ವಿಜಯಪುರ: ಅಹಿಂದ ಹೆಸರು ಹೇಳಿಕೊಂಡು ಆಡಳಿತ ನಡೆಸುತ್ತಿರುವ ರಾಜ್ಯ ಸರಕಾರ ದಲಿತರ ವಿರೋಧಿಯಾಗಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದಲ್ಲಿ ರೂ. 187 ಕೋ. ಹಗರಣ ಮಾಡಿದ್ದಾರೆ. ಈ ಹಗರಣದಲ್ಲಿ ಸಚಿವರ ತಲೆದಂಡವಾಗಿದ್ದು, ಅನೇಕರನ್ನು ಬಂಧಿಸಲಾಗಿದೆ. ಅಹಿಂದ ನಾಯಕರು ಎಂದು ಬಿಂಬಿಸಿ ದಲಿತರಿಗೆ ಕಾಂಗ್ರೆಸ್ ವಂಚಿಸುತ್ತಿದ್ದು, ಕೈ ಪಕ್ಷ ದಲಿತರ ವಿರೋಧಿಯಾಗಿದೆ ಎಂದು ಆರೋಪಿಸಿದರು.
ರಾಜ್ಯ ಸರಕಾರ ಆಡಳಿತಕ್ಕೆ ಬಂದಮೇಲೆ ಭ್ರಷ್ಟಾಚಾರ ತಾಂಡವಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಹಿಂದುಳಿದ ಹಾಗೂ ದಲಿತರ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ದಲಿತ ನಾಯಕ ಎಂದು ಹೇಳಿ ವಂಚನೆ ಮಾಡುತ್ತಿದ್ದಾರೆ. ವಾಲ್ಮೀಕಿ, ಮುಡಾ ಸೇರಿದಂತೆ ಅನೇಕ ಹಗರಣಗಳು ಇವರ ವಿರುದ್ಧ ಇರುವುದರಿಂದ ಸಿಎಂ ಸಿದ್ಧರಾಮಯ್ಯ ಅವರು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಅವರು ಆಗ್ರಹಿಸಿದರು.
ಬಿಜೆಪಿ ದಲಿತರ ಪರವಾಗಿರುವ ಏಕೈಕ ಪಕ್ಷವಾಗಿದೆ. ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಗೌರವ ಕೊಟ್ಟಿದ್ದು ಇದೇ ಬಿಜೆಪಿ. ಈ ಪಕ್ಷದಲ್ಲಿ ಯಾವಾಗಲೂ ದಲಿತರಿಗೆ ಸಮಾನತೆ ನೀಡುವ ಕೆಲಸವಾಗಿದೆ. ಚಲವಾದಿ ನಾರಾಯಣಸ್ವಾಮಿ ಅವರಿಗೆ ವಿಧಾನ ಪರಿಷತ್ ಪ್ತತಿಪಕ್ಷದ ನಾಯಕ ಸ್ಥಾನ ನೀಡಲಾಗಿದೆ. ಹೀಗಾಗಿ ದಲಿತರು, ಹಿಂದುಳಿದವರು ಬಿಜೆಪಿ ಪರ ಇದ್ದಾರೆ. ಕಾಂಗ್ರೆಸ್ ವಿರುದ್ಧ ಸಾಕಷ್ಟು ಭ್ರಷ್ಟಾಚಾರ ಆರೋಪಗಳು ಇರುವುದರಿಂದ ದಲಿತ ಸಂಘಟನೆಗಳು ಕೂಡ ಹೋರಾಟಕ್ಕೆ ಇಳಿಯಬೇಕಿದೆ. ಕಾಂಗ್ರೆಸ್ಸಿನವರು ದಲಿತರ ಹಣ ದುರುಪಯೋಗ ಮಾಡಿರುವುದರಿಂದ ದಲಿತ ಸಂಘಟನೆಗಳು ಹೋರಾಟ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಈ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಧ್ಯಮ ಪ್ರಮುಖ ವಿಜಯ ಜೋಶಿ ಉಪಸ್ಥಿತರಿದ್ದರು.