ಕೃಷಿ, ಶಿಕ್ಷಣ, ವ್ಯವಹಾರ ಸಾಲಗಳಿಗೆ ಒತ್ತು ನೀಡಿ ಪ್ರಗತಿ ಸಾಧಿಸಲು ಸಿಇಓ ರಿಷಿ ಆನಂದ ಅಧಿಕಾರಿಗಳಿಗೆ ಸೂಚನೆ

ವಿಜಯಪುರ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ನಾನಾ ಬ್ಯಾಂಕುಗಳಿಂದ ಒಟ್ಟು ರೂ. 17093 ಕೋ. ಸಾಲ ಒದಗಿಸಿದ್ದು, ಕಳೆದ ವರ್ಷಕ್ಕಿಂತ ಶೇ. 3.88 ರಷ್ಟು ಪ್ರಗತಿ ಸಾಧಿಸಲಾಗಿದೆ.  ಕೃಷಿ, ಶಿಕ್ಷಣ, ವ್ಯವಹಾರ ಮನೆ ಸಾಲಗಳ ಮೇಲೆ ಒತ್ತು ನೀಡಿ ಇನ್ನಷ್ಟು ಹೆಚ್ಚಿನ ಪ್ರಗತಿ ಸಾಧಿಸುವಂತೆ ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಸೂಚನೆ ನೀಡಿದ್ದಾರೆ.

ನಗರದ ಜಿ. ಪಂ. ಸಭಾಂಗಣದಲ್ಲಿ ನಡೆದ ಜಿಲ್ಲಾ ಅಗ್ರಣೀಯ ಬ್ಯಾಂಕ್ ತ್ರೈಮಾಸಿಕ ಜಿಲ್ಲಾ ಸಲಹಾ ಸಮಿತಿ(ಡಿಎಲ್‌ಸಿ) ಸಭೆ ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ(ಡಿಎಲ್‌ಆರ್‌ಸಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು ರೂ. 17093 ಕೋ. ಸಾಲ ನೀಡಲಾಗಿದೆ.  ರೂ. 18676 ಕೋ. ಠೇವಣಿ ಸಂಗ್ರಹವಿದೆ.  ಕಳೆದ ವರ್ಷಕ್ಕಿಂತ ಶೇ. 3.88 ರಷ್ಟು ಸಾಲದಲ್ಲಿ ಪ್ರಗತಿ ಸಾಧಿಸಿದ್ದು, ಈ ಠೇವಣಿಯಲ್ಲಿ ಶೇ. 12.02 ರಷ್ಟು ಪ್ರಗತಿ ಸಾಧಿಸಲಾಗಿದೆ.  ಜೊತೆಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ. 4.81 ರಷ್ಟು ಹೆಚ್ಚುವರಿ ಗುರಿ ಹೊಂದಿದ್ದು, ಎಲ್ಲ ಬ್ಯಾಂಕುಗಳು ತಮಗೆ ನೀಡಿರುವ ಗುರಿಯನ್ನು ಸಾಧಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ, ಶಿಕ್ಷಣ, ವ್ಯವಹಾರ ಮನೆ ಸಾಲಗಳ ಮೇಲೆ ಒತ್ತು ನೀಡಿ ಪ್ರಗತಿ ಸಾಧಿಸಬೇಕು.  ತೋಟಗಾರಿಕೆ ಇಲಾಖೆಗೆ ಜಿಲ್ಲೆಯ ಬೆಳೆ ವಿಮೆ ಬಗ್ಗೆ ಜಾಹೀರಾತು ನೀಡಲು ಎಲ್ಲಾ ಬೆಳೆ ವಿಮೆ ಪರಿಹಾರ ಅರ್ಜಿಗಳು ಮುಂದಿನ 15 ದಿನಗಳೊಳಗೆ ಬಗೆಹರಿಸಬೇಕು.  ಅಲ್ಲದೇ, ಬ್ಯಾಂಕಿನವರಿಗೆ ಎಲ್ಲಾ ಸರಕಾರಿ ಸಾಲದ ಅರ್ಜಿಗಳನ್ನು ತುರ್ತಾಗಿ ವಿಲೇವಾರಿ ಮಾಡಬೇಕು ಎಂದು ಅವರು ಸೂಚನೆ ನೀಡಿದರು.

ವಿಜಯಪುರ ಜಿ. ಪಂ. ಸಿಇಓ ರಿಷಿ ಆನಂದ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಅಗ್ರಣೀಯ ಬ್ಯಾಂಕ್ ತ್ರೈಮಾಸಿಕ ಜಿಲ್ಲಾ ಸಲಹಾ ಸಮಿತಿ ಸಭೆ ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಭೆ ನಡೆಯಿತು.

 

ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ ಮಾತನಾಡಿ, ಬ್ಯಾಂಕುಗಳಲ್ಲಿ ಮತ್ತು ಎಟಿಎಂ ಗಳಲ್ಲಿ ಸೈಬರ್ ಅಪರಾಧಗಳ ಕಡಿವಾಣಕ್ಕೆ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಿಬೇಕು.  ಸೈಬರ್ ವಂಚನೆಯಾಗದಂತೆ ತಡೆಗಟ್ಟಲು ಸಾರ್ವಜನಿಕರಲ್ಲಿ ಸೂಕ್ತ ತಿಳುವಳಿಕೆ ಮತ್ತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಈ ಸಭೆಯಲ್ಲಿ ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ನೇತಾಜಿ ಗೌಡರ ಅವರು ಜಿಲ್ಲೆಯ ಮಾರ್ಚ್ 2024 ತ್ರೈಮಾಸಿಕ ವರದಿ ಪೂರ್ಣ ವಿವರಣೆಯನ್ನು ಪ್ರಸ್ತುತ ಪಡಿಸಿದರು.

ಈ ಸಂದರ್ಭದಲ್ಲಿ ಭಾರತೀಯ ರಿಜರ್ವ್ ಬ್ಯಾಂಕಿನ ಲೀಡ್ ಡಿಸ್ಟ್ರಿಕ್ಟ್ ಆಫೀಸರ್ ಅಲೋಕ ಸಿನ್ಹಾ, ನಬಾರ್ಡ್ ಜಿಲ್ಲಾ ಅಭಿವೃದ್ದಿ ವ್ಯವಸ್ಥಾಪಕ ವಿಕಾಸ ರಾಠೋಡ, ಕೆನರಾ ಬ್ಯಾಂಕಿನ ಕ್ಷೇತ್ರೀಯ ಕಾರ್ಯಾಲಯದ ರೇಣುಕಾ, ಜಿಲ್ಲೆಯ ಎಲ್ಲ ಬ್ಯಾಂಕ್ ವ್ಯವಸ್ಥಾಪಕರು, ಜಿಲ್ಲಾ ಮಟ್ಟದ ನಾನಾ ಇಲಾಖೆಗಳ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌