ಬಸವ ನಾಡಿನ ರೈತರಿಂದ ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿ ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ಕೃಷ್ಣಾ ನದಿ ಉಗಮ ಸ್ಥಾನದಲ್ಲಿ ಗಂಗಾಪೂಜೆ, ಬಾಗಿನ ಅರ್ಪಣೆ

ವಿಜಯಪುರ: ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಉಗಮ ಸ್ಥಾನ ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿ ಬಸವ ನಾಡಿನ ರೈತರು ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ.  ನಮ್ಮ ರಾಜ್ಯದಲ್ಲಿ ಮಳೆ ಆಗದಿದ್ದರೂ ಪ್ರತಿವರ್ಷ ಜನ, ಜಾನುವಾರುಗಳಿ ಈ ನದಿ ಜೀವಜಲ ನೀಡುತ್ತಿದೆ.  ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ರಾಯಚೂರು ಜಿಲ್ಲೆಗಳಿಗೆ ಈ ನದಿಯೇ ಜೀವನಾಡಿಯಾಗಿದೆ.  ಆದ್ದರಿಂದ ವಿಜಯಪುರ ಮತ್ತು ಬಾಗಲಕೋಟ ಅಖಂಡ ಜಿಲ್ಲೆಗಳ ರೈತರು ಕಳೆದ 15 ವರ್ಷಗಳಿಂದ ಕೃಷ್ಣೆಯ ಉಗಮ ಸ್ಥಾನ ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿ ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸುತ್ತಿದ್ದಾರೆ.

ಮಹಾಬಳೇಶ್ವರ ಪಂಚಗಂಗಾ ದೇವಸ್ಥಾನಕ್ಕೆ ತೆರಳಿದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಅನ್ನದಾತರು ಮಾಜಿ ಸಚಿವ ಸಂಗಣ್ಣ ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ 16ನೇ ವರ್ಷದ ಗಂಗಾಪೂಜೆ ಸಲ್ಲಿಸಿ ಕೃಷ್ಣೆಗೆ ಬಾಗಿನ ಅರ್ಪಿಸಿದರು.  ಮುಂಗಾರು ಆರಂಭ ವಾಗುವದರೊಂದಿಗೆ ಬರುವ ಕಡಲಗಾರ ಹುಣ್ಣಿಮೆ ಮತ್ತು ಗುರು ಪೂರ್ಣಿಮೆಯ ಈ ದಿನದಂದು ಇಲ್ಲಿನ ನೂರಾರು ಮಣ್ಣಿನ ಮಕ್ಕಳು ಮಹಾಬಳೇಶ್ವರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ರೈತರು ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿ ಕೃಷ್ಣಾ ನದಿಯ ಉಗಮಸ್ಥಾನದಲ್ಲಿ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ ದಂಪತಿ ವಿಶೇಷ ಪೂಜೆ ಸಲ್ಲಿಸಿ ಕೃಷ್ಣೆಯ ಕೃಪೆ ರೈತರ ಮೇಲಿರಲಿ.  ಕಾಲಕಾಲಕ್ಕೆ ಸರಿಯಾಗಿ ಹರಿದು ಬದುಕು ಬಂಗಾರ ಮಾಡು ಎಂದು ಪ್ರಾರ್ಥಿಸಿದರು.  ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಮಹಾಬಳೇಶ್ವರದ ಪಂಚಗಂಗಾ ಸ್ಥಳದಲ್ಲಿ ಹುಟ್ಟುವ ಕೃಷ್ಣಾ ನದಿ ಕೇವಲ ಮಹಾರಾಷ್ಟ್ರ ಮಾತ್ರವಲ್ಲ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಜನರಿಗೆ ನೀರುಣಿಸುತ್ತದೆ.  ಕೃಷ್ಣಾ ನದಿ ಹುಟ್ಟುವ ಪಂಚಗಂಗೆ ಕ್ಷೇತ್ರ ಐದು ನದಿಗಳ ಉಗಮ ಸ್ಥಾನವಾಗಿರುವುದು ಮತ್ತೊಂದು ವಿಶೇಷವಾಗಿದೆ.

ಗಾಯತ್ರಿ, ಸಾವಿತ್ರಿ, ಕೋಯ್ನಾ, ವೆನ್ನಾ ಮತ್ತು ಕೃಷ್ಣಾ ನದಿಗಳ ಸಂಗಮಸ್ಥಳವೂ ಇದಾಗಿದೆ.  ಇಲ್ಲಿ ಪಂಚಗಂಗಾ ದೇವಸ್ಥಾನ ನಿರ್ಮಿಸಲಾಗಿದ್ದು, ಈ ದೇವಾಲಯದಲ್ಲಿರುವ ಗೋವಿನ ಮೂರ್ತಿಯ ಬಾಯಿಯಿಂದ ಎಲ್ಲ ನದಿಗಳು ಉಗಮವಾಗುತ್ತವೆ.  ಈ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಪಂಚಗಂಗಾ ಎಂದು ಕರೆಯಲಾಗುತ್ತದೆ.  ಇಲ್ಲಿಯೇ ಉಗಮವಾಗುವ ಕೃಷ್ಣೆಗೆ ರೈತರು ಬಾಗೀನ ಅರ್ಪಿಸಿ ಕೃತಜ್ಞತೆ ಸಲ್ಲಿಸಿದರು.  ಇನ್ನೂ ಈ ಉಗಮಸ್ಥಾನದ ಮಹತ್ವ ಅರಿತಿರುವ ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ ತಾವು ಶಾಸಕರಾಗಿದ್ದಾಗ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ರೈತರೊಂದಿಗೆ ಹಾಗೂ ಮಹಾರಾಷ್ಟ್ರ ರಾಜ್ಯದ ಸಾತಾರಾ, ಸಾಂಗಲಿ ಜಿಲ್ಲೆಗಳ ಜನಪ್ರತಿನಿಧಿಗಳೊಂದಿಗೆ ಈ ಪೂಜೆಯಲ್ಲಿ ಭಾಗವಹಿಸುತ್ತಾರೆ. ಅಲ್ಲದೇ ಕನಿಷ್ಠ ಪಕ್ಷ ಎರಡು ನೂರಕ್ಕೂ ಹೆಚ್ಚು ಜನರಿಗೆ ವಸತಿ ಊಟದ ವೆಚ್ಚವನ್ನು ಬೆಳ್ಳುಬ್ಬಿಯವರೇ ನೋಡಿಕೊಂಡು ಪ್ರತಿ ವರ್ಷ ಕಡ್ಲೀಗರ ಪೂರ್ಣಿಮೆಯಂದು ಪಂಚಗಂಗಾ ದೇವಸ್ಥಾನಕ್ಕೆ ತೆರಳಿ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸುವ ಸಂಪ್ರದಾಯ ಪಾಲಿಸುತ್ತ ಬಂದಿದ್ದಾರೆ.

ಈಗ ಕೂಡ ತಮ್ಮ ಪತ್ನಿ ಮತ್ತು ವಿಜಯಪುರ, ಬಾಗಲಕೋಟ ರೈತರ ಜೊತೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಕೃಷ್ಣಾ ಮಾತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.  ಅಲ್ಲದೇ, ಕೃಷ್ಣಾ ಮಾತೆಗೆ ಜೈಕಾರ ಹಾಕಿದ್ದಾರೆ.  ಮಹಾರಾಷ್ಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.  ದಾರಾಕಾರವಾಗಿ ಸುರಿಯುತ್ತಿರುವ ಮಳೆಯ ಮಧ್ಯೆಯೂ ಸಂಪ್ರದಾಯವನ್ನು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಜನತೆ ಮುಂದುವರಿಸಿದ್ದಾರೆ.  ತಮ್ಮನ್ನು ಹರಸುವ ಕೃಷ್ಣಾ ಮಾತೆಗೆ ಕೃತಜ್ಞತೆ ಸಲ್ಲಿಸಿ ರೈತರು ಉಪಕಾರ ಸ್ಮರಣೆ ಮಾಡಿದ್ದಾರೆ.

Leave a Reply

ಹೊಸ ಪೋಸ್ಟ್‌