ಕಾಂಗ್ರೆಸ್ ಶಾಸಕರು ಇನ್ನೊಂದು ತಿಂಗಳಲ್ಲಿ ಬಂಡಾಯವೇಳಲಿದ್ದಾರೆ- ಕೇಂದ್ರದಲ್ಲಿ ಬಿಜೆಪಿ ಸಂಸದರ ಸಂಖ್ಯೆ 272ಕ್ಕೇರಲಿದೆ- ಶಾಸಕ ಯತ್ನಾಳ

ವಿಜಯಪುರ: ಇನ್ನೊಂದು ತಿಂಗಳಲ್ಲಿ ಅನುದಾನ ವಿಚಾರದಲ್ಲಿ ಕಾಂಗ್ರೆಸ್ ಶಾಸಕರೇ ಬಂಡಾಯವೇಳಲಿದ್ದಾರೆ.  ಕೇಂದ್ರದಲ್ಲಿ ಬಿಜೆಪಿ ಸಂಸದರ ಸಂಖ್ಯೆ 272 ಆಗಲಿದೆ ಎಂದು ವಿಜಯಪುjರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ವಿಫಲವಾಗಿವೆ.  ಗ್ಯಾರಂಟಿ‌ ಯೋಜನೆಗಳ ಮಧ್ಯೆಯೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದೆ.  ಜನರು‌ ಗ್ಯಾರಂಟಿ ಬಗ್ಗೆ ಬೇಸತ್ತಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ವಿಫಲವಾಗಿವೆ.  ಎಲ್ಲದರ ಬೆಲೆ ಏರಿಕೆ ಮಾಡುತ್ತಿದ್ದಾರೆ.  ಗ್ಯಾರಂಟಿ ಮೇಕ್ ಅಪ್ ಮಾಡಲು ಬೆಲೆ ಏರಿಕೆ ಮಾಡುತ್ತಿದ್ದಾರೆ.  ಇದರಿಂದ ಅಭಿವೃದ್ಧಿಯೂ ಆಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ.  ಈಗ ನಾವು ಹಿಂದಿನ‌ ಕಾಮಗಾರಿಗಳಿಗೆ ಪೂಜೆ ಮಾಡುತ್ತಿದ್ದೇವೆ.  ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಿಂದ ಹಿಡಿದು ಎಲ್ಲ ಶಾಸಕರು ಅನುದಾನ ವಿಚಾರದಲ್ಲಿ ಅಸಮಾಧಾನದಿಂದ ಇದ್ದಾರೆ.  ಸರಕಾರ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ ಎನ್ನುತ್ತಿದ್ದಾರೆ.  ಕಾಂಗ್ರೆಸ್ ಶಾಸಕರು ಯಾವುದೇ ಅಭಿವೃದ್ಧಿ ಕಾಮಗಾರಿ‌ ಪೂಜೆ ಮಾಡುತ್ತಿಲ್ಲ.  ಇನ್ನೊಂದು ತಿಂಗಳಲ್ಲಿ ಅನುದಾನ ವಿಚಾರದಲ್ಲಿ ಕಾಂಗ್ರೆಸ್ ಶಾಸಕರೇ ಬಂಡಾಯವೇಳಲಿದ್ದಾರೆ ಎಂದು ಭವಿಷ್ಯ ನುಡಿದರು.  .

ಕೇಂದ್ರದಲ್ಲಿ ಶೀಘ್ರವೇ  ಬಿಜೆಪಿಯ ಸಂಸದರ ಸಂಖ್ಯೆ 272ಕ್ಕೇರಲಿದೆ.  ಮೂರು ತಿಂಗಳಲ್ಲಿ ನಮ್ಮ ಪಕ್ಷದ  ಸಂಸದರ ಸಂಖ್ಯೆ ಹೆಚ್ಚಾಗಲಿದೆ.  ಆದರೆ, ಇಲ್ಲಿ ಯಾವುದೇ ಆಪರೇಶನ್ ಆಗುವುದಿಲ್ಲ.  ಎಲ್ಲವೂ ನಾರ್ಮಲ್ ಡಿಲೆವರಿ ಆಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ರವಿಕುಮಾರ, ಚರಂತಿಮಠ ಭೇಟಿ ವಿಚಾರ

ವಿಧಾನ ಪರಿಷತ ಶಾಸಕ ಎನ್. ರವಿಕುಮಾರ ಮತ್ತು ಮಾಜಿ ಶಾಸಕರಾದ ವೀರಣ್ಣ ಚರಂತಿಮಠ ಮತ್ತು ಅಭಯಕುಮಾರ ಪಾಟೀಲ ತಮ್ಮನ್ನು ಭೇಟಿ ಮಾಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಇದರಲ್ಲಿ ವಿಶೇಷವೇನಿಲ್ಲ.  ನಮ್ಮ ಪಕ್ಷದವನ್ನು ಬೆಳೆಸುವ ವಿಚಾರವಾಗಿ ಮಾತನಾಡಿದ್ದೇವೆ.  ಮುಂದಿನ‌ ಅಧಿವೇಶನದಲ್ಲಿ ಕಾಂಗ್ರೆಸ್ ದುರಾಳಿತ ವಿರುದ್ಧ ಹೋರಾಟ ಮಾಡುವ ಕುರಿತು ಚರ್ಚೆ ಮಾಡಿದ್ದೇವೆ ಎಂದು ಸಮಜಾಯಿಷಿ ನೀಡಿದರು.

ಯಡಿಯೂರಪ್ಪ ಜೊತೆಗೆ ಹೊಂದಾಣಿಕೆ ಮಾಡಲು ಬಂದಿದ್ದರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಹೊಂದಾಣಿಕೆಯಾಗುವುದಿಲ್ಲ.  ಬೆಳಗಾವಿ ಮತ್ತು ಬೆಂಗಳೂರು ಅಧಿವೇಶನದಲ್ಲಿ‌ ನಾನು ಯಾವುದೇ ಹೊಂದಾಣಿಕೆ‌ ಇಲ್ಲದೇ ದಾಳಿ ಮಾಡಿ ಮಾಡುತ್ತೇನೆಂದು ಎಲ್ಲರೂ ಹೇಳಿದ್ದಾರೆ.  ಆ‌ ನಿಟ್ಟಿನಲ್ಲಿ ನಾವು ಒಂದಾಗಿ ಹೋರಾಟ ಮಾಡಬೇಕು ಎಂದು ಭೇಟಿಯಾಗಿದ್ದೇವೆ.  ವಿಜಯಪುರ ಗಂಡು‌ ಮೆಟ್ಟಿನ ನಾಡು.  ನೇರವಾಗಿ ಮಾತನಾಡುವವರು ಇಲ್ಲಿದ್ದಾರೆ.  ವಿಜಯಪುರ ಹಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಜಯಪುರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

 

ಬಿಜೆಪಿ ಪ್ರತಿಪಕ್ಷದ ನಾಯಕ ಬದಲಾವಣೆ ವಿಚಾರ

ಆರ್. ಅಶೋಕ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ವಿಫಲರಾಗಿದ್ದಾರೆ ಎಂದು ಬಿಜೆಪಿ ಸ್ವಪಕ್ಷಿಯರೇ ಆರೋಪ ಮಾಡುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಆರ್. ಅಶೋಕ ಅವರನ್ನು ಪ್ರತಿಪಕ್ಷದ ನಾಯಕ ಸ್ಥಾನದಿಂದ‌ ಕೆಳಗಿಳಿಸುವು ಕೆಲಸ ನಡೆಯುತ್ತಿಲ್ಲ.  ಲೋಕಸಭೆ ಚುನಾವಣೆಯಲ್ಲಿ ನಾನು ಉಳಿದ ನಾಯಕರಿಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಓಡಾಡಿದ್ದೇನೆ.  ಲೋಕಸಭೆಯಲ್ಲಿ ‌ನಮಗೆ ಸ್ವಲ್ಪ ಹಿನ್ನಡೆಯಾಗಿದೆ.  ಇನ್ನೂ ನಾಲ್ಕೈದು ಸೀಟುಗಳನ್ನು ಗೆಲ್ಲಬಹುದಿತ್ತು ಎಂದು ಹೇಳಿದರು.

ಅಲ್ಪಸಂಖ್ಯಾತರ ವಿಚಾರ

ಸಿಎಂ ಅಲ್ಪಸಂಖ್ಯಾತರಿಗೆ ರಕ್ಷಣೆ ‌ನೀಡುತ್ತೇವೆಂದು ಹೇಳುತ್ತಿದ್ದಾರೆ.  ದೇಶದಲ್ಲಿ ಅಲ್ಪಸಂಖ್ಯಾತರಿಗೆ  ಏನಾಗಿದೆ? ಎಲ್ಲ ಆರಾಮಾಗಿದ್ದಾರೆ.  ದೇಶದ ಪ್ರಧಾನಿ ಮೋದಿ ಅವರ ರಕ್ಷಣೆ ಇದೆ.  ಹೀಗಾಗಿ ಅಲ್ಪ ಸಂಖ್ಯಾತರು ಆರಾಮಾಗಿದ್ದಾರೆ ಎಂದು ಯತ್ನಾಳ ಹೇಳಿದರು.

ಕೇಂದ್ರ ಸರಕಾರ ಪತನ ಕುರಿತು ಮಲ್ಲಿಕಾರ್ಜುನ ಖರ್ಗೆ ಭವಿಷ್ಯ ವಿರೋಧ

ಮೋದಿ‌ ನೇತೃತ್ವದ ಕೇಂದ್ರ ಸರಕಾರ ಬೇಗ ಪತನವಾಗುತ್ತದೆ ಎಂದು ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಭವಿಷ್ಯ ನುಡದಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಖರ್ಗೆ ಅವರು ಇದೇ ಕನಸು ಕಾಣುತ್ತಿದ್ದಾರೆ.  ಚಂದ್ರಬಾಬು ನಾಯ್ದು‌ ಮತ್ತು ನಿತೀಶಕುಮಾರ ಬಹಳ‌ ಪೆಟ್ಟು ತಿಂದಿದ್ದಾರೆ.  ನಾಯ್ಡು ರಾಜಕೀಯ ಅಂತ್ಯವಾಗುವ ಕಾಲದಲ್ಲಿ ಅವರಿಗೆ ಬಿಜೆಪಿ ನೆರವಾಗಿದೆ.  ಲಾಲೂ ಪ್ರಸಾದ ಯಾದವ ಕುಟುಂಬ ಹಾಗೂ ಮಕ್ಕಳ ಗುಂಡಾಗಿರಿ ಜೊತೆಗೆ ಆಡಳಿತ ಮಾಡಲಾಗಲ್ಲ ಎಂದು ನಿತೀಶಕುಮಾರ ಹೇಳಿದ್ದಾರೆ.  ಕೇಂದ್ರ ಹೀಗಾಗಿ ಸರಕಾರಕ್ಕೆ ಏನೂ ಆಗಲ್ಲ ಎಂದು ಅವರು ತಿಳಿಸಿದರು.

ಪೆಟ್ರೋಲ್, ಡಿಸೇಲ್ ದರ ಹೆಚ್ಚಳ ವಿಚಾರ

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ಕುರಿತು ಮಾತನಾಡುವವರು ಪಾಕಿಸ್ತಾನಕ್ಕೆ ಹೋಗಲಿ

ಎಂದು ಯತ್ನಾಳ ಹಿಂದಿನ ಹೇಳಿಕೆ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ದರ ಏರಿಕೆ ಜಾಗತೀಕರಣ ಮೇಲೆ ಇರುತ್ತದೆ.  ಆದರೆ ರಾಜ್ಯದಲ್ಲಿ ದರ ಏರಿಕೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು.

ದರ್ಶನ ಸೆರೆ ವಿಚಾರ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಚಿತ್ರನಟ ದರ್ಶನ ಮತ್ತು ಗ್ಯಾಂಗ್ ಬಂಧಿಸಲಾಗಿದ್ದು, ಅವರನ್ನು ವಿಚಾರಣೆ ನಡೆಸುತ್ತಿರುವ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿ ಮುಚ್ಚಿರುವ ವಿಚಾರ ಕುರಿತು ಪ್ರತಿಕ್ರಿಯ ನೀಡಿದ ಶಾಸಕರು, ದರ್ಶನ್ ಪ್ರಕರಣ ಹೊಸದಲ್ಲ.  ಮೊದಲಿನಿಂದಲೂ ಆತ ಹಾಗೇ ಇದ್ದಾನೆ.  ಶಾಮೀಯಾನಾ ಹಾಕೋದು ಅಕ್ಷಮ್ಯ ಅಪರಾಧ.  ಮುಚ್ಚಿ ಒಳಗೆ ಕೂಡಿಸುವುದು, ಪ್ರಕರಣ ಮುಚ್ಚಿ ಹಾಕಲು ಹೋದರೆ ಸರಿಯಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ.  ಅಪರಾಧ ಚಟುವಟಿಕೆ ನಿಯಂತ್ರಣ ಆಗಿಲ್ಲ.  ಗೃಹ ಸಚಿವ ಪರಮೇಶ್ವರ ಒಳ್ಳೆಯವರು.  ಅವರು ಸಿಎಂ ಆಗುವ ಅರ್ಹತೆ ಹೊಂದಿದ್ದಾರೆ.  ಅವರನ್ನು ಬಲಿ ಕೊಡಲು ಗೃಹ ಸಚಿವರನ್ನಾಗಿ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಸಿಎಂ, ಡಿಸಿಎಂ ವಿರುದ್ಧ ಆರೋಪ

ಇದೇ ವೇಳೆ, ಸಿಎಂ ಎಸ್. ಸಿದ್ಧರಾಮಯಯ್ಯ ಮತ್ತು ಡಿಸಿಎಂ ಡಿ. ಕೆ. ಶಿವಕುಮಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಸರಕಾರ ಭ್ರಷ್ಟಾಚಾರದಲ್ಲಿ ನಿರತವಾಗಿದೆ.  ಬೆಂಗಳೂರಿನಲ್ಲಿ ಜಮೀನು ಎನ್ಎ ಮಾಡಲು ಪ್ರತಿ ಚದುರ ಅಡಿ ಭೂಮಿಗೆ ರೂ. 75 ಲಂಚ ನೀಡಬೇಕಾಗಿದೆ.  ನಮಗೆ 40 ಪರ್ಸೆಂಟ್ ಎಂದು ಆರೋಪ ಮಾಡುವವರು ಈಗ ಇಷ್ಟು ಪ್ರಮಾಣದ ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಯತ್ನಾಳ ವಾಗ್ದಾಳಿ ನಡೆಸಿದರು.

ವಿ. ಸೋಮಣ್ಣಗೆ ಸಚಿವ ಸ್ಥಾನ ನೀಡಿದ್ದಕ್ಕೆ ಅಸಮಾಧಾನ ವಿಚಾರ

ತುಮಕೂರು ಸಂಸದ ವಿ. ಸೋಮಣ್ಣ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿರುವುದಕ್ಕೆ ಬಿಜೆಪಿಯಲ್ಲಿ ಅಸಮಾಧಾನ ಉಂಟಾಗಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಹಿಂದಿನ ಉಪ ಚುನಾವಣೆಗಳಲ್ಲಿ ಸೋಮಣ್ಣ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ.  ವಿಧಾನಸಭೆ ಚುನಾವಣೆಯಲ್ಲಿ ಅವರನ್ನು ಎರಡು ಕಡೆ ನಿಲ್ಲಿಸಿ ಸೋಲಿಸಿದರು.  ಹೀಗಾಗಿ ಅವರ ಕೆಲಸ ನೋಡಿ ಹೈಕಮಾಂಡ್ ಎರಡು ಖಾತೆ ನೀಡಿದ್ದಾರೆ.  ರಾಜ್ಯದ ಸಂಸದರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಬೇಕು.  ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರಿಗೂ ಕ್ಯಾಬಿನೇಟ್ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ಅವರು ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ವಿಜಯಪುರ ವಿಧಾನ ಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಮುನ್ನಡೆ ವಿಚಾರ

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ವಿಜಯಪುರ ವಿಧಾನ ಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ಚು ಮತ ಪಡೆದಿದ್ದಾರೆ.  ಇಲ್ಲಿ ಮುಸ್ಲಿಂ ಸಮಾಜದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.  ಹೀಗಾಗಿ ಕೆಲ ಕಾರಣಗಳಿಂದ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚು ಮತಗಳು ಹೋಗಿವೆ ಎಂದು ಬಸನಗೌಡ ಪಾಟೀಲ ಯತ್ನಾಳ ಸಮಜಾಯಿಷಿ ನೀಡಿದರು.

Leave a Reply

ಹೊಸ ಪೋಸ್ಟ್‌