ವಿಜಯಪುರ: ಯಾವುದೇ ಸರಕಾರಿ ಸಮಾರಂಭಗಳಲ್ಲಿ ಹಾರ, ಶಾಲು ಮತ್ತು ತುರಾಯಿ ಇತ್ಯಾದಿ ವಸ್ತುಗಳಿಂದ ಸನ್ಮಾನ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿರುವುದರಿಂದ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಆದೇಶ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕೆ. ಸಿ. ಎಸ್. ಆರ್. 1957ರ ಅನ್ವಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಅಡಿಯಲ್ಲಿ ಶಾಲಾ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಮತ್ತು ಇತರೆ ಸರಕಾರಿ ಸಮಾರಂಭಗಳಲ್ಲಿ ಅನಗತ್ಯವಾಗಿ ಹಣ ಖರ್ಚು ಮಾಡಿ ಹಾರ, ಶಾಲು, ನೆನಪಿನ ಕಾಣಿಕೆಗಳನ್ನು ಕೊಟ್ಟು ಸನ್ಮಾನಿಸುವುದರಿಂದ ಸಮಯ ವ್ಯರ್ಥವಾಗುತ್ತದೆ. ಅಲ್ಲದೇ, ಅನಗತ್ಯವಾಗಿ ಖರ್ಚಾಗುವುದರಿಂದ ಅದರ ಬದಲಾಗಿ ಕಾಣಿಕೆಗಳಿಗೆ ತಗಲುವ ಹಣದಲ್ಲಿ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕ ಶೈಕ್ಷಣಿಕ ವಸ್ತುಗಳನ್ನು ನೀಡುವುದು ಸೂಕ್ತವೆಂದು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳು ತಮ್ಮ ಅಧೀನ ಕಚೇರಿಗಳಿಗೆ ಭೇಟಿ ನೀಡಿದಾಗ ಅಥವಾ ಅಧಿಕಾರಿ, ನೌಕರರು ಮೇಲಾಧಿಕಾರಿಗಳನ್ನು ಭೇಟಿಯಾಗಲು ಕಚೇರಿಗೆ ಬಂದಾಗ ಹೂಗುಚ್ಛ, ಹಾರ, ಹಣ್ಣಿನ ಬುಟ್ಟಿ, ಶಾಲು ಇತ್ಯಾದಿಗಳ ಬದಲು ಸಾರ್ವಜನಿಕ ಹಿತದೃಷ್ಟಿಯಿಂದ ಕಿಂಗ್ ಸೈಜ್ ನೋಟ್ ಬುಕ್ ಅಥವಾ ಸಾಮಾನ್ಯ ಜ್ಞಾನ, ಮಹಾನ್ ಪುರುಷರ, ಸ್ವತಂತ್ರ ಹೋರಾಟಗಾರರ, ವಿಜ್ಞಾನಿಗಳ, ಎನ್ ಸೈಕ್ಲೋಪೀಡಿಯಾ, ನಿಘಂಟು ಇತ್ಯಾದಿ ಪುಸ್ತಕಗಳನ್ನು ನೀಡಿ ಅಧಿಕಾರಿಗಳನ್ನು ಗೌರವಿಸುವಂತೆ ಸೂಚಿಸಬೇಕು. ಸಂಗ್ರಹವಾದ ನೋಟ್ ಬುಕ್ ಮತ್ತು ಪುಸ್ತಕಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಗ್ರಂಥಾಲಯಗಳಿಗೆ ಉಚಿತವಾಗಿ ನೀಡಲು ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಮುಂದೆ ಈ ಆದೇಶವನ್ನು ಕಡ್ಡಾಯ ಮಾಡಲಾಗಿದ್ದು, ಜಿಲ್ಲೆಯ ಎಲ್ಲ ಅಧಿಕಾರಿಗಳು ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ಆದೇಶ ಉಲ್ಲಂಘಿಸಿದರೆ ಅಂಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಹ ಅಧಿಕಾರಿಗಳನ್ನು ಭೇಟಿ ಮಾಡುವ ಸಂದರ್ಭದಲ್ಲಿ ಹಾರ, ಶಾಲು ಮತ್ತು ತುರಾಯಿಗಳ ಬದಲಾಗಿ ಕಲಿಕೆಗೆ ಪೂರಕವಾದ ವಸ್ತುಗಳನ್ನು ನೀಡುವ ಮೂಲಕ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.