ವಿಜಯಪುರ: ನೈರ್ಮಲ್ಯವನ್ನು ಪಾಲಿಸುವಲ್ಲಿ ವಿದ್ಯಾರ್ಥಿಗಳು ಮತ್ತು ಸ್ವಚ್ಚತೆಯ ಪ್ರಾಮುಖ್ಯತೆ ಹಾಗೂ ನೈರ್ಮಲ್ಯದ ವಾತಾವರಣವನ್ನು ಪ್ರೇರೆಪಿಸುವಲ್ಲಿ ಶಾಲೆ- ಕಾಲೇಜುಗಳ ಪಾತ್ರ ಮುಖ್ಯವಾಗಿದೆ ಎಂದು ಲಾಡಲಿ ಫೌಂಡೇಶನ ಟ್ರಸ್ಟಿನ ಸ್ವಚ್ಚತಾ ರಾಯಭಾರಿ ಶಿಫಾ ಜಮಾದಾರ ಅಭಿಪ್ರಾಯಪಟ್ಟಿದ್ದಾರೆ.
ನಗರದ ಅಫಜಲಪೂರ ಟಕ್ಕೆಯಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ- 49ರಲ್ಲಿ ನವದೆಹಲಿಯ ಲಾಡಲಿ ಫೌಂಡೇಶನ್ ಮತ್ತು ವಿಜಯಪುರ ಜಿಲ್ಲಾಡಳಿತ ಸಹಯೋಗದಲ್ಲಿ ನಡೆದ ಶಾಲೆಯ ಮಕ್ಕಳಲ್ಲಿ ಸ್ವಚ್ಚತೆಯ ಅರಿವು ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ನೈರ್ಮಲ್ಯ ಮತ್ತು ನೈರ್ಮಲ್ಯದ ಮೂಲ ಅರ್ಥವನ್ನು ತಿಳಿದುಕೊಳ್ಳಬೇಕು. ಶೌಚಾಲಯಗಳನ್ನು ಬಳಸಬೇಕು. ವಾಶರೂಮಗಳನ್ನು ಬಳಸಿದ ನಂತರ ಅಲ್ಲಿ ಸ್ವಚ್ಚ ಪರಿಸರವನ್ನು ಕಾಪಾಡಬೇಕು ಎಂದು ಅವರು ಹೇಳಿದರು.
ನವದೆಹಲಿ ಲಾಡಲಿ ಫೌಂಡೇಶನ ಟ್ರಸ್ಟಿನ ಯೋಜನಾ ನಿರ್ದೇಶಕಿ ಸೂರಬಿ ಸಿಂಗ ಮಾತನಾಡಿ, ಶಿಕ್ಷಕರು ಮತ್ತು ಪೋಷಕರು ನೈರ್ಮಲ್ಯ ಕಾಪಾಡುವಲ್ಲಿ ಮುಖ್ಯವಾದ ಪಾತ್ರವನ್ನು ವಹಿಸಿದ್ದಾರೆ. ಅವರು ಮಕ್ಕಳಲ್ಲಿ ಸ್ವಚ್ಚತೆಯ ಭಾವನೆಯನ್ನು ಬೆಳೆಸಬೇಕು. ನೈರ್ಮಲ್ಯವನ್ನು ಪ್ರೋತ್ಸಾಹಿಸಬೇಕು. ಅದೇ ರೀತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲೆ, ಮನೆಗಳನ್ನು ಹೇಗೆ ಸ್ವಚ್ಚಗೊಳಿಸಬೇಕು ಹಾಗೂ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿದಿರಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸುಮಾರು 200 ವಿದ್ಯಾರ್ಥಿಗಳಿಗೆ ಆಟದ ಜೊತೆಗೆ ಸ್ವಚ್ಚತೆಯ ಅರಿವು ಮತ್ತು ಆಹಾರ ಪದಾರ್ಥ ಪ್ಯಾಕೇಜ್ ಜೂಸ್ ಪ್ಯಾಕೇಜ್ ನೀಡಿ ಅದನ್ನು ಬಳಸಿದ ನಂತರ ವಿದ್ಯಾರ್ಥಿಗಳು ಯಾವ ರೀತಿ ತಾಜ್ಯವಿಲೇವಾರಿ ಮಾಡಬೇಕು ಮತ್ತು ಕೈ ತೊಳೆದುಕೊಳ್ಲಬೇಕೆಂದು ತರಬೇತಿ ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಾಧ್ಯಾಪಕ ಚಂದ್ರಕಾಂತ ಕನಸೆ, ಶಿಕ್ಷಕರಾದ ಶಿವಾನಂದ ರೂಗಿ, ಮಲ್ಲಪ್ಪ ಸ್ವಾಮಿ, ನೀಲಮ್ಮ ಹಳ್ಳೂರ, ರುಕ್ಸಾನಾ ಮನಿಯಾರ, ಸವಿತಾ ಜಿಗರಿ, ಲಾಡಲಿ ಫೌಂಡೇಶನದ ಕಾರ್ಯಕ್ರಮ ಸಮನ್ವಯಾಧಿಕಾರಿ ಸರಿತಾ ಚಕ್ರಸಾಲಿ, ಪ್ರೀತಿ, ಶೇಖರ ಪೋಲು ಉಪಸ್ಥಿತರಿದ್ದರು.