ವಿಜಯಪುರ: ಶಿಕ್ಷಕರ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ವಿಧಾನ ಪರಿಷತ ಮಾಜಿ ಶಾಸಕ ಅರುಣ ಶಹಾಪುರ ನೇತೃತ್ವದಲ್ಲಿ ಜಿ. ಪಂ. ಡಿ. ಎಸ್. ವಿಜಯಕುಮಾರ ಆಜೂರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸರಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ನಾನಾ ಬೇಡಿಕೆಗಳಾದ ಓಪಿಎಸ್ ಜಾರಿ, ಏಪ್ರಿಲ್/ಮೇ ತಿಂಗಳಲ್ಲಿ ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಜಾರಿ, ನಿಯಮಿತವಾಗಿ ಸರಕಾರಿ ಆರ್ ಎಂ ಎಸ್ ಎ, ಸಾಮಾನ್ಯ ಸರಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ವೇತನ ಬೇಡಿಕೆ ಈಡೇರಿಕೆ, 7ನೇ ವೇತನ ಆಯೋಗ ಜಾರಿ, ಪ್ರತಿವರ್ಷ ನಿಯಮಿತವಾಗಿ ಪ್ರೌಢಶಾಲಾ ಶಿಕ್ಷಕರ ಮುಖ್ಯೋಪಾಧ್ಯಾಯರ ಹುದ್ದೆಗೆ ಮುಂಬಡ್ತಿ ನೀಡುವುದು, ಅನುದಾನಿತ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಜ್ಯೋತಿ ಸಂಜೀವಿನಿ ಸ್ಕಿಂ ನ್ನು ವಿಸ್ತರಿಸುವುದು, ಪ್ರೌಢಶಾಲೆ ಶಿಕ್ಷಕರನ್ನು ಪದವಿಪೂರ್ವ ಕಾಲೇಜುಗಳಿಗೆ ಮುಂಬಡ್ತಿ ನೀಡುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅರುಣ ಶಹಾಪೂರ, ಎ. ಎಸ್. ಬಿರಾದಾರ, ವೈ. ಎಂ. ಪ್ರಧಾನಿ, ಜಿ. ಎಸ್. ಸಾವಳಗಿ, ಎಸ್. ಜಿ. ಹಂಚನಾಳ, ಎಸ್. ಬಿ. ಜೋಶಿ ಮುಂತಾದವರು ಉಪಸ್ಥಿತರಿದ್ದರು.