ರಾಜ್ಯ ಸರಕಾರದಿಂದ ಸಹಕಾರ ಸಂಘಗಳ ವಿರುದ್ಧ ಕಾನೂನು ಜಾರಿಗೆ ಯತ್ನ- ಸಂಜಯ ಪಾಟೀಲ ಕನಮಡಿ ಆರೋಪ

ವಿಜಯಪುರ: ರಾಜ್ಯ ಸರಕಾರ ಸಹಕಾರ ಸಂಘಗಳ ವಿರುದ್ಧ ಕಾನೂನು ತರಲು ಹೊರಟಿದೆ ಎಂದು ಬಿಜೆಪಿ ಸಹಕಾರ ಪ್ರಕೋಷ್ಠದ ರಾಜ್ಯ ಸಂಚಾಲಕ ಸಂಜಯ ಪಾಟೀಲ ಕನಮಡಿ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಹಕಾರ ಸಚಿವಾಲಯ ಸ್ಥಾಪನೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲ ಸಹಕಾರಿಗಳ ಒಂದು ಬಹುದಿನಗಳ ಕನಸನ್ನು ನನಸು ಮಾಡಿದ್ದಾರೆ.  ಇದರಿಂದ ದೇಶದ ಎಲ್ಲ ಸಹಕಾರ ಸಂಸ್ಥೆಗಳು, ಸದಸ್ಯರ ಮಾಹಿತಿ ಸಂಗ್ರಹಿಸಲಾಯಿತು.  ಒಟ್ಟು ಮೂರು ಹಂತದ ಬೇರೆ ಬೇರೆ ಸ್ವರೂಪಗಳನ್ನೊಳಗೊಂಡ ಸಹಕಾರಿ ಸಂಸ್ಥೆಗಳ ಮಾಹಿತಿ ಪಡೆಯಲಾಗಿದೆ.  ಕೇರಳ ಮತ್ತು ಮಣಿಪುರ ರಾಜ್ಯಗಳನ್ನು ಹೊರತು ಪಡಿಸಿ ಉಳಿದ ಎಲ್ಲ ರಾಜ್ಯಗಳ ಪೂರ್ಣ ಮಾಹಿತಿ ಸಂಗ್ರಹವಾಗಿದೆ.  ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ಈ ಅಂಕಿ ಅಂಶಗಳನ್ನುಸಂಗ್ರಹಿಸಲಾಗಿದೆ.  ಇದರಿಂದಾಗಿ ಕೇಂದ್ರ ಸರಕಾರವು ಸಹಕಾರ ಸೇ ಸಮೃದ್ಧಿ ಎಂಬ ಧ್ಯೇಯದಡಿ ಕಾರ್ಯ ಪ್ರಾರಂಭ ಮಾಡಿದೆ.  ಮಾತ್ರವಲ್ಲ ದೇಶದಲ್ಲಿ ಸಹಕಾರ ಚಳವಳಿ ಬಲಪಡಿಸುವುವುದು, ತಳಮಟ್ಟದ ವರೆಗೆ ಅದರ ವ್ಯಾಪ್ತಿ ಹೆಚ್ಚಿಸುವುದು ಹಾಗೂ ಸಹಕಾರಿ ಆಧಾರಿತ ಆರ್ಥಿಕ ಅಭಿವೃದ್ಧಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ತಿಳಿಸಿದರು.

ಆದರೆ ಇದಕ್ಕೆ ವಿರುದ್ಧವಾಗಿ ರಾಜ್ಯ ಸರಕಾರ ಸಹಕಾರಿಗಳ ಮತ್ತು ಸಹಕಾರ ಸಂಘಗಳ ಹಿತಾಸಕ್ತಿ ವಿರುದ್ಧವಾಗಿ ಕಾನೂನು ತರಲು ಹೊರಟಿದೆ.  ಇದು ಕರ್ನಾಟಕದ ಎಲ್ಲ ಸಹಕಾರಿಗಳಿಗೆ ಆಘಾತವನ್ನು ಉಂಟು ಮಾಡಿದೆ.  ಈ ಕಾನೂನಿನಿಂದಾಗಿ ಸಂಘದಲ್ಲಿ ಯಾವುದೇ ವ್ಯವಹಾರ ಮಾಡದಿದ್ದರೂ ಮತ್ತು ಯಾವುದೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಹಾಜರಾಗದಿದ್ದರೂ ಎಲ್ಲ ಸದಸ್ಯರಿಗೆ ಮತದಾನದ ಹಕ್ಕು ಸಿಗಲಿದೆ.  ಚುನಾವಣೆ ಪ್ರಾಧಿಕಾರ ರದ್ದುಪಡಿಸಿ ಸರಕಾರದ ಹಿಡಿತದಲ್ಲಿರುವ ರೆಜಿಸ್ಟಾçರ್ ನಿಯಂತ್ರಣದಲ್ಲಿ ಸಹಕಾರ ಚುನಾವಣಾ ವಿಭಾಗ ಪ್ರಾಥಮಿಕ ಹಂತದಿಂದ ಫೆಡರಲ್ ಹಂತದ ವರೆಗೆ ಕಾಂಗ್ರೆಸ್ ನೇತೃತ್ವದ ಸರಕಾರದಿಂದ ನಾಮನಿರ್ದೇಶನ ಮಾಡಿ ಅವರಿಗೆ ಮತದಾನದ ಹಕ್ಕನ್ನು ನೀಡಲಾಗುತ್ತದೆ. ಇದರಿಂದ ಚುನಾಯಿತ ಆಡಳಿತ ಮಂಡಳಿ ಸದಸ್ಯರ ಹಕ್ಕನ್ನು ಕಸಿದುಕೊಂಡಂತಾಗುತ್ತದೆ ಎಂದು ಅವರು ಆರೋಪಿಸಿದರು.

ಆಡಳಿತ ಮಂಡಳಿ ಸದಸ್ಯರ ಸಂಖ್ಯೆಯನ್ನು ಪ್ರಾಥಮಿಕ, ಫೆಡರಲ್ ಹಾಗೂ ಅಪೆಕ್ಸ್ ಸಂಸ್ಥೆಗಳಲ್ಲಿ ಹೆಚ್ಚಿಸುವುದು ಕಲಂ 97 ತಿದ್ದುಪಡಿಯ ವಿರುದ್ಧವಾಗಿದೆ.  ಹೀಗೆ ಹಲವಾರು ಅಂಶಗಳನ್ನು ಒಳಗೊಂಡ ಬಿಲ್ಲು ಎಲ್ಲ ಸಹಕಾರಿಗಳಿಗೆ ಅತ್ಯಂತ ನೋವುಂಟು ಮಾಡಿದೆ. ಈ ಮೇಲಿನ ಎಲ್ಲ ಅಂಶಗಳನ್ನು ನೋಡಿದಾಗ ಎಲ್ಲ ಹಂತದ ಸಹಕಾರಿ ಸಂಘಗಳನ್ನು ಸರಕಾರ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ಇರಾದೆ ಇದರಲ್ಲಿ ಕಾಣಿಸುತ್ತದೆ.  ರಾಜ್ಯದ ಎಲ್ಲ ಹಂತದ ಸಹಕಾರಿಗಳಲ್ಲಿ ಸಹಕಾರಿ ಕ್ಷೇತ್ರ ಕಾಂಗ್ರೆಸ್ ಕಾರ್ಯಕರ್ತರ ನಿರಾಶ್ರಿತರ ಗಂಜಿಕೇಂದ್ರವಾಗುವ ಆತಂಕವಿದೆ ಎಂದು ಅವರು ಆರೋಪಿಸಿದರು.

ಬಿಜೆಪಿ ಸಹಕಾರ ಪ್ರಕೋಷ್ಠ ಈ ನಿಯಂತ್ರಣ ಹೇರುವ ಬಿಲ್ಲನ್ನು ತೀವ್ರವಾಗಿ ಖಂಡಿಸುತ್ತೇವೆ.  ಎಲ್ಲ ಸಹಕಾರಿಗಳ ಪರವಾಗಿ ಈ ಬಿಲ್ಲನ್ನು ತರಬಾರದು ಎಂದು ಸರಕಾರಕ್ಕೆ ಆಗ್ರಹಿಸುತ್ತೇವೆ.  ಇಲ್ಲವಾದಲ್ಲಿ ಸರಕಾರದ ಹಸ್ತಕ್ಷೇಪ ಮತ್ತು ಸಂಪೂರ್ಣ ಭೂ ಸ್ವಾಯತ್ತತೆ ವಿರೋಧಿ ಮಸೂದೆ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕುಚಬಾಳ, ಬಿಜೆಪಿ ಮುಖಂಡ ಚಂದ್ರಶೇಖರ  ಕವಟಗಿ, ಕಾರ್ಪೋರೇಟರ್ ಮಳುಗೌಡ ಪಾಟೀಲ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌