ದಕ್ಷಿಣ ಭಾರತದಲ್ಲಿ ಸತತವಾಗಿ 7ನೇ ಬಾರಿ ಸಂಸದನಾಗಿ ಆಯ್ಕೆಯಾದರೂ ಸಚಿವ ಸ್ಥಾನ ನೀಡಿಲ್ಲ- ದಲಿತರು ಬಿಜೆಪಿಗೆ ಮತ ಹಾಕಿಲ್ವಾ? ರಮೇಶ ಜಿಗಜಿಣಗಿ ಬೇಸರದ ನುಡಿ

ವಿಜಯಪುರ: ದಕ್ಷಿಣ ಭಾರತದಲ್ಲಿ ಸತತ ಏಳನೇ ಬಾರಿ ದಲಿತ ಸಮುದಾಯದಿಂದ ಸಂಸದನಾಗಿ ಆಯ್ಕೆಯಾಗಿದ್ದರೂ ಕೇಂದ್ರದಲ್ಲಿ ನನಗೆ ಸಚಿವ ಸ್ಥಾನ ನೀಡದಿರುವುದು ನೋವು ತಂದಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.

ವಿಜಯಪುರದಲ್ಲಿ ಸಂಸದರ ಕಚೇರಿಯಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ದಲಿತ ಸಮುದಾಯದಿಂದ ಸತತವಾಗಿ ಏಳು ಬಾರಿ ಸಂಸದನಾಗಿ ನಾನೊಬ್ಬನೇ ಆಯ್ಕೆಯಾಗಿದ್ದೇನೆ.  ಹೀಗಿದ್ದರೂ ಸಚಿವ ಸ್ಥಾನಗಳನ್ನು ಮೇಲ್ವರ್ಗದವರಿಗೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನನಗೆ ಮಂತ್ರಿಗಿರಿ ಅವಶ್ಯಕತೆ ಇಲ್ಲ.  ನನಗೆ ಜನ ಅವಶ್ಯವಾಗಿದ್ದಾರೆ.  ಸಚಿವನಾಗಬೇಕು ಎಂಬುದು ಜನರಿಗೆ ಈ ಬೇಡಿಕೆ ಆಗಿತ್ತು.  ನಾನು ದೆಹಲಿಯಿಂದ ವಾಪಸ್ಸಾದ ನಂತರ ಜನ ನನಗೆ ಥೂ ಎಂದು ಉಗುಳಿದಿದ್ದಾರೆ.  ಬಿಜೆಪಿ ದಲಿತ ವಿರೋಧಿ ಇದೆ.  ಈ ಪಕ್ಷ ಸೇರಬೇಡಿ ಎಂದು ಹೇಳಿದ್ದವು.  ಆದರೂ ನೀವು ಸೇರಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಈ ಬಾರಿ ಇಡೀ ದಕ್ಷಿಣ ಭಾರತದಲ್ಲಿ ಮೇಲ್ವರ್ಗದವರಿಗೆ ಸಚಿವ ಸ್ಥಾನ ನೀಡಿದ್ದಾರೆ.  ಹಾಗಾದರೆ ದಲಿತರು ಬಿಜೆಪಿಯನ್ನು ಬೆಂಬಲಿಸಿಯೇ ಇಲ್ವಾ? ಇದು ನ್ಯಾಯವಾ? ಈ ಬಗ್ಗೆ ನನಗೆ ಮನಸ್ಸಿಗೆ ನೋವಿದೆ ಎಂದು ಅವರು ರಮೇಶ ಜಿಗಜಿಣಗಿ ಖಾರವಾಗಿ ಹೇಳಿದರು.

ಪರಿಶಿಷ್ಠ ಜಾತಿ ಸಮುದಾಯಕ್ಕೆ ಮೀಸಲಾಗಿದ್ದ ರೂ. 32000 ಕೋ. ಮತ್ತು ಪರಿಶಿಷ್ಠ ಪಂಗಡಕ್ಕೆ ಮೀಸಲಾಗಿದ್ದ ರೂ. 13 ಕೋ. ಗಿಂತಲೂ ಹೆಚ್ಚು ಹಣವನ್ನು ಬೇರೆ ಯೋಜನೆಗಳಿಗೆ ಬಳಸಿದ್ದಾರೆ.  ಕರ್ನಾಟಕದ ಇತಿಹಾಸದಲ್ಲಿ ಪರಿಶಿಷ್ಠ ಜಾತಿ ಮತ್ತು ಪಂಗಡಕ್ಕೆ ಮೀಸಲಾಗಿದ್ದ ಹಣವನ್ನು ಯಾರೂ ಮುಟ್ಟಿರಲಿಲ್ಲ.  ನನಗೂ ರೂ. 5 ಕೋ. ಹಣ ಅನುದಾನ ಬರುತ್ತಿತ್ತು.  ಈ ಬಾರಿ ಒಂದು ರೂಪಾಯಿ ಕೂಡ ಬಂದಿಲ್ಲ.  ಸಿದ್ಧರಾಮಯ್ಯ ಹಿಂದುಳಿದ ವರ್ಗದ ಸಿಎಂ ಆಗಿ ಕೈಗೊಂಡ ಈ ನಿರ್ಣಯವನ್ನು ನಾನು ಖಂಡಿಸುತ್ತೇನೆ.  ಈ ಹಣವನ್ನೇ ನೀವು ಯಾಕೆ ಪಡೆದಿದ್ದೀರಿ? ಬೇರೆ ಇಲಾಖೆಯಿಂದ ಹಣ ಪಡೆಯಬಹುದಿತ್ತಲ್ಲವೇ? ಅದನ್ನು ಯಾಕೆ ಮುಟ್ಟಿದ್ದೀರಿ? ಸಮಾಜ ಕಲ್ಯಾಣ ಸಚಿವರಾಗಿರುವ ಮಹಾದೇವಪ್ಪ ಪರಿಶಿಷ್ಠ ಸಮುದಾಯಕ್ಕೆ ಸೇರಿದ್ದರೂ ಈವರೆಗೆ ಇದನ್ನು ವಿರೋಧಿಸಿಲ್ಲ.  ಈ ಹಿಂದೆ ನಾನು ರಾಜ್ಯದಲ್ಲಿ ಸಚಿವನಾಗಿದ್ದಾಗ ಈ ರೀತಿ ನಿರ್ಧಾರ ಕೈಗೊಂಡಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದೆ.  ಆದರೆ, ಅಂದು ಜೆ. ಎಚ್. ಪಟೇಲ್ ಅವರು ನನ್ನನ್ನು ತಡೆದಿದ್ದರು.  ನಾವು ಹಠ ಮಾಡದಿದ್ದರೆ ಇವು ಉಳಿಯುವುದಿಲ್ಲ ಎಂದು ಅವರು ಹೇಳಿದರು.

ವಾಲ್ಮಿಖಿ ನಿಗಮದ ಹಣ ವರ್ಗಾವಣೆ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಆ ಇಲಾಖೆಯ ಸಚಿವರು ರಾಜೀನಾಮೆ ನೀಡಿದ್ದಾರೆ.  ಆದರೆ, ಹಣಕಾಸು ಸಚಿವರಾಗಿರುವ ಸಿಎಂ ಎಸ್. ಸಿದ್ಧರಾಯಮ್ಯ ಈ ಬಗ್ಗೆ ಯೋಚಿಸಬೇಕಿತ್ತು.  ಇದನ್ನು ನಾನು ಖಂಡಿಸುತ್ತೇನೆ.  ಪ್ರತಿಭಟಿಸಲು ಮೇಲ್ವರ್ಗದವರಿಗೆ ಹಣವಿರುತ್ತದೆ.  ಆದರೆ, ನಮ್ಮಂಥ ದಲಿತ ಸಮುದಾಯ ಆರ್ಥಿಕವಾಗಿ ಸದೃಢರಾಗಿಲ್ಲ.  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ವಿಚಾರದಲ್ಲಿ ಪ್ರತಿಭಟನೆ ಮಾಡಬೇಕಿತ್ತು.  ನಾನು 25 ವರ್ಷಗಳ ರಾಜಕಾರಣದಲ್ಲಿ ಒಂದು ದಿನವೂ ನಮ್ಮ ಸಮುದಾಯದ ಸಭೆ ನಡೆಸಿಲ್ಲ.  ನಮ್ಮ ಸಮಾಜ ಬಡವಾಗಿದೆ.  ಕಾಂಗ್ರೆಸ್ಸಿನಲ್ಲಿ ಇನ್ನೂ ಹಲವಾರು ಹಗರಣಗಳು ಇವೆ.  ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರತಿದಿನ ಭ್ರಷ್ಟಾಚಾರದ ಕುರಿತು ಪತ್ರಿಕೆಗಳಲ್ಲಿ ವರದಿಯಾಗುತ್ತಿತ್ತು.  ಆ ಚಾಳಿಯನ್ನು ಸಿದ್ಧರಾಮಯ್ಯ ಸರಕಾರದಲ್ಲಿ ಎತ್ತಿ ಹಿಡಿದಿದ್ದಾರೆ. ನೂರಾರು ಅವ್ಯವಹಾರಗಳು ಕರ್ನಾಟಕದಲ್ಲಿ ನಡೆದಿವೆ.  ಒಂದು ವರ್ಷದಲ್ಲಿ ಒಂದೂ ಅಭಿವೃದ್ಧಿ ಕೆಲಸಗಳಾಗಿಲ್ಲ.  ಇದು ನಾಚಿಕೆಗೇಡಿ ವಿಚಾರ.  ಎಲ್ಲ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಹಾಕಿದ್ದಾರೆ.  ನಿಮಗೆ ಕೊಡಲು ತಾಕತ್ತಿಲ್ಲದಿದ್ದರೆ, ದಲಿತರ ಹಣವನ್ನು ಯಾಕೆ ನುಂಗಬೇಕು? ಎಂದು ರಮೇಶ ಜಿಗಜಿಣಗಿ ಖಾರವಾಗಿ ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ವಿಧಾನ ಪರಿಷತ ಮಾಜಿ ಶಾಸಕ ಅರುಣ ಶಹಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌