ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ, ಸರ್ವೇ ಕಾರ್ಯ ಸರಳೀಕರಣಕ್ಕೆ ಆದ್ಯತೆ ನೀಡಿ- ಡಿಸಿ ಟಿ. ಭೂಬಾಲನ್ ಸೂಚನೆ

ವಿಜಯಪುರ: ಕಂದಾಯ ಗ್ರಾಮಗಳ ರಚನೆಗೆ ಸರ್ಕಾರ ವಿಶೇಷ ಆಸಕ್ತಿ ವಹಿಸಿದ್ದು, ಈ ನಿಟ್ಟಿನಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆಗೆ ಕ್ರಮ ವಹಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ನಿರ್ದೇಶನ ಹಿನ್ನಲೆಯಲ್ಲಿ ಕಂದಾಯ ಇಲಾಖೆಯ ನಾನಾ ವಿಷಯಗಳ ಕುರಿತು ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕಂದಾಯ ಗ್ರಾಮಗಳಲ್ಲಿರುವ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯಲ್ಲಿ ವ್ಯತ್ಯಯ ಮಾಡದೇ ಈ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಕ್ರಮ ವಹಿಸಬೇಕು. ಪಹಣಿ ತಿದ್ದುಪಡಿ, ವಿಶೇಷ ಒತ್ತು ನೀಡಿ ಪೈಕಿ ಪಹಣಿ, ಮೋಜಣಿ, ಸರ್ವೇ ಕಾರ್ಯವನ್ನು ಸರಳಿಕರಣಗೊಳಿಸಲು ಆದ್ಯತೆ ನೀಡುವಂತೆ ಸೂಚಿಸಿದ ಅವರು ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಆಧಾರನೊಂದಿಗೆ ಆರ್‍ಟಿಸಿ ಲಿಂಕ್ ಮಾಡಲು ಕ್ರಮ ವಹಿಸಬೇಕು. ಕಂದಾಯ ಇಲಾಖೆ ನ್ಯಾಯಾಲಯ ಪ್ರಕರಣಗಳನ್ನು ಆದಷ್ಟು ಬೇಗನೆ ವಿಲೇವಾರಿಗೆ ಕ್ರಮ ವಹಿಸುವಂತೆ ಸಂಬಂಧಿಸಿದ ಉಪವಿಭಾಗಾಧಿಕಾರಿ-ತಹಸೀಲ್ದಾರರಿಗೆ ಸೂಚನೆ ನೀಡಿದರು.

ಸಿಎಂ ಸೂಚನೆ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಡಿಸಿ ಟಿ. ಭೂಬಾಲನ್ ಅವರು ಕಂದಾಯ ಇಲಾಖೆಯ ನಾನಾ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಶೀಲನೆ ಮಾಡಿದರು.

ಈ ಸಭೆಯಲ್ಲಿ ಸರಕಾರಿ ಭೂಮಿ ಸಂರಕ್ಷಣೆಯ ಲ್ಯಾಂಡ್ ಬಿಟ್ ತಂತ್ರಾಂಶ, ಕೆರೆ ಸಂರಕ್ಷಣೆ, ನಮೂನೆ 50,53& 57 ವಿಲೇವರಿ, ಸಾಮಾಜಿಕ ಭದ್ರತಾ ಯೋಜನೆ ಪ್ರಗತಿ, ಭೂಸ್ವಾಧೀನ ಪ್ರಕ್ರಿಯೆ ಪ್ರಗತಿ, ಎ.ಜೆ.ಎಸ್.ಎಸ್.ಕೆ. ಪ್ರಗತಿ, ಸಿ.ಎಂ.ಜನಸ್ಪಂದನ ಹಾಗೂ ಐಪಿಜಿಆರ್‍ಎಸ್ ಪ್ರಕರಣಗಳ ವಿಲೇವಾರಿ, ರೈತರ ಆತ್ಮಹತ್ಯೆ ಪ್ರಕರಣ ವಿಲೇವಾರಿ, ಸಿಸಿಎಂಎಸ್ ಪ್ರಕರಣ ವಿಲೇವಾರಿ, ಅಭಿಲೇಖಾಲಯ ದಾಖಲೆಗಳ ಗಣಕೀಕರಣ, ಇ-ಆಫಿಸ್ ಅನುಷ್ಠಾನ, ಭೂ ಕಂದಾಯ ಬಾಕಿ, ಭೂಮಾಪನ ಇಲಾಖೆ ಪ್ರಗತಿ ಸೇರಿದಂತೆ ವಿವಿಧ ವಿಷಯಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ವಿಜಯಪುರ ಉಪವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ಭೂಮಾಪನ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುಳಗುಂದ ಸೇರಿದಂತೆ ವಿವಿಧ ತಾಲೂಕಾ ತಹಶೀಲ್ದಾರರು, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌