ನವದೆಹಲಿ: ನಗರ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಅವರು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ವಿಜಯಪುರ ನಗರದಲ್ಲಿ ರೈಲ್ವೆ ಮೇಲ್ಸೆತುವೆ ನಿರ್ಮಾಣ ಸೇರಿದಂತೆ ಉತ್ತರ ಕರ್ನಾಟಕ ಭಾಗದ ನಾನಾ ರೈಲ್ವೆ ಅಭಿವೃದ್ಧಿ ಯೋಜನೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಚಿವರೊಂದಿಗೆ ಮಾತನಾಡಿದ ಅವರು, ವಿಜಯಪುರ ನಗರವು ಸುಮಾರು 10 ಲಕ್ಷ ಜನಸಂಖ್ಯೆ ಹೊಂದಿದ್ದು, ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಹುಟಗಿ- ಗದಗ ನಡುವೆ ಡಬ್ಲಿಂಗ್ ಟ್ರ್ಯಾಕ್ ಮತ್ತು ರೈಲ್ವೆ ವಿದ್ಯುದೀಕರಣ ಆಗುತ್ತಿರುವುದರಿಂದ ಈ ಮಾರ್ಗದಲ್ಲಿ ವಂದೇ ಭಾರತ್ ಮತ್ತು ಇತರೆ ಸೂಪರ್ ಪಾಸ್ಟ್ ರೈಲುಗಳು ಸಂಚರಿಸುವ ಸಾಧ್ಯತೆಯಿದೆ. ಹೀಗಾಗಿ ವಿಜಯಪುರ ರೈಲು ನಿಲ್ದಾಣವನ್ನು ಅಮೃತ್ ಭಾರತ್ ಸ್ಟೇಶನ್ ಸ್ಕಿಮ್ ಅಡಿಯಲ್ಲಿ ಮೇಲ್ದರ್ಜೆಗೆ ಏರಿಸಬೇಕು. ಈ ಮೂಲಕ ರೈಲು ನಿಲ್ದಾಣ ನವೀಕರಣ, ಪ್ರಯಾಣಿಕರಿಗೆ ಸೌಕರ್ಯ, ಪ್ರಯಾಣಿಕರ ಮಾರ್ಗದರ್ಶಿ ಸೂಚನೆ ಫಲಕಗಳ ಅಳವಡಿಕೆ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಅಲ್ಲದೇ, ನಗರದ ಮುಖ್ಯ ರೈಲು ನಿಲ್ದಾಣದಿಂದ ಇಬ್ರಾಹಿಂಪುರ ರೈಲು ನಿಲ್ದಾಣದ ಮಾರ್ಗ ಮಧ್ಯದಲ್ಲಿ ಬರುವ ರೈಲ್ವೆ ಕಿ.ಮೀ 188/400-500 (ಕನಕದಾಸ ಬಡಾವಣೆ ಬಿ. ಎಸ್. ಎನ್. ಎಲ್. ಕ್ವಾಟರ್ಸ) ಹತ್ತಿರದ ಜಾಗದಲ್ಲಿ ನೈಸರ್ಗಿಕವಾಗಿ ಇರುವ ಎತ್ತರದ ಗುಡ್ಡಕ್ಕೆ ರೈಲ್ವೆ ಮೇಲ್ಸೆತುವೆಯ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಅವಶ್ಯಕತೆಯಿದೆ. ಇದರಿಂದ ಈ ಸೇತುವೆಯ ಪಶ್ಚಿಮಕ್ಕೆ ಇರುವ ರಂಭಾಪುರ, ನಾನಾ ವಾಹನ ಕಂಪನಿಗಳು, ಬಡಾವಣೆಗಳು, ಪ್ರದೇಶಗಳು, ಹೈಪರ್ ಮಾರ್ಟ, ಎನ್. ಎಚ್. 51 ಹಾಗೂ ನಾನಾ ಇಲಾಖೆಗಳಿವೆ. ಮತ್ತೊಂದೆಡೆ ಪೂರ್ವ ಭಾಗವು ಡಿಸಿ ಕಚೇರಿ, ಜಿಲ್ಲಾ ನ್ಯಾಯಾಲಯಗಳು, ಕೆಇಬಿ, ಆಸ್ಪತ್ರೆಗಳು, ದೇವಸ್ಥಾನಗಳು, ಅನೇಕ ಬಡಾವಣೆಗಳನ್ನು ಹೊಂದಿದ್ದು, ಎರಡು ಭಾಗಗಳಿಗೆ ಸಂಚರಿಸಲು ಸುಲಭವಾಗಲಿದೆ. ಅಲ್ಲದೇ, ಇದರಿಂದ ಸಮಯ ಮತ್ತು ರಾಷ್ಟ್ರೀಯ ಇಂಧನ ಸಹ ಉಳಿತಾಯವಾಗಲಿದೆ ಎಂದು ಅವರು ತಿಳಿಸಿದರು.
ಅಷ್ಟೇ ಅಲ್ಲ, ಈಗ ಮುಂಬಯಿಂದ ಸೋಲಾಪುರ ವರೆಗೆ ಸಂಚರಿಸುತ್ತಿರುವ ವಂದೇ ಭಾರತ್ ರೈಲು ಸೇವೆಯನ್ನು ವಿಜಯಪುರವರೆಗೆ ವಿಸ್ತರಿಸಬೇಕು. ಹಜರತ್ ನಿಜಾಮುದ್ದೀನ್ ಸೂಪರ್ ಫಾಸ್ಟ್ ಎಕ್ಸಪ್ರೆಸ್ ರೈಲು ವಾರದಲ್ಲಿ ಐದು ದಿನ ಓಡಿಸಬೇಕು. ಮೈಸೂರು- ಬಾಗಲಕೋಟ ಮಧ್ಯೆ ಸಂಚರಿಸುವ ಬಸವ ಎಕ್ಸಪ್ರೆಸ್ ರೈಲನ್ನು ಗದಗವರೆಗೆ ವಿಸ್ತರಿಸಬೇಕು. ಇದರಿಂದ ಈ ಭಾಗದ ಪ್ರಯಾಣಿಕರ ಸಂಚಾರಕ್ಕೆ ಮತ್ತು ಉತ್ತರ ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ವಿ. ಸೋಮಣ್ಣ ಅವರಿಗೆ ಬಸನಗೌಡ ಪಾಟೀಲ ಯತ್ನಾಳ ಈ ಸಂದರ್ಭದಲ್ಲಿ ತಿಳಿಸಿದರು.