ವಿಜಯಪುರ: ಜನರ ಸಮಸ್ಯೆಗಳನ್ನು ನಿವಾರಣೆ ಮಾಡಲು ಸರ್ಕಾರ ಬದ್ಧವಾಗಿದ್ದು, ಅದಕ್ಕಾಗಿ ಮನೆ ಬಾಗಿಲಿಗೆ ಸರಕಾರ ಎಂಬಂತೆ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ಸಾರ್ವಜನಿಕರು ಇದg ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನಾಗಠಾಣ ಶಾಸಕ ವಿಠ್ಠಲ ಧೋಂಡಿಬಾ ಕಟಕದೊಂಡ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಚಡಚಣ ನಗರದ ಗುರುಕೃಪ ಮಾಂಗಲ್ಯ ಕಾರ್ಯಾಲಯದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರು ತಮ್ಮ ಸಮಸ್ಯೆ, ದೂರು, ಅಹ್ವಾಲುಗಳನ್ನು ದೂರದ ಜಿಲ್ಲಾ ಕಚೇರಿಗೆ ಹೋಗಿ ದಾಖಲಿಸುವುದು ಆರ್ಥಿಕ ಹಾಗೂ ತೊಂದರೆಯಾಗುತ್ತಿರುವುದರಿಂದ ಸ್ಥಳೀಯವಾಗಿ ಸಮಸ್ಯೆಗಳನ್ನು ಪರಿಹರಿಸಿ ನ್ಯಾಯ ದೊರಕಿಸುವಲ್ಲಿ ಜನಸ್ಪಂದನ ಕಾರ್ಯಕ್ರಮ ನೆರವು ನೀಡುತ್ತದೆ. ಒಂದೇ ಸೂರಿನಡಿ ಎಲ್ಲಾ ಇಲಾಖೆಯ ಅಧಿಕಾರಿಗಳು ಲಭ್ಯವಿದ್ದು, ಬಹುಬೇಗನೆ ಜನರ ಕುಂದುಕೊರತೆ ನಿವಾರಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮ ಜನಸ್ಪಂದನ ಕಾರ್ಯಕ್ರಮವಾಗಿದೆ. ಆಯಾ ಕ್ಷೇತ್ರದ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಜಾರಿಗೆ ಬಂದ ಈ ಕಾರ್ಯಕ್ರಮ ಜನರನ್ನು ಅಲೆದಾಡಿಸದೆ ಸ್ಥಳೀಯವಾಗಿ ಅವರ ಕುಂದು ಕೊರತೆಗಳ ನಿವಾರಿಸಲು ಉತ್ತಮ ವೇದಿಕೆಯಾಗಿದೆ ಎಂದು ಅವರು ಹೇಳಿದರು.
ವಿಜಯಪುರ ಜಿಲ್ಲೆಯ ಚಡಚಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲ ಧೋಂಡಿಬಾ ಕಟಕದೊಂಡ ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಿಸಿದರು.
ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾತನಾಡಿ, ಸಾರ್ವಜನಿಕರ ಕುಂದುಕೊರತೆಗಳುನ್ನು ಸಾರ್ವಜನಿಕರು ತಮ್ಮ ತಮ್ಮ ಅಹವಾಲುಗಳನ್ನು ದಾಖಲಿಸಲು ಜಿಲ್ಲೆ ಹಾಗೂ ತಾಲೂಕ ಕೇಂದ್ರಗಳಿಗೆ ಅಡ್ಡಾಡುವುದನ್ನು ತಪ್ಪಿಸಲು ಹಾಗೂ ಕಡಿಮೆ ಸಮಯದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಈ ಕಾರ್ಯಕ್ರಮ ಸಹಕಾರ ಆಗಿದೆ. ಎಲ್ಲ ಇಲಾಖೆಯ ಅಧಿಕಾರಿಗಳು ಒಂದೇ ಸೂರಿನಡಿ ಸಿಗುವ ಸೌಲಭ್ಯ ಇದಾಗಿದ್ದು, ಜಿಲ್ಲೆಯ, ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತಿ ಇದ್ದು ಯಾವುದೇ ಸಮಸ್ಯೆಗಳು, ಕುಂದುಕೊರತೆಗಳನ್ನು ದಾಖಲಿಸಿ ಪ್ರಕರಣ ವಿಲೇವಾರಿ ಮಾಡಿಕೊಳ್ಳಿ ಎಂದು ಹೇಳಿದರು.
ಸ್ಥಳೀಯವಾಗಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲಾಗುವುದು. ಕೆಲವು ತಾಂತ್ರಿಕ ಹಾಗೂ ಕ್ಲೀಷ್ಟಕರ ವಾದ ಸಮಸ್ಯೆಗಳನ್ನು ಆದಷ್ಟು ಬೇಗನೆ ಪರಿಹರಿಸಲು ಕ್ರಮವಹಿಸಲಾಗುವುದು. ಸ್ಥಳೀಯವಾಗಿ ಬಗೆಹರಿಸಲು ಕಾರ್ಯಕ್ರಮ ನೆರವು ನೀಡಲಿದೆ. ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕಂದಾಯ ಇಲಾಖೆ, ಸರ್ವೇ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಹೆಸ್ಕಾಂ, ತಾಲೂಕು ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಆರೋಗ್ಯ ಇಲಾಖೆ, ಪಶು ಸಂಗೋಪನೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಮುಂತಾದ ಇಲಾಖೆಗಳ ಕುಂದುಕೊರತೆ ಬಗ್ಗೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು.
ರಸ್ತೆ ಸಮಸ್ಯೆ, ವಿದ್ಯುತ್ ಸಮಸ್ಯೆ, ಜಮೀನಿನ ದಾರಿ ಸಮಸ್ಯೆ, ನೀರಿನ ಸಮಸ್ಯೆ, ಮೂಲಭೂತ ಸೌಕರ್ಯಗಳ ಕೊರತೆಗಳ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಸಾರ್ವಜನಿಕರು ಅಹವಾಲು ನೀಡಿದರು. ಅದನ್ನು ಬಗೆಹರಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್ ಬುಕ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ನೂತನವಾಗಿ ಜಾರಿಗೆ ಬಂದಿರುವ ಸ್ಮಾರ್ಟ್ ಫೋನ್ ಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಎಸ್ಪಿ ಋಷಿಕೇಶ ಸೋನಾವಣೆ, ಇಂಡಿ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾರ್ವಜನಿಕರ ಅಹವಾಲು
ತಾಲೂಕು ಕೇಂದ್ರ ಚಡಚಣದಲ್ಲಿ ಕೆಲವು ಇಲಾಖೆಗಳು ಇರುವುದಿಲ್ಲ. ಎಲ್ಲದಕ್ಕೂ ಜಿಲ್ಲಾ ಕೇಂದ್ರವನ್ನು ಅವಲಂಬಿಸಬೇಕು. ಹಾಗಾಗಿ ಆದಷ್ಟು ಬೇಗನೆ ಇಲಾಖೆಗಳನ್ನು ಸ್ಥಾಪಿಸಿ ಜನರ ಕುಂದುಕೊರತೆ ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಚಡಚಣ ಗ್ರಾಮಸ್ಥರು ಶಾಸಕರಿಗೆ ಇದೇ ವೇಳೆ ಮನವಿ ಪತ್ರ ಸಲ್ಲಿಸಿದರು.
ದೇವರ ನಿಂಬರಗಿಯ ಬೀರಪ್ಪ ಸಲಗಾರ ಅವರು, ದೇವರ ನಿಂಬರಗಿ ಗ್ರಾಮಕ್ಕೆ ಯಾವುದೇ ನೀರಿನ ಮೂಲ ಇರುವುದಿಲ್ಲ. ಸುತ್ತ ಮುತ್ತಲಿನ ರೈತರಿಗೆ ಗ್ರಾಮಸ್ಥರಿಗೆ ತೊಂದರೆ ಆಗುತ್ತಿದೆ. ಹಾಗಾಗಿ ಜಿಗಜಿವಣಿ ಕೆರೆಯಿಂದ ದೇವರನಿಂಬರಗಿಯ ದೊಡ್ಡ ಹಳ್ಳಕೆ ನೀರು ಬಿಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಅವರು ಕೆಬಿಜೆಎನ್ನೆಲ್ ಅಧಿಕಾರಿಗಳಿಗೆ ಕ್ರಮಕೈಗೊಂಡು ನೀರು ಹರಿಸುವ ಬಗ್ಗೆ ಯೋಜನೆ ಸಿದ್ಧಪಡಿಸಿ ಎಂದು ಸೂಚನೆ ನೀಡಿದರು.
ಹಲವು ರೈತರು ತಮ್ಮ ಹೊಲಕ್ಕೆ ತೆರಳಲು ದಾರಿಯ ಸಮಸ್ಯೆ ಇದ್ದು, ನೆರೆಯವರು ದಾರಿ ನೀಡಲು ತಕರಾರು ತೆಗೆಯುತ್ತಿದ್ದಾರೆ ಎಂದು ಮನವಿ ನೀಡಿದರು. ಇದಕ್ಕೆ ಜಿಲ್ಲಾಧಿಕಾರಿ ಅವರು ಚಡಚಣ ತಹಸೀಲ್ದಾರ್ ಅವರಿಗೆ ಸ್ಥಳಕ್ಕೆ ತೆರಳಿ ಸಮಸ್ಯೆಯನ್ನು ಬಗೆಹರಿಸಿ ಎಂದು ಸೂಚನೆ ನೀಡಿದರು.
ಹೊಳೆಸಂಕ ಗ್ರಾಮದ ತೋಟದ ನಿವಾಸಿಗಳು ಸುಮಾರು 30 ಕುಟುಂಬಗಳು ತೋಟದ ವಸತಿಯಲ್ಲಿ ವಾಸವಾಗಿದ್ದು, ರಾತ್ರಿ ವೇಳೆ ವಾಸ ಮಾಡಲು ಮತ್ತು ಮಕ್ಕಳು ಹಿರಿಯರಿಗೆ ತೊಂದರೆಯಾಗುತ್ತಿದ್ದು, ಮನೆಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಲು ಮನವಿ ಮಾಡಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮದಲ್ಲಿನ ರಸ್ತೆ ದುರಸ್ತಿ, ವಿದ್ಯುತ್ ಕೊರತೆ, ಪಹಣಿ ತಿದ್ದುಪಡಿ, ಆಧಾರ್ ತಿದ್ದುಪಡಿ, ಕುಡಿಯುವ ನೀರಿನ ಸಮಸ್ಯೆ, ಬಸ್‌ನ ಕೊರತೆ ಇತ್ಯಾದಿ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು. ಒಟ್ಟು 171 ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲಾಯಿತು.
ಜನಸ್ಪಂದನ ಕಾರ್ಯಕ್ರಮಕ್ಕೂ ಮೊದಲು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದ ಅವರು ಸ್ಥಳದಲ್ಲಿದ್ದ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಖಾಸಗಿ ಆಗ್ರೋ ಸೆಂಟರ್ ಗಳಲ್ಲಿ ಹೆಚ್ಚಿನ ದರದಲ್ಲಿ ರೈತರಿಗೆ ರಸಗೊಬ್ಬರ ಹಾಗೂ ಬೀಜಗಳನ್ನು ವಿತರಿಸುತ್ತಿರುವ ದೂರುಗಳು ಬರುತ್ತಿವೆ. ಅಂಗಡಿಯವರು ಸಾರ್ವಜನಿಕರಿಗೆ ಕಾಣುವಂತೆ ದರಪಟ್ಟಿ ನಮೂದಿಸಿದ ಫಲಕ ಪ್ರದರ್ಶಿಸುವಂತೆ ಸೂಚನೆ ನೀಡಬೇಕು ಎಂದು ಡಿಸಿ ಹೇಳಿದರು.
ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನುವಿದ್ದು, ರೈತರು ಸಂಪರ್ಕ ಕೇಂದ್ರದ ಅಧಿಕಾರಿಗಳೊಂದಿಗೆ ಸಹಕರಿಸಿ ಬೀಜ ಹಾಗೂ ರಸಗೊಬ್ಬರ ತೆಗೆದುಕೊಳ್ಳಬೇಕು ಎಂದು ಹೇಳಿದರು. ಪಶು ಆಸ್ಪತ್ರಗೆ ಭೆಟಿ ನೀಡಿ ಪರಿಶೀಲಿಸಿ, ಪಶು ಆಸ್ಪತ್ರಗೆ ಸುತ್ತಲೂ ಕಪೌಂಡ್ ನಿರ್ಮಿಸಿ ಸ್ವಚ್ಚತೆಗೆ ಆಧ್ಯತೆ ನೀಡುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಸೂಚನೆ ನೀಡಿದರು.