ವಿಜಯಪುರ: ರಾಜ್ಯದಲ್ಲಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಆಗದಿದ್ದರೆ ನನಗೆ ಮುಂದೆ ರಾಜಕಾರಣ ಮಾಡುವ ಇಚ್ಛೆ ಇಲ್ಲ. ರಾಜಕೀಯ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಶಾಸಕ ಮತ್ತು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ. ಎಸ್. ನಾಡಗೌಡ ಹೇಳಿದ್ದಾರೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ಕೆ ಬಿ ಜೆ ಎನ್ ಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ನಾನಾ ಯೋಜನೆಗಳು ಮತ್ತು ಅಭಿವೃದ್ಧಿ ಕಾಮಗಾರಿಗಳ ಕುರಿತು ಸಭೆ ನಡೆಸಿದರು. ಇದಾದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಎಲ್ಲ ಹಿಂದುಳಿದ ಮತಕ್ಷೇತ್ರಗಳ ಅಭಿವೃದ್ಧಿ ಮಾಡಬೇಕು. ಅದು ಮುದ್ದೇಬಿಹಾಳ ಅಂತ ಅಲ್ಲ. ಇಲ್ಲವಾದರೆ ರಾಜಕೀಯದಲ್ಲಿದ್ದು ಏನು ಮಾಡಬೇಕು. ಮತಕ್ಷೇತ್ರದ ಅಭಿವೃದ್ಧಿಗಾಗಿ ತ್ಯಾಗಕ್ಕೂ ಸಿದ್ದನಾಗಿದ್ದೇನೆ. ಜನ ಸರಕಾರದಿಂದ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಹೀಗಾಗಿ ರಾಜ್ಯದ ಎಲ್ಲ ಹಿಂದುಳಿದ ಕ್ಷೇತ್ರಗಳಿಗೆ ಸಮರ್ಪಕವಾಗಿ ಮತ್ತು ಸಮತೋಲಿತವಾಗಿ ಅಭಿವೃದ್ಧಿ ಮಾಡಬೇಕು. ಅಭಿವೃದ್ಧಿ ಮಾಡಲು ಸಾಧ್ಯವಾಗದಿದ್ದರೆ ನನಗೆ ಮುಂದೆ ರಾಜಕಾರಣ ಮಾಡುವ ಇಚ್ಛೆ ಇಲ್ಲ. ಆ ತ್ಯಾಗಕ್ಕೂ ಸಿದ್ದನಾಗಿದ್ದೇನೆ. ಇದನ್ನು ಬಹಳ ಬಿಚ್ಚು ಮನಸ್ಸಿನಿಂದ ಹೇಳುತ್ತೇನೆ. ಸರಕಾರ ಸ್ಪಂದಿಸದಿದ್ದರೆ ಆ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ಅವರು ಹೇಳಿದರು.
ಒಂದು ಕ್ಷೇತ್ರಕ್ಕೆ ಅತೀ ಹೆಚ್ಚು ಹಣ ಕೊಟ್ಟು, ಅಲ್ಲಿ ಭಾರಿ ಕೆಲಸ ಮಾಡಿದ್ದಾರೆ ಎಂದು ಮತ್ತು ಬೇರೆಯವರು ಕೇಳಿದಷ್ಟು ಅನುದಾನ ನೀಡದೆ ಮತಕ್ಷೇತ್ರದ ಜನರು ಅಭಿವೃದ್ಧಿಯಿಂದ ವಂಚಿತರಾಗಿದ್ದಾರೆ ಎನಿಸಿಕೊಳ್ಳುವ ರಾಜಕೀಯ ನನಗೆ ಬೇಡ ಎಂಬ ಸಂದೇಶವನ್ನು ಮಾಧ್ಯಮದ ಮೂಲಕ ನೇರವಾಗಿ ತಿಳಿಸುತ್ತಿದ್ದೇನೆ ಎಂದು ಅವರು ಹೇಳಿದರು.
ಈ ಮೂಲಕ ಸಿ. ಎಸ್. ನಾಡಗೌಡ ಅವರು, ತಮ್ಮದೇ ಸರಕಾರ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ಕೆಲ ಕ್ಷೇತ್ರಗಳಿಗೆ ಮಾತ್ರ ಹಣ ನೀಡಿದ್ದಾರೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು.