಕುಳಿತು ಅರ್ಧಗಂಟೆ ಕಾಲ ಜಿಲ್ಲೆ, ರಾಜ್ಯ, ದೇಶ ಮತ್ತು ವಿದೇಶಗಳ ಸುದ್ದಿಯನ್ನು ವೀಕ್ಷಿಸುವಂತೆ ಮಾಡಿತ್ತು.
ರಾಮೋಜಿರಾವ ಅವರು ಸುದ್ದಿಯಲ್ಲಂತೂ ಯಾರ ಮುಲಾಜಿಗೂ ಒಳಗಾಗುತ್ತಿರಲಿಲ್ಲ. ತಮ್ಮ ವರದಿಗಾರರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದ ಅವರು, ಆಂಧ್ರದಲ್ಲಂತೂ ಅವರು ಸರಕಾರಗಳನ್ನೂ ಎದುರು ಹಾಕಿಕೊಂಡ ಉದಾಹರಣೆಗಳು ಸಾಕಷ್ಟಿವೆ. ದೇಶಾದ್ಯಂತ ತೆಲಗು, ಮರಾಠಿ, ಹಿಂದಿ, ಬಂಗಾಲಿ, ಓಡಿಯಾ, ಗುಜರಾತಿ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಎಲ್ಲ ಭಾಷೆಗಳಲ್ಲಿ ಚಾನೆಲ್ ಗಳನ್ನು ಪ್ರಾರಂಭಿಸಿ ವಿದ್ಯುನ್ಮಾನ ಮಾಧ್ಯಮ ಲೋಕದ ಆಲದ ಮರವಾಗಿದ್ದರು. ಆಂಧ್ರ ಪ್ರದೇಶದಲ್ಲಿ ಇಂಗ್ಲಿಷ್ ದಿನಪತ್ರಿಕೆಯನ್ನೂ ಪ್ರಾರಂಭಿಸಿ ಸದಭಿರುಚಿಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದರು.
ಯಾವುದೇ ಮಾಧ್ಯಮ ಸಂಸ್ಥೆ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಈಗ ಯೋಚಿಸಿದರೆ, ರಾಮೋಜಿ ರಾವ ಅವರು ಅದನ್ನು ಒಂದು ದಶಕದ ಮೊದಲೇ ಯೋಚಿಸುತ್ತಿದ್ದರು. ಅಲ್ಲದೇ, ಅನುಷ್ಠಾನಕ್ಕೆ ತರುವ ಮೂಲಕ ಇತರರಿಗೆ ಮಾದರಿಯಾಗಿರುತ್ತಿದ್ದರು.
ಸಿನೇಮಾ ಕ್ಷೇತ್ರಕ್ಕೂ ಅವರು ನೀಡಿದ ಕೊಡುಗೆ ಅಪಾರ. ನಿರ್ಮಾಪಕರಾಗಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದ ಅವರು, ಕಿರುತೆರೆಯಲ್ಲೂ ಮನೋರಂಜನೆ ಕ್ಷೇತ್ರದಲ್ಲಿ ಅವರದೇ ಆದ ಹೆಸರು ಮಾಡಿದ್ದರು. ಚಿಟ್ ಫಂಡ್, ಉಪ್ಪಿನಕಾಯಿ ಉದ್ಯಮ ಪ್ರಾರಂಭಿಸುವ ಮೂಲಕವೂ ಅವರು ಬಹುಮುಖ ಪ್ರತಿಭೆಯಾಗಿ ಹೆಸರು ಮಾಡಿದ್ದರು.
ನನ್ನಂಥ ಸಹಸ್ರಾರು ಜನರ ಬಾಳಿಗೆ ಅನ್ನಹಾಕಿದ ಅನ್ನದಾತ ಇನ್ನಿಲ್ಲ ಎಂಬ ಸುದ್ದಿ ಶಾಕ್ ನೀಡಿದೆ. ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ.
ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಲಿ. ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ.
ನಾನು ಟಿವಿ ಮಾಧ್ಯಮಕ್ಕೆ ಸೇರಿ ಇಂದಿಗೆ 24 ವರ್ಷಗಳು ತುಂಬುತ್ತಿರುವ ಈ ದಿನವೇ ಅನ್ನದಾತ ಖ್ಯಾತಿಯ ರಾಮೋಜಿ ರಾವ ನಿಧನರಾಗಿರುವುದು ವಿಪರ್ಯಾಸವಾಗಿದೆ.