ಗುಂಟಾ ನಿವೇಶನಗಳ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ- ಡಿಸಿ ಟಿ.‌ ಭೂಬಾಲನ್ ಸೂಚನೆ

ವಿಜಯಪುರ: ನಗರಾದ್ಯಂತ ವಿಜಯಪುರ ನಗರಾಭಿವೃದ್ದಿ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ ಕೆಲ ಭೂ ಮಾಲೀಕರು ತಮ್ಮ ಕೃಷಿ ಜಮೀನುಗಳನ್ನು ಖಾಸಗಿಯಾಗಿ ವಿಭಾಗಿಸಿ ಗುಂಟೆವಾರು ನಿವೇಶನಗಳನ್ನು ರಚಿಸಿ ಮಾರಾಟ ಮಾಡುವುದು ನಿಯಮ ಬಾಹಿರವಾಗಿದ್ದು, ಈ ರೀತಿಯ ಅನಧಿಕೃತ ಗುಂಟಾ ನಿವೇಶನಗಳ ನಿರ್ಮಾಣಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ನಗರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಸರಕಾರದಿಂದ ಅನುಮೋದನೆಯಾದ ಮಹಾಯೋಜನೆಯಲ್ಲಿ ಪ್ರಸ್ತಾಪಿಸಿರುವ ರಸ್ತೆಗಳಲ್ಲಿ ನಿವೇಶನ-ಕಟ್ಟಡಗಳನ್ನು ಹಾಗೂ ಅನಧಿಕೃತ ಗುಂಟಾ ನಿವೇಶನ ರಚನೆ ತಡೆಗಟ್ಟುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಗುಂಟಾ ನಿವೇಶನ ಮಾಡುವ ಭೂ ಮಾಲೀಕರಿಗೆ ಹಲವು ಬಾರಿ ತಿಳುವಳಿಕೆ ನೀಡಿದರೂ ಸಹ ಗುಂಟಾ ನಿವೇಶನ ರಚನೆ ಕಂಡು ಬಂದಿದ್ದು, ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಜಯಪುರದಲ್ಲಿ ಡಿಸಿ ಟಿ. ಭೂಬಾಲನ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಗುಂಟಾ ನಿವೇಶಮ ರಚನೆ ಕುರಿತು ಸೂಚನೆ ನೀಡಿದರು.

ಅನಧಿಕೃತವಾಗಿ ನಿರ್ಮಾಣಗೊಂಡ ಬಡಾವಣೆಗಳ ನಿವೇಶನಗಳಿಗೆ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ವತಿಯಿಂದ ನೀರಿನ ಸಂಪರ್ಕ, ಹೆಸ್ಕಾಂ ವತಿಯಿಂದ ವಿದ್ಯುತ್ ಸಂಪರ್ಕ ಅಳವಡಿಸದೇ ತಡೆಹಿಡಿಯುಬೇಕು. ಸಮರ್ಪಕ ದಾಖಲೆಗಳಿದ್ದರೆ ಮಾತ್ರ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕು. ಸಾರ್ವಜನಿಕರು ಸಹ ದಾಖಲೆ ಇಲ್ಲದ ಅನಧಿಕೃತ ಗುಂಟಾ ನಿವೇಶನ ಖರೀದಿ ಮಾಡದೇ ನಗರ ಅಭಿವೃದ್ದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.

ಸರಕಾರದಿಂದ ಅನುಮೋದನೆಯಾದ ಮಹಾಯೋಜನೆಯ ರಸ್ತೆಗಳ ಸಮೀಕ್ಷೆ ನಡೆಸಿ, ಅತಿಕ್ರಮಣವಾದ ಜಾಗ ತೆರವುಗೊಳಿಸಿ ನಗರಾಭಿವೃದ್ದಿ ಪ್ರಾಧಿಕಾರ ಹಾಗೂ ಮಹಾನರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ ಅವರು, ನಗರದ ವಿವಿಧೆಡೆ ರಸ್ತೆಗಳ ಮೇಲೆ ಅನಧಿಕೃತವಾಗಿ ನಿವೇಶನ ಹಾಗೂ ಕಟ್ಟಡಗಳನ್ನು ರಚಿಸುತ್ತಿರುವುದ ಕಂಡು ಬಂದಿದ್ದು, ಕೂಡಲೇ ತಡೆಗಟ್ಟಿ ಈ ಜಾಗವನ್ನು ತೆರವುಗೊಳಿಸುವ ಮೂಲಕ ಅತಿಕ್ರಮಣವಾಗದಂತೆ ನೋಡಿಕೊಳ್ಳಬೇಕು. ವಿಜಯಪುರ ನಗರದ ಯೋಜನಾ ಪ್ರದೇಶಕ್ಕೆ ಸರ್ಕಾರದಿಂದ ಅನುಮೋದನೆಯಾದ ಮಹಾಯೋಜನೆಯ ರಸ್ತೆಗಳ ಮೇಲೆ ಅನಧಿಕೃತವಾಗಿ ನಿವೇಶನ ಹಾಗೂ ಕಟ್ಟಡಗಳು ನಿರ್ಮಾಣವಾಗದಂತೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

ಈ ಸಭೆಯಲ್ಲಿ ಎಸ್ಪಿ ಋಷಿಕೇಶ ಸೊನಾವಣೆ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ವಿಜಯಪುರ ಉಪವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ ಸೇರಿದಂತೆ ಜಿಲ್ಲಾ ಮಟ್ಟದ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌