ಬೆಂಗಳೂರು: ಬೆನ್ನುಮೂಳೆಯ ಡಿಸ್ಕ್‌ಲೊಕೇಟ್ ಆಗಿದ್ದ ಪರಿಣಾಮ ಪಾರ್ಶ್ವವಾಯು ಆತಂಕಕ್ಕೆ ಒಳಗಾಗಿದ್ದ 111 ಕೆ.ಜಿ. ತೂಕದ 15 ವರ್ಷದ ಬಾಲಕನಿಗೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿ ಗಮನ ಸೆಳೆದಿದ್ದಾರೆ.
ಮೈಕ್ರೋ-ಲುಂಬಾರ್ ಡಿಸ್ಸೆಕ್ಟಮಿ ಎಂಬ ಕಾಲು ಉಳಿಸುವ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯನ್ನು ಬನ್ನೇರುಘಟ್ಟ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಮಾಡಿದೆ. ಫೋರ್ಟಿಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಸಲಹೆಗಾರ ಡಾ. ಗಣೇಶ್ ವಿ. ನೇತೃತ್ವದ ತಂಡ ಒಂದು ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿದೆ.
ಈ ಕುರಿತು ಮಾತನಾಡಿದ ವೈದ್ಯರು, 111 ಕೆ.ಜಿ. ತೂಕದ15 ವರ್ಷದ ಸೈಯದ್ ಸಲಾಹುದೀನ್ ಕ್ವಾದ್ರಿ ಎಂಬ ಬಾಲಕ ಕಾರಣಾಂತರಗಳಿಂದ ಬೆನ್ನಿನ ಮೂಳೆಯ ಡಿಸ್‌ಲೊಕೇಟ್ ನಿಂದ ಅಸಾಧ್ಯ ನೋವಿನ ಸಮಸ್ಯೆ ಎದುರಿಸುತ್ತಿದ್ದ. ಈ ನೋವು ಕ್ರಮೇಣ ಬೆನ್ನಿನಿಂದ ಕಣಕಾಲುವರೆಗೂ ಹಬ್ಬಿತ್ತು. ನಾಲ್ಕು ತಿಂಗಳುಗಳ ಕಾಲ ಈ ನೋವನ್ನು ಹಾಗೇ ನಿರ್ಲಕ್ಷಿಸಲಾಗಿತ್ತು. ಇದರಿಂದಾಗಿ ಈ ಬಾಲಕ ನಡೆಯಲು, ಕೂಡಲು ಸಹ ಆಗದಷ್ಟು ಕಷ್ಟ ಅನುಭವಿದುವಂತಾಗಿತ್ತು ಎಂದು ತಿಳಿಸಿದರು.
ಫೋರ್ಟಿಸ್ ಆಸ್ಪತ್ರೆಗೆ ದಾಖಲಾದ ಬಳಿಕ ಬಾಲಕನಿಗೆ MRI ಸ್ಕ್ಯಾನ್ ಮಾಡಿದಾಗ ಬೆನ್ನುಮೂಳೆಯ L3-, L4 ಮಟ್ಟದಲ್ಲಿ ತೀವ್ರವಾದ ಪೋಸ್ಟರೊಸೆಂಟ್ರಲ್ ಡಿಸ್ಕ್ ಎಕ್ಸ್‌ಟ್ರಶನ್ ಆಗಿರುವುದು ಪತ್ತೆಯಾಯಿತು. ಹೀಗಾಗಿ ಬಾಲಕನ ಮೊಣಕಾಲಿನವರೆಗೂ ಡಿಸ್‌ಲೊಕೇಟ್‌ನ ಪ್ರಭಾವ ಉಂಟಾಗಿತ್ತು. ಈ ನೋವನ್ನು ಹೀಗೆ ನಿರ್ಲಕ್ಷ್ಯ ಮಾಡಿದ್ದರೆ ಮುಂದೊಂದು ದಿನ ಆ ಕಾಲು ಪಾರ್ಶ್ವವಾಯು ಆಗುವ ಸಾಧ್ಯತೆ ಹೆಚ್ಚಾಗಿತ್ತು. ಬಾಲಕನ ಆರೋಗ್ಯದ ಗಂಭೀರತೆಯನ್ನು ಪರಿಗಣಿಸಿ ಆತನಿಗೆ ಮೈಕ್ರೊ-ಲುಂಬರ್ ಡಿಸೆಕ್ಟಮಿ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಲಾಯಿತು. ಇದು ನರಗಳ ಮೇಲಿನ ಒತ್ತಡವನ್ನು ನಿವಾರಿಸಲು ಡಿಸ್‌ಲೊಕೇಟ್ ಆಗಿರುವ ಡಿಸ್ಕ್ ಅನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆ ವಿಧಾನವಾಗಿದೆ. ಬಾಲಕನ ತೂಕ ಅಧಿಕವಾಗಿದ್ದರಿಂದ ಈ ಶಸ್ತ್ರಚಕಿತ್ಸೆ ಸಾಕಷ್ಟು ಸವಾಲಾಗಿತ್ತು. ಆದರೂ ನಮ್ಮ ತಂಡ ಕಾರ್ಯಕ್ರಮತೆಯಿಂದ ಸುರಕ್ಷತೆಯಾಗಿ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಈ ಶಸ್ತ್ರಚಿಕಿತ್ಸೆಯ ನಂತರ ಬಾಲಕನ ನೋವು ಸಂಪೂರ್ಣ ನಿವಾರಣೆಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಡಾ. ಗಣೇಶ ವಿ. ತಿಳಿಸಿದರು.