ವಿಜಯಪುರ: ಬಸವನಾಡು ವಿಜಯಪುರ ಜಿಲ್ಲಾದ್ಯಂತ ಗುರು ಪೂರ್ಣಿಮೆ ಹಬ್ಬದ ಸಂಭ್ರಮ ಮನೆ ಮಾಡಿದೆ.
ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ಗುರುಪೂರ್ಣಿಮಾ ಮಹೋತ್ಸವ ನಡೆಯುತ್ತಿದ್ದುಗುರು ಪೂರ್ಣಿಮೆ ಅಂಗವಾಗಿ ವೇದಾಂತಕೇಸರಿ ಮಲ್ಲಿಕಾರ್ಜುನ ಮಹಾಶಿವಯೋಗಿಗಳ ಗದ್ದುಗೆಗೆ ಆಶ್ರಮದ ಸ್ವಾಮೀಜಿಗಳು ಪೂಜೆ ಸಲ್ಲಿಸಿದರು. ಬೆಳಗ್ಗೆ 4.30ಕ್ಕೆ ಮಹಾ ಜಪಯೋಗದಿಂದ ಪ್ರಾರಂಭವಾಗಿರುವ ನಾನಾ ಧಾರ್ಮಿಕ ಕಾರ್ಯಕ್ರಮಗಳು ಈಗಲೂ ಮುಂದುವರೆದಿವೆ.
ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳು ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗುರುಗಳಾಗಿದ್ದರು. ಪ್ರತಿ ವರ್ಷ ಗುರು ಪೂರ್ಣಿಮೆ ದಿನ ಇಲ್ಲಿ ಜಾತ್ರೆ ನಡೆಯುತ್ತದೆ. , ಬೆಳಿಗ್ಗೆಯಿಂದಲೇ ಭಕ್ತರ ದಂಡು ಆಶ್ರಮಕ್ಕೆ ಹರಿದು ಬರುತ್ತಿದೆ. ಬೇರೆ ಬೇರೆ ಜಿಲ್ಲೆಗಳಿಂದಆಗಮಿಸಿರುವ ಸಾವಿರಾರು ಭಕ್ತರು ಶ್ರೀ ಮಲ್ಲಿಕಾರ್ಜುನ ಶಿವಯೋಗಗಿಳ ಗದ್ದುಗೆ ಪ್ರಣವ ಮಂಟಪಕ್ಕೆ ತೆರಳಿ ದರ್ಶನ ಪಡೆದರು.
ಬಸವನಾಡು ವಿಜಯಪುರವಷ್ಟೇ ಅಲ್ಲ, ನೆರೆಯ ಬಾಗಲಕೋಟೆ, ಬೆಳಗಾವಿ, ಹುಬ್ಬಳ್ಳಿ ಧಾರವಾಡ, ಕಲಬುರಗಿ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಸಾವಿರಾರು ಭಕ್ತಾಧಿಗಳು ಆಗಮಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಅಥರ್ಗಾದ ಭಕ್ತ ಸುನೀಲ ರಬಶೆಟ್ಟಿ, ನಸುಕಿನ ಜಾವವೇ ಇಲ್ಲಿಗೆ ಆಗಮಿಸಿ ಸ್ಮಾಮಿಜಿಗಳ ಗದ್ದುಗೆ ದರ್ಶನ ಪಡೆದು, ಇಲ್ಲಿರುವ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದೇನೆ. ವಿಜಯಪುರ ಅಷ್ಟೇ ಅಲ್ಲ, ನೆರೆಯ ಜಿಲ್ಲೆಗಳಿಂದಲೂ ಭಕ್ತರು ಬರುತ್ತಿದ್ದಾರೆ. ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪ್ರಕೃತಿಯಲ್ಲಿ ಲೀನವಾದ ನಂತರ ನಡೆಯುತ್ತಿರುವ ಎರಡನೇ ಕಾರ್ಯಕ್ರಮ ಇದಾಗಿದೆ. ಅವರು ಬದುಕಿದ್ದಾಗ ಬರುತ್ತಿದ್ದ ಭಕ್ತರ ಸಂಖ್ಯೆಗೆ ಹೋಲಿಸಿದರೆ ಈಗ ಸ್ವಲ್ಪ ಕಡಿಮೆಯಾಗಿದೆ. ಆದರೆ, ಭಕ್ತಿಗೇನೂ ಕಡಿಮೆಯಾಗಿಲ್ಲ ಎಂದು ಹೇಳಿದರು.
ಮಹಾರಾಷ್ಟ್ರದ ಕೊಲ್ಹಾಪುರದಿಂದ ಆಗಮಿಸಿದ್ದ ಭಕ್ತೆ ಕಮಲ ವಿವೇಕಾನಂದ ಪಾಟೀಲ ಮಾತನಾಡಿ, ನಾವು 22 ವರ್ಷಗಳಿಂದ ವಿಜಯಪುರಕ್ಕೆ ಬರುತ್ತಿದ್ದೇವೆ. ಗುರು ಪೂರ್ಣಮಿ ಎಂದರೆ ನಮ್ಮ ಪಾಲಿಗೆ ದೀಪಾವಳಿ ಇದ್ದಂತೆ. ಸ್ವಾಮೀಜಿಗಳು ನಮಗೆ ತೋರಿಸುತ್ತಿದ್ದ ಪ್ರೀತಿ ಇಂದಿಗೂ ನಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತದೆ. ಹುಣ್ಣಿಮೆಯ ಹಿಂದಿನ ದಿನ ಕೊಲ್ಹಾಪುರದಿಂದ ಎರಡು ವಾಹನಗಳಲ್ಲಿ ನಾವ ಎಲ್ಲ ಭಕ್ತರು ಇಲ್ಲಿಗೆ ಬಂದು ರಾತ್ರಿ 12 ಗಂಟೆಯಿಂದಲೇ ಗದ್ದುಗೆಗೆ ಶೃಂಗಾರ ಮಾಡುತ್ತ ಸೇವೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಮತ್ತೋರ್ವ ಭಕ್ತೆ ವಿಜಯಾ ಹಂಡಿ ಮಾತನಾಡಿ, ಗುರು ಪೂರ್ಣಿಮೆ ಜಾತ್ರೆಗೆ ತಪ್ಪದೆ ಬಂದು ಗದ್ದುಗೆಯ ದರ್ಶನ ಪಡೆದು ಧನ್ಯಳಾಗುತ್ತಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.