ವಿಜಯಪುರ: ಮುಂಗಾರು ಹಂಗಾಮಿನಲ್ಲಿ ಕೃಷಿ ಬೆಳೆಗಳಿಗೆ ಬೆಳೆ ವಿಮೆ ನೋಂದಣಿ ಮಾಡಿಸಲು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆ ಅಧಿಸೂಚಿಸಲಾಗಿದ್ದು, ಜಿಲ್ಲೆಯಲ್ಲಿ ಓರಿಯೆಂಟಲ್ ಜನರಲ್ ಇನ್ಸೂರೆನ್ಸ ಕಂಪನಿ ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯಡಿ ರೈತರು ತಮ್ಮ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಮನವಿ ಮಾಡಿದ್ದಾರೆ.
ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅಧಿಸೂಚಿಸಲಾದ ಮಳೆಯಾಶ್ರಿತ ಬೆಳೆಗಳಾದ ತೊಗರಿ, ಸಜ್ಜೆ ಹಾಗೂ ನೀರಾವರಿ ಮುಸುಕಿನ ಜೋಳ ಮತ್ತು ತೊಗರಿ ಬೆಳೆಗಳಿಗೆ ವಿಮಾ ನೋಂದಣಿಗೆ 31.07.2024 ಕೊನೆಯ ದಿನವಾಗಿದೆ. ನೀರಾವರಿ ಈರುಳ್ಳಿ ಹಾಗೂ ಕೆಂಪು ಮೆಣಸಿನಕಾಯಿ ಮತ್ತು ಮಳೆಯಾಶ್ರಿತ ಹತ್ತಿ ಬೆಳೆಗೆ 16.08.2024 ಕೊನೆಯ ದಿನವಾಗಿದೆ. ನೀರಾವರಿ ಶೇಂಗಾ ಹಾಗೂ ಇನ್ನುಳಿದ ಹೋಬಳಿ ಮಟ್ಟದ ಬೆಳೆಗಳಿಗೆ 31.07.2024 ಕೊನೆಯ ದಿನವಾಗಿದೆ ಎಂದು ಅವರು ತಿಳಿಸಿದ್ದಾರೆ.
ರೈತರು ನೋಂದಣಿಗಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ಹೊಂದಿದ ಎಫ್‍ಐಡಿ ಸಂಖ್ಯೆಯನ್ನು ಹಾಗೂ ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ ಜೊತೆಗೆ ಎನ್‍ಪಿಸಿಆಯ್ ಸೀಡಿಂಗ್ ಮಾಡಿಸಿರಬೇಕು.ಆಧಾರ ಕಾರ್ಡ ಝರಾಕ್ಸ ಪ್ರತಿ, ಪಹಣಿ ಪತ್ರಿಕೆ ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ ಅಥವಾ ಗ್ರಾಮ ಒನ್ ಕೇಂದ್ರ ಅಥವಾ ಸಿಎಸ್‍ಸಿ ಕೇಂದ್ರದಲ್ಲಿ ಬೆಳೆ ವಿಮೆ ನೊಂದಣಿ ಮಾಡಿಸಿಕೊಳ್ಳಬಹುದಾಗಿದೆ.
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಓರಿಯೆಂಟೆಲ್ ಜನರಲ್ ಇನ್ಸೂರೆನ್ಸ ಕಂಪನಿಯ ಪ್ರತಿನಿಧಿ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಟಿ. ಭೂಬಾಲನ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.