ಬಿಎಸ್‌ವೈ, ವಿಜಯೇಂದ್ರ ಜೊತೆ ಹೊಂದಾಣಕೆ ವಿಚಾರ- ನಾನು ಬಿಜೆಪಿ ರಾಜ್ಯಾಧ್ಯಕ್ಷ ನಾಗುವುದಾಗಿ ಹೇಳಿದ್ದೇನೆ- ಯತ್ನಾಳ

ವಿಜಯಪುರ: ಬಿ. ವೈ. ವಿಜಯೇಂದ್ರ ಮತ್ತು ತಮ್ಮ ಮಧ್ಯೆ ಹೊಂದಾಣಿಕೆ ಮಾಡಿಸಲು ಪ್ರಯತ್ನಗಳು ನಡೆಯುತ್ತಿವೆ.  ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗುವುದಾಗಿ ಹೇಳಿದ್ದೇನೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ನಗರದಲ್ಲಿ ವಿಶ್ವ ಯೋಗದ ದಿನದ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತನಿಧಿಗಳೊಂದಿಗೆ ಅವರು ಮಾತನಾಡಿದರು.

ಇತ್ತೀಚೆಗೆ ಬಿಜೆಪಿ ಶಾಸಕ ಎನ್. ರವಿಕುಮಾರ ಮತ್ತೀತರು ವಿಜಯಪುರದಲ್ಲಿ ಶಾಸಕ ಯತ್ನಾಳ ಭೇಟಿಯಾಗಿದ್ದರು.  ಈ ಸಂದರ್ಭದಲ್ಲಿ ಬಿ. ವೈ. ವಿಜಯೇಂದ್ರ ಮತ್ತು ಯತ್ನಾಳ ಮಧ್ಯೆ ಹೊಂದಾಣಿಕೆ ಮಾಡಿಸುವ ಕುರಿತು ಮಾತುಕತೆಗಳು ನಡೆದಿವೆ ಎಂಬ ಮಾತುಗಳು ಕೇಳಿ ಬಂದಿದ್ದವು.  ಈ ಕುರಿತು ಕೇಳಲಾದ ಪ್ರಶ್ನಗೆ ಉತ್ತರಿಸಿದ ಯತ್ನಾಳ, ಅಂಥ ಪ್ರಯತ್ನಗಳು ನಡೆಯುತ್ತವೆ.  ನಾನು ಕಾಂಪಿಟೇಟರ್ ಇದ್ದೇನೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷನಾಗುವುದಾಗಿ ಹೇಳಿದ್ದೇನೆ

ತಮಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡುವುದಾಗಿ ಹೇಳಿದ್ದಾರೆ.  ಆದರೆ, ನಾನು ವಿಜಯೆಂದ್ರನೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಇಟ್ಟುಕೊಳ್ಳಲಿ.  ನಾನು ರಾಜ್ಯಧ್ಯಕ್ಷನಾಗುತ್ತೇನೆ ಎಂದು ಹೇಳಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.

ಬೈ ಎಲೆಕ್ಷನ್ ವಿಚಾರ, ಚುನಾವಣೆ ಆಯೋಗ ಕಾಯಿದೆ ತಿದ್ದುಪಡಿ ಮಾಡಲು ಆಗ್ರಹ

ಚನ್ನಪಟ್ಟಣ ಬೈಎಲೆಕ್ಷನ್ ನಲ್ಲಿ ಕಾಂಗ್ರೆಸ್ಸಿನಿಂದ ಡಿಸಿಎಂ ಡಿ. ಕೆ. ಶಿವಕುಮಾರ ಅಥವಾ ಡಿ. ಕೆ. ಸುರೇಶ ಸ್ಪರ್ಧೆ ಮಾಡಲಿದ್ದಾರೆ ಎಂಬ ಚರ್ಚೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಸ್ಪರ್ಧೆ ಮಾಡಬಹುದು.  ಆದರೆ ಚುನಾವಣೆ ಸ್ಪರ್ಧೆಯ ವಿಚಾರದಲ್ಲಿ ಚುನಾವಣಾ ಆಯೋಗ ಕೆಲ ಕಾಯ್ದೆಗಳನ್ನ ಮಾರ್ಪಾಡು ಮಾಡಬೇಕು ಎಂದು ಅವರು ಹೇಳಿದರು.

ಒಂದು ಕ್ಷೇತ್ರದಲ್ಲಿ ಸಂಸದ ಅಥವಾ ಶಾಸಕರಾಗಿರುವವರು ಮತ್ತೊಂದು ಕ್ಷೇತ್ರಕ್ಕೆ ಸ್ಪರ್ಧೆ ಮಾಡಲು ಅವಕಾಶ ನೀಡಬಾರದು.  ಈ ಕುರಿತು  ಹೊಸ ಕಾನೂನು ಜಾರಿ ಮಾಡಬೇಕು.  ಕಳೆದ ಲೋಕಸಭೆ ಚುನಾವಣೆಯಲ್ಲಿ ನನಗೂ ಕೂಡ ಬಾಗಲಕೋಟೆ ಬೆಳಗಾವಿಯಿಂದ ಸ್ಪರ್ಧೆ ಮಾಡುವಂತೆ ಹೇಳಲಾಗಿತ್ತು.  ನಾನು ಸ್ಪರ್ಧೆ ಮಾಡಲಿಲ್ಲ.  ಒಂದು ಕ್ಷೇತ್ರದಲ್ಲಿ ಶಾಸಕರಾಗಿದ್ದವರು ಸಚಿವರಾಗಿದ್ದರೂ ಕೂಡ ಉಪಚುನಾವಣೆಗಳಲ್ಲಿ ಸ್ಪರ್ಧೆ ಮಾಡುವಂತಾಗಬಾರದು.  ಈ ನಿಟ್ಟಿನಲ್ಲಿಯೂ ಕೂಡ ಕಾನೂನು ಜಾರಿಯಾಗಬೇಕು.  ಉಪ ಚುನಾವಣೆ ನಡೆಯುವುದರಿಂದ ನೀತಿ ಸಂಹಿತೆ ಎರಡು ತಿಂಗಳು ಜಾರಿಯಲ್ಲಿರುತ್ತದೆ.  ಇದರಿಂದ ಅಭಿವೃದ್ಧಿ ಕೆಲಸ ಕಾಮಗಾರಿಗಳು ಆಗಲ್ಲ ಎಂದು ಅವರು ಹೇಳಿದರು.

ಬೆಲೆಯೇರಿಕೆ ವಿಚಾರ ರಾಜ್ಯ ಸರಕಾರದ ವಿರುದ್ಧ ಯತ್ನಾಳ ವಾಗ್ದಾಳಿ

ತೈಲಬೆಲೆ ಹೆಚ್ಚಳದಿಂದ ರಾಜ್ಯ ಸರಕಾರದಿಂದ ಬೆಲೆ ಏರಿಕೆ ಮಾಡುತ್ತಿದೆ ಎಂಬ ಚರ್ಚೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆ.  ಈಗ ಬಸ್ ದರವನ್ನು ಏರಿಕೆ ಮಾಡುತ್ತಿದ್ದಾರೆ.  ರಾಜ್ಯ ಸರಕಾರ ದಿವಾಳಿಯಾಗಿದೆ.  ಗ್ಯಾರಂಟಿ ಯೋಜನೆಗಳು ಜೀವಂತವಾಗಿರಲು ಸರಕಾರ ಬೆಲೆ ಏರಿಕೆ ಮಾಡುತ್ತಿದೆ.  ಬೆಲೆ ಏರಿಕೆ ಮಾಡದಿದ್ದರೆ ಸರಕಾರಿ ನೌಕರರ ಸಂಬಳ‌ ನೀಡಲು ಸರಕಾರದ ಬಳಿ ಹಣವಿಲ್ಲದಂತಾಗಿದೆ.  ಕಾಂಗ್ರೆಸ್ ಸಚಿವರು‌ ಮತ್ತು ಶಾಸಕರು ಅಭಿವೃದ್ಧಿಗೆ ಅನುದಾನ‌ ನೀಡುತ್ತಿಲ್ಲ ಎನ್ನುತ್ತಿದ್ದಾರೆ.  ಗ್ಯಾರಂಟಿ ಯೋಜನೆಗಳು ಬೇಡವೆಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.  ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಿದರೆ ಕಾಂಗ್ರೆಸ್ಸಿಗೆ ಮತ್ತಷ್ಟು ಪರಿಣಾಮ ಬೀರಲಿದೆ ಎಂದು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.  ಗ್ಯಾರಂಟಿ ಯೋಜನೆಗಳಿಗಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ.  ಮದ್ಯದ ದರವನ್ನು ಏರಿಕೆ‌ ಮಾಡುತ್ತಿದ್ದಾರೆ.  ಮದ್ಯದ ದರ ಏರಿಕೆ‌ ಮಾಡಿದರೆ ಮಾಡಲಿ ಎಂದು ಅವರು ಹೇಳಿದರು.

ಸರಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪ

ರಾಜ್ಯ ಸರಕಾರ ವ್ಯಾಪಕ‌ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿದ ಅವರು, ಎಲ್ಲ ಮಂತ್ರಿಗಳು‌ ಲೂಟಿ ಮಾಡುತ್ತಿದ್ದಾರೆ.  ಕಂದಾಯ ಸಚಿವರ ಕ್ಷೇತ್ರದಲ್ಲಿಯೇ ಇಬ್ಬರು ಸಚಿವರು ಜಮೀನು ನುಂಗೋ ಹುನ್ನಾರ ನಡೆಸಿದ್ದಾರೆ.  ಬೆಂಗಳೂರಿನ ಹೃದಯ ಭಾಗದಲ್ಲಿನ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಜಮೀನು ನುಂಗುವ ಹುನ್ನಾರ ನಡೆದಿದೆ.  20 ಎಕರೆ ಜಮೀನನ್ನು ಬೇನಾಮಿಯಾಗಿ ಕಬಳಿಸಲು ನಕಲಿ ಕಾಗದ ಪತ್ರ ಮಾಡಿ ಕಬಳಿಸಲು ಮುಂದಾಗಿದ್ದಾರೆ.  ಸಕ್ಕರೆ ಸಚಿವ ಶಿವಾನಂದ‌ ಪಾಟೀಲರ ಹಗರಣ ಶೀಘ್ರವೇ ಬಯಲಿಗೆ ಬರಲಿದೆ ಎಂದು ಅವರು ಸ್ಪೋಟಕ ಹೇಳಿಕೆ ನೀಡಿದರು.

Leave a Reply

ಹೊಸ ಪೋಸ್ಟ್‌