ಭೂವಂಚನೆ ಪ್ರಕರಣ ಬೇಧಿಸಿದ ಸಿಇಎನ್, ಆದರ್ಶ ನಗರ ಪೊಲೀಸರು- ಖೊಟ್ಟಿ ದಾಖಲೆ ಸೃಷ್ಠಿಸಿ ವಂಚಿದ್ದ ಆರೋಪಿಗಳ ಬಂಧನ

ವಿಜಯಪುರ: ಖೊಟ್ಟಿ ದಾಖಲೆ ಸೃಷ್ಠಿ ಭೂಮಿ ಮಾರಾಟ ಮಾಡಿ ವಂಚಿಸುತ್ತಿದ್ದ ನಾನಾ ಪ್ರಕರಣಗಳನ್ನು ವಿಜಯಪುರ ಸಿಇಎನ್ ಮತ್ತು ಆದರ್ಶ ನಗರ ಪೊಲೀಸರು ಭೇದಿಸಿದ್ದು, ಈ ಸಂಬಂಧ ಹಲವರನ್ನು ಬಂಧಿಸಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಋಷಿಕೇಶ ಸೋನಾವಣೆ, ಸಿಇಎನ್ ಮತ್ತು ವಿಜಯಪುರ ನಗರದ ಆದರ್ಶ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣಗಳ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯಪುರ ನಗರದ ಕೆ.ಎಚ್.ಬಿ ಕಾಲನಿಯ ಮಾರುತಿ ರಾಜಾರಾಮ ನಾರಾಯಣಕರ ಅವರಿಗೆ ತಿಕೋಟಾ ತಾಲೂಕಿನ ತೊರವಿ ಗ್ರಾಮದ ವ್ಯಾಪ್ತಿಯಲ್ಲಿರುವ ಒಂದು ಎಕರೆ 36 ಗುಂಟೆ ಜಮೀನನ್ನು ಖೊಟ್ಟಿ ದಾಖಲೆ ಸೃಷ್ಠಿಸಿ ಕಬ್ಜಾ ರಹಿತ ಖರೀದಿ ಇಸಾರ ಕರಾರು ಪತ್ರ ಮಾಡಿಕೊಂಡು ರೂ. 25 ಲಕ್ಷ ಹಣವನ್ನು ಪಡೆದಿದ್ದರು.  ಆದರೆ, ಅವರು ನೀಡಿದ ದಾಖಲೆಗಳು ಖೊಟ್ಟಿ ಎಂದು ಗೊತ್ತಾಗಿ ಹಣ ಮರಳಿಸಲು ಕೇಳಿದಾಗ ಆರೋಪಿಗಳು ಹೆದರಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು, ಪ್ರಾಣ ಬೆದರಿಕೆ ಹಾಕಿದ್ದರು.  ಈ ಹಿನ್ನೆಲೆಯಲ್ಲಿ ಮಾರುತಿ ರಾಜಾರಾಮ ನಾರಾಯಣಕರ ಅವರು ವಿಜಯಪುರ ನಗರದ ನಿಸಾರ ಮಡ್ಡಿ ನಿವಾಸಿ ಚಾಂದಪೀರ ಮಹಮ್ಮದೌಸ್ ಇನಾಮದಾರ ಉರ್ಫ್ ರಮಲಿ(47), ಶಕ್ತಿನಗರದ ನಿವಾಸಿ ಮಹಿಬೂಬಸಾಬ ನಬಿಸಾಬ ಹಡಗಲಿ(59), ಆಸಾರ ಗಲ್ಲಿಯ ಮೈಬೂಬ ಅಬ್ದುಲಖಾದರ ಡಾಂಗೆ(51), ಚಪ್ಪರಬಂದ ಗಲ್ಲಿಯ ಸಿಂಕದರ ಕುತುಬಸಾಬ ಗಂಗನಳ್ಳಿ(46), ಮಹ್ಮದತಾಹೀರ ಹುಮಾಯತಖಾನ ಪಠಾಣ, ಅಲಿಯಾಬಾದಿನ ದತ್ತು ಸಾಬು ತಿಕ್ಕುಂಡಿ(29), ವಾಗೇಶ ಶಂಕರ ಪೋಳ(28), ಅರಕೇರಿ ಗ್ರಾಮದ ಸುಭಾಸ ಬಾಬಶ ಸುಳ್ಳ ಉರ್ಫ್ ಮಾನೆ, ನಗರದ ಆರ್. ಎಂ. ಹಾಸ್ಪಿಟಲ್ ಬಳಿಯ ಪ್ರತೀಕ್ಷಾ ನಗರದ ಅಶೋಕ ದೇವರಾಯ ಪೋಳ(59) ವಿರುದ್ಧ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಸಿಇಎನ್ ಪೊಲೀಸರು ಸಿಪಿಐ ರಮೇಶ ಅವಜಿ ನೇತೃತ್ವದಲ್ಲಿ ತನಿಖೆ ಕೈಗೊಂಡು ಈ ಪ್ರಕರಣ ದಾಖಲಾದ 48 ಗಂಟೆಯೊಳಗೆ ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ.  ಅಲ್ಲದೇ, ಅವರು ವಂಚಿಸಿದ ರೂ. 18.50 ಲಕ್ಷ ನಗದು ಹಣವನ್ನು ಜಪ್ತಿ ಮಾಡಿದ್ದಾರೆ.  ಅಲ್ಲದೇ, ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ.  ಅಲ್ಲದೇ ನಕಲಿ ಆಧಾರ ಕಾರ್ಡ್ ಮತ್ತು ಪಾನ್ ಕಾರ್ಡ್ ಸೃಷ್ಠಿ ಮಾಡಿದವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ವಿಜಯಪುರ ಸಿಇಎನ್ ಪೊಲೀಸರು ಭೂಅಕ್ರಮ ಪ್ರಕರಣದಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡಿರುವ ನಗದು ಹಣ.

ಆದರ್ಶ ನಗರ ಪೊಲೀಸ್ ಠಾಣೆಯ ಪ್ರಕರಣಗಳು

ಇದೇ ವೇಳೆ ವಿಜಯಪುರ ನಗರದ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ನಾಲ್ಕು ಪ್ರಕರಣಗಳನ್ನು ಪೊಲೀಸರು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.  ಈ ಕುರಿತು ತನಿಖೆಗಾಗಿ ಗೋಳಗುಮ್ಮಟ ಸಿಪಿಐ ಮಲ್ಲಯ್ಯ ಮಠಪತಿ ಮಠಪತಿ ಅವರ ನೇತೃತ್ವದಲ್ಲಿ ಆದರ್ಶ ನಗರ ಪಿಎಸ್‌ಐ ಐ. ಎಂ. ಧುಂಡಸಿ, ಸಿಬ್ಬಂದಿ ಪಿ. ವೈ. ಕಬಾಡೆ, ಐ. ಎಂ. ಪಂಡಾರಿ, ಆನಂದಯ್ಯ ವಿ. ಪಿ, ಆರ್. ಎಸ್. ಮರೆಗುದ್ದಿ, ಜೆ. ಎಸ್. ವನಂಜೆಕರ, ಐ. ವೈ. ಸೊಡ್ಡಿ ಅವರನ್ನೊಳಗೊಂಡ ತನಿಖಾ ತಂಡ ರಚಿಸಲಾಗಿತ್ತು.  ಈ ತಂಡ ನಾಲ್ಕು ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಿದೆ.

ಮೊದಲ ಪ್ರಕರಣದಲ್ಲಿ ನಗರದ ಉದ್ಯಮಿ ಅರುಣ ಹಣಮಂತ ಮಾಚಪ್ಪನವರ ಅವರು ತಿಕೋಟಾ ತಾಲೂಕಿನ ಬರಟಗಿ ಗ್ರಾಮದಲ್ಲಿ ಏಳು ಎಕರೆ 35 ಗುಂಟೆ ಜಮೀನು ಖರೀದಿಸಿದ್ದರು.  ಆದರೆ, ಈ ಜಮೀನ ಮಾಲಿಕ ರೇವಣಸಿದ್ದಪ್ಪ ಮಲ್ಲಪ್ಪ ಕೋರಿ ಅವರ ಹೆಸರಿನಲ್ಲಿ ಬೇರೋಬ್ಬರನ್ನು ಮಾಲಿಕ ಎಂದು ಖೊಟ್ಟಿ ದಾಖಲೆ ಸೃಷ್ಠಿಸಿ ತಮಗೆ ರೂ. 88 ಲಕ್ಷ ಹಣವನ್ನು ಪಡೆದು ಯಾವನೋ ಒಬ್ಬ ವ್ಯಕ್ತಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಆದರ್ಶ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ನಾಲ್ಕು ಪ್ರಕರಣಗಳನ್ನು ಕೈಗೆತ್ತಿಕೊಂಡ ಪೊಲೀಸರು, ಈ ಸಂಬಂಧ ಅಕ್ಷರಅಲಿ ಅಬ್ದುಲಜಬ್ಬಾರ ಜುಮನಾಳ, ಅಶೋಕ ಗೋಪಿಚಂದ ರಾಠೋಡ, ಸಂತೋಷ ಮಡಿವಾಳಪ್ಪ ದಳಪತಿ, ಮಹಮ್ಮದ ರಫೀಕ ಅಬ್ದುಲ ರಫೀಕ ತುರ್ಕಿ, ಪ್ರಕಾಶ ಪೋಮು ಚವ್ಹಾಣ, ಮೋಹನ ಶೇಟ್ಟೆಪ್ಪ ಹೆಗಡೆ ಅವರನ್ನು ವಿಚಾರಣೆ ನಡೆಸಿ ಅವರಿಂದ ಖೊಟ್ಟಿ ದಾಖಲೆ ಪತ್ರಗಳಾದ ಆಧಾರ ಕಾರ್ಡ್, ಪ್ಯಾನ್ ಕಾರ್ಡ್, ಕೆನರಾ ಬ್ಯಾಂಕಿನ ಪಾಸಬುಕ್, ಎಟಿಎಂ ಕಾರ್ಡ್ ಮತ್ತು ಚೆಕ್‌ಬುಕ್‌ಗಳನ್ನು ಜಪ್ತಿ ಮಾಡಿ ಸಿ.ಆರ್.ಪಿ.ಸಿ ಕಲಂ 41ರ ಅಡಿ ನೊಟೀಸ್ ನೀಡಿದ್ದಾರೆ.

ಎರಡನೇ ಪ್ರಕರಣದಲ್ಲಿ ವಿಜಯಪುರ ನಗರದ ಸ್ಟೇಷನ್ ರಸ್ತೆಯಲ್ಲಿರುವ ದಿವಟಗೇರಿ ಗಲ್ಲಿಯ ನೀಲವ್ವ ಸದ್ಪ ನಿರ್ವಾಣಶೆಟ್ಟಿ ಅವರಿಗೆ ಸೇರಿದ ವಿಜಯಪುರ ತಾಲೂಕಿನ ಕಸಬಾ ವ್ಯಾಪ್ತಿಯಲ್ಲಿ 10 ಗುಂಟೆ ಜಮೀನನ್ನು ಖೊಟ್ಟಿ ದಾಖಲೆ ಸೃಷ್ಠಿಸಿ ಭೂತನಾಳ ತಾಂಡಾದ ಶಂಕರ ರೇವೂ ಚವ್ಹಾಣ ಇವರಿಗೆ ರೂ. 5 ಲಕ್ಷಕ್ಕೆ ಮಾರಾಟ ಮಾಡಲಾಗಿದೆ ಎಂದು ಸಂತ್ರಸ್ತ ಮಹಿಳೆ ದೂರು ನೀಡಿದ್ದಳು.

ಈ ಪ್ರಕರಣದ ತನಿಖೆ ಕೈಗೊಂಡ ಆದರ್ಶ ನಗರ ಪೊಲೀಸರು, ಆರೋಪಿಗಳಾದ ಭೂತನಾಳ ತಾಂಡಾದ ಶಂಕರ ರೇವೂ ಚವ್ಹಾಣ, ನಗರದ ಭೀಮರಾಯ ಚಾಯಪ್ಪ ಕಟ್ಟಿಮನಿ(32), ದಸ್ತು ಬರಹಗಾರ ನಾಗಪ್ಪ ವಿಠ್ಠಲ ಕೋಲಕಾರ(50), ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.  ಈ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳ ಬಂಧನ ಮಾಡಬೇಕಿದೆ.

ಮೂರನೇ ಪ್ರಕರಣದಲ್ಲಿ ನಗರದ ಅಫಝಲಪುರ ಟಕ್ಕೆ ರಸ್ತೆಯ ಟ್ರೇಜರಿ ಕಾಲನಿಯ ನಿವಾಸಿ ಇಮಾಮಸಾಬ ಬಂದಗಿಸಾಬ ಸಯ್ಯದ ಅವರು ನಿಡೋಣಿ ಗ್ರಾಮದಲ್ಲಿ ಜಿನ್ನಪ್ಪ ಭೀಮಣ್ಣ ಮಂಜರಗಿ ಅವರಿಗೆ ಸೇರಿದ 5 ಎಕರೆ ಜಮೀನಿನ ಮೇಲಿದ್ದ ಭೋಜಾ(ಋಣಭಾರ) ಕಡಿಮೆ ಮಾಡಿಸಿದ ಖೊಟ್ಟಿ ದಾಖಲೆ ತಯಾರಿಸಿ ಬ್ಯಾಂಕಿಗೆ ಮೋಸ ಮಾಡಲಾಗಿದೆ ಎಂದು ದೂರು ನೀಡಿದ್ದರು.  ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಈ ಪ್ರಕರಣ ಸಂಬಂಧ ಆರೋಪಿಗಳಾದ ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದ ಜಿನ್ನಪ್ಪ ಭೀಮಣ್ಣ, ತಿಗಣಿ ಬಿದರಿಯ ಸಂತೋಶ ಶ್ರೀಶೈಲ ನಾವಿ, ನಿಡೋಣಿಯ ಮಹಾವೀರ ಜೀನಪ್ಪ ಮಂಜರಗಿ, ಆದರ್ಶ ನಗರದ ಶ್ರೀಧರ ಪಂಡಿತಪ್ಪ ಅಮೀನಗಡ, ತಿಗಣಿ ಬಿದರಿಯ ತುಕಾರಾಮ ಜ್ಯೋತಿಬಾ ಸಾಳುಂಕೆ ಅವರನ್ನು ಬಂಧಿಸಿದ್ದಾರೆ.  ಅಲ್ಲದೇ, ಖೊಟ್ಟಿಯಾಗಿ ತಯಾರಿಸಿದ ಪೇಡ್ ಪಾವತಿ, ಬಾಂಡ್ ಪೇಪರ, ಎಸ್‌ಬಿಐ ಬ್ಯಾಂಕಿನ ಹೆಸರಿನಲ್ಲಿ ತಯಾರಿಸಿದ ಸೀಲುಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಾಲ್ಕನೇ ಪ್ರಕರಣದಲ್ಲಿ ನಗರದ ಟ್ರೇಜರಿ ಕಾಲನಿಯ ಇಮಾಮಸಾಬ ಬಂದಗಿಸಾಬ ಸಯ್ಯದ ಅವರು ನೀಡಿದ ದೂರನ್ನು ದಾಖಲಿಸಿಕೊಂಡು ಬ್ಯಾಂಕಿನಲ್ಲಿ ಬೋಜಾ ಕಡಿಮೆ ಮಾಡಿದ ಖೊಟ್ಟಿ ದಾಖಲೆ ತಯಾರಿಸಿದ ಆರೋಪಿಗಳನ್ನು ಬಂಧಿಸಿದ್ದಾರೆ.  ಈ ಪ್ರಕರಣದಲ್ಲಿ ಭಾಗಿಯಾದ ಶಿವಪ್ಪ ರಾಮಪ್ಪ ನೇಜಣ್ಣವರ, ಸಂತೋಶ ಶ್ರೀಶೈಲ, ಶ್ರೀಧರ ಪಂಡಿತಪ್ಪ ಅಮೀನಗಡ, ತುಕಾರಾಮ ಜ್ಯೋತಿಬಾ ಸಾಳುಂಕೆ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.  ಈ ಪ್ರಕರಣದಲ್ಲಿ ಪರಾರಿಯಾಗಿರುವ ಮತ್ತೋರ್ವ ಆರೋಪಿಯ ಪತ್ತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಎಸ್ಪಿ ಋಷಿಕೇಶ ಸೋನಾವಣೆ ತಿಳಿಸಿದರು.

Leave a Reply

ಹೊಸ ಪೋಸ್ಟ್‌