ವಿಜಯಪುರ: ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮನೋಭಾವ ಬೆಳೆಸಿ ಅವರನ್ನು ಭಾರತದ ಆದರ್ಶ ನಾಗರಿಕರನ್ನಾಗಿ ಮಾಡಲು ಭಾರತ್ ಸೇವಾದಳ ಶ್ರಮಿಸುತ್ತಿದೆ ಎಂದು ಡಾ. ಅಶೋಕ ಜಾದವ ಹೇಳಿದ್ದಾರೆ.
ಭಾರತ ಸೇವಾದಳ ಜಿಲ್ಲಾ ಸಮಿತಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ನಂಬರ್- 24 ರಲ್ಲಿ ಪಿಯು ಕಾಲೇಜಿನ ಉಪನ್ಯಾಸಕರಿಗಾಗಿ ಆಯೋಜಿಸಲಾದ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ ಹಾಗೂ ಭಾರತ ಸೇವಾದಳ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶಿಸ್ತು, ಪ್ರಾಮಾಣಿಕತೆಯೊಂದಿಗೆ ಇಂದಿನ ಯುವ ಜನಾಂಗವನ್ನು ದೇಶದ ಸಂಪತ್ತಿಗಾಗಿ ಬೆಳೆಸುವಲ್ಲಿ ಭಾರತ ಸೇವಾದಳ ಸಹಕಾರಿಯಾಗಿದೆ. ಗಾಂಧೀಜಿಯವರ ತತ್ವಾದರ್ಶಗಳನ್ನು ಮುಂದಿಟ್ಟುಕೊಂಡು ಧೈರ್ಯ, ಸಂಯಮ, ತ್ಯಾಗ ಮನೋಭಾವನೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಕೆಲಸವನ್ನು ಭಾರತ ಸೇವಾದಳ ಮಾಡುತ್ತಿದೆ. ಯುವ ಜನಾಂಗವನ್ನು ಈ ದೇಶದ ಸಂಪತ್ತಾಗಿ ಮಾಡುವಲ್ಲಿ ಸೇವಾದಳದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸುವಿಧಾ ಸಂಸ್ಥೆಯ ಅಧ್ಯಕ್ಷ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಹಾಗೂ ಸಮಾಜ ಸೇವಕ ಫಯಾಜ್ ಕಲಾದಗಿ ಮಾತನಾಡಿ, ಭಾರತ ಸೇವಾದಳದಿಂದ ಒಗ್ಗಟ್ಟು ಪ್ರದರ್ಶನ ಸಾಧ್ಯವಿದೆ. ಜನರಲ್ಲಿ ದೇಶಭಕ್ತಿ ಮೂಡಿಸುವ ಸಲುವಾಗಿ ಪ್ರಾರಂಭವಾದ ಸಂಘಟನೆ ಇದಾಗಿದೆ. ಇಲ್ಲಿ ಯಾವುದೇ ರಾಜಕೀಯ ಇಲ್ಲದೆ ಅಚ್ಚುಕಟ್ಟಾಗಿ ನಡೆಯುತ್ತಿದೆ. ಪ್ರತಿ ಶಾಲಾ ಕಾಲೇಜುಗಳಲ್ಲಿ ಒಗ್ಗಟ್ಟಿನ ಭಾವನೆ ಮೂಡಿಸಲು ದೇಶದ ಇತಿಹಾಸವನ್ನು ತಿಳಿಸುವ ಕೆಲಸ ಸಂಘಟನೆಯಿಂದ ಆಗಬೇಕಾಗಿದೆ ಎಂದು ಹೇಳಿದರು.
ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಎಸ್. ಪಿ. ಬಿರಾದಾರ(ಕಡ್ಲೆವಾಡ) ಮಾತನಾಡಿ, ಹಿಂದುಸ್ತಾನಿ ಸೇವಾದಳವನ್ನು ನಾ. ಸು. ಹರ್ಡಿಕರ ಅವರು ಭಾರತ ಸೇವಾದಳವನ್ನಾಗಿ ಪರಿವರ್ತಿಸಿದ್ದಾರೆ. ಭಾವೈಕ್ಯತೆ ಜಾಥಾ ಸೇರಿದಂತೆ ನಾನಾ ಸೇವಾ ಕಾರ್ಯಕ್ರಮಗಳನ್ನು ಭಾರತ ಸೇವಾದಳದ ಮೂಲಕ ಆಯೋಜಿಸಿ ಮಕ್ಕಳಲ್ಲಿ ಶಿಸ್ತು, ತ್ಯಾಗ, ಮನೋಭಾವ, ಧೈರ್ಯದಂಥ ಗುಣಗಳನ್ನು ಬೆಳೆಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಭಾರತ ಸೇವಾದಳದ ವಲಯ ಸಂಘಟಿಕ ನಾಗೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಂಪನ್ಮೂಲ ವ್ಯಕ್ತಿ ಎಸ್. ಎಲ್. ರಾಠೋಡ ವಂದಿಸಿದರು. ಸಂಪನ್ಮೂಲ ಶಿಕ್ಷಕ ಸೋಮಶೇಖರ ರಾಠೋಡ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಕನಿಷ್ಟ 50 ಜನ ಉಪನ್ಯಾಸಕರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಾಧಿಕ್ ಜಾನವೇಕರ, ಶಾಲಾ ಮುಖ್ಯ ಶಿಕ್ಷಕ ಗುರು ವಿ. ಆರ್, ಹಾಲವರ ಮುಂತಾದವರು ಉಪಸ್ಥಿತರಿದ್ದರು.