ವಿಜಯಪುರ: ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಈ ಕುರಿತು ಚರ್ಚೆಯೂ ನಡೆಯುತ್ತಿಲ್ಲ. ವಿಷಯ ಈಗ ಅಪ್ರಸ್ತುತವಾಗಿದೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ ಹೇಳಿದ್ದಾರೆ.
ವಿಜಯಪುರ ನಗರದಲ್ಲಿ ಜಿಲ್ಲಾಸ್ಪತ್ರೆಯಲ್ಲಿರುವ ಶ್ರೀ ಪುಟ್ಟರಾಜ ಗವಾಯಿ ಟ್ರಾಮಾ ಸೆಂಟರ್ ಅಸ್ಥಿ ಚಿಕಿತ್ಸಾ ಕೇಂದ್ರಕ್ಕೆ ಭೇಟಿದ ಬಳಿಕ ಅವರು ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸದ್ಯ ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಈ ಬಗ್ಗೆ ಯಾವ ಚರ್ಚೆಯೂ ನಡೆಯುತ್ತಿಲ್ಲ. ಸಿಎಂ ಬದಲಾವಣೆ ವಿಚಾರ ಈಗ ಅಪ್ರಸ್ತುತವಾಗಿದೆ. ಉಳಿದವರು ಏನೇ ಹೇಳಬಹುದು. ಅದು ಅವರ ವೈಯಕ್ತಿಕ ಅಭಿಪ್ರಾಯ. ನಾನು ಹೇಳುತ್ತಿರುವುದು ಕಾಂಗ್ರೆಸ್ ಪಕ್ಷದ ವಿಚಾರ. ಉಳಿದವರು ಅವರ ವೈಯಕ್ತಿಕ ವಿಚಾರ ಹೇಳಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ಒಕ್ಕಲಿಗ ಸಮುದಾಯದ ಸ್ವಾಮೀಜಿ ಮಾತನಾಡಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಬೇರೆಯವರು ಮಾತನಾಡಿರುವ ಕುರಿತು ನಾನು ಏನೂ ಹೇಳೋಕಾಗಲ್ಲ ಎಂದು ತಿಳಿಸಿದ ಅವರು, ಎರಡೂವರೆ ವರ್ಷಕ್ಕೆ ಸಿಎಂ ಬದಲಾವಣೆ ಒಪ್ಪಂದ ವಿಚಾರವನ್ನು ಯಾರು ಹೇಳಿದ್ದು? ಆ ರೀತಿ ಯಾವುದು ಇಲ್ಲ ಎಂದು ಸಚಿವರು ಸ್ಪಷ್ಪಡಿಸಿದರು.
ಸಾರ್ವಜನಿಕವಾಗಿ ಚರ್ಚೆ ಮಾಡಿದರೆ ನಾವೇನೂ ಮಾಡೋಕಾಗಲ್ಲ. ಇದು ಸಾರ್ವಜನಿಕವಾಗಿ ಚರ್ಚೆ ಆಗೋ ವಿಚಾರವೂ ಅಲ್ಲ. ಎರಡೂವರೆ ವರ್ಷ ಸಿಎಂ ಅವಧಿ ಹಂಚಿಕೆ ಕುರಿತು ಆ ವಿಚಾರ ಬಂದಾಗ ನೋಡಿಕೊಳ್ಳೋಣ. ರಾಜಣ್ಣ ಅವರು ಸಿಎಂ ಅಭಿಮಾನಿಯಾಗಿ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಸಾರ್ವಜನಿಕರು, ಸ್ವಾಮೀಜಿಗಳು ಅವರ ಹೇಳಿಕೆಗಳು ಇವತ್ತಿನ ಪರಿಸ್ಥಿತಿಗೆ ಅಪ್ರಸ್ತುತವಾಗಿವೆ ಎಂದು ಅವರು ಪ್ರಶ್ನಿಸಿದರು.
ಸಿದ್ದರಾಮಯ್ಯ ನಮ್ಮ ಸಿಎಂ ಇದ್ದಾರೆ. ಒಳ್ಳೆಯ ಆಡಳಿತಗಾರದ್ದಾರೆ. ಅವರು ಸಿಎಂ ಆಗಿರುವಾಗ ಇನ್ನೋಬ್ಬ ಮುಖ್ಯಮಂತ್ರಿಯ ಬಗ್ಗೆ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ಸಿದ್ಧರಾಮಯ್ಯ ಸರಿಯಾಗಿ ಕೆಲಸ ಮಾಡುತ್ತಿಲ್ಲವಾ? ಅವರಿಗೇನು ವಯಸ್ಸಾಗಿದೆಯಾ? ಅವರ ಆರೋಗ್ಯ ಕೆಟ್ಟು ಹೋಗಿದೆಯಾ? ಅವರ ಜನಪ್ರೀಯತೆ ಕಡಿಮೆಯಾಗಿದೆಯಾ? ಸುಮ್ಮನೆ ಈ ಕುರಿತು ಯಾಕೆ ಮಾತನಾಡಬೇಕು? ಯಾರೋ ಏನೋ ಮಾತನಾಡಿದರೆ ನಾವು ನಿಯಂತ್ರಣ ಮಾಡಲು ಆಗುತ್ತಾ? ಈ ರೀತಿ ಚರ್ಚೆ ಮಾಡುವುದರಿಂದ ಸಿಎಂ ಆಗುವುದಿಲ್ಲ, ಯಾರನ್ನೂ ಬದಲಾವಣೆ ಮಾಡಲು ಆಗುವುದಿಲ್ಲ. ರಾಜ್ಯದಲ್ಲಿ ಜನಪ್ರೀಯ ನಾಯಕ, ನಂಬರ್ ಒನ್ನಾಯಕರಾಗಿ ಸಿಎಂ ಸಿದ್ಧರಾಮಯ್ಯ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಬೇರೆ ಚರ್ಚೆಗಳು ಬೇಕಿಲ್ಲ ದಿನೇಶ ಗುಂಡೂರಾವ ಹೇಳಿದರು.
ವಿಜಯಪುರದಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸುವ ಕುರಿತು ಇಲ್ಲಿನ ಸಚಿವರು ಕ್ರಮ ಕೈಗೊಳ್ಳುತ್ತಾರೆ. ಜಿಲ್ಲಾಸ್ಪತ್ರೆಯಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಈಗ ಚರ್ಚೆ ಮಾಡಲಾಗಿದೆ. ಮಾನವ ಸಂಪನ್ಮೂಲ ಇನ್ನೂ ನೇಮಕಾತಿ ಆಗಿಲ್ಲ. ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗುವುದು. ಅಗತ್ಯವಾಗಿರುವ ಎಲ್ಲ ಸೌಲಭ್ಯಗಳನ್ನು ಅತೀ ಶೀಘ್ರದಲ್ಲಿ ಒದಗಿಸಲಾಗುವುದು. ಇಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಟ್ರಾಮಾ ಸೆಂಟರ್ ವೈದ್ಯೃಕೀಯ ಶಿಕ್ಷಣ ಇಲಾಖೆಗೆ ಬರುತ್ತದೆ. ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ, ಇಲ್ಲಿ ಅಗತ್ಯವಾಗಿರುವ ಸೌಲಭ್ಯಗಳನ್ನು ಒದಗಿಸಲು ಮನವಿ ಮಾಡುವುದಾಗಿ ದಿನೇಶ ಗುಂಡೂರಾವ ತಿಳಿಸಿದರು.