ಪ್ರಾಥಮಿಕ, ಪ್ರೌಢ ಶಾಲೆಗಳ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್: ಜಿ. ಪಂ. ಸಿಇಓ ರಿಷಿ ಆನಂದ ಪರಿಶೀಲನೆ

ವಿಜಯಪುರ: ಕೌನ್ಸಲಿಂಗ್ ಪ್ರಕ್ರಿಯೆ ಮೂಲಕ ನಾನಾ ಪ್ರಾಧಾನ್ಯತೆಗಳಡಿಯಲ್ಲಿ ತಮಗೆ ಅನುಕೂಲವಾಗುವ ಸ್ಥಳಗಳಲ್ಲಿ ವರ್ಗಾವಣೆ ಪಡೆಯುವ ಶಿಕ್ಷಕರು ಸಂತೃಪ್ತಿಯಿಂದ ಬೋಧನಾ ಕಾರ್ಯವನ್ನು ನಿರ್ವಹಿಸಿ ಇಲಾಖೆಯ ಗುರಿ ಉದ್ದೇಶಗಳ ಸಫಲತೆಗೆ ಹೆಚ್ಚು ಪರಿಶ್ರಮವಹಿಸಬೇಕು ಎಂದು ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಹೇಳಿದ್ದಾರೆ.  

ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ನಡೆಯುತ್ತಿರುವ 2024-25ನೇ ವರ್ಷದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಿರುವ ಶಿಕ್ಷಕರು ಆನ್-ಲೈನ್ ಪ್ರಕ್ರಿಯೆ ಮೂಲಕ ಸ್ಥಳ ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಖುದ್ದಾಗಿ ವೀಕ್ಷಿಸಿ ಅವರು ಮಾತನಾಡಿದರು.

ಶಿಕ್ಷಕರ ಪಾತ್ರ ಅನನ್ಯವಾಗಿದೆ.  ವಿಜಯಪುರ ಜಿಲ್ಲೆಯ ಎಲ್ಲ ಶಾಲಾ ಶಿಕ್ಷಕರು ವೃತ್ತಿಪರ ಕೌಶಲ್ಯಗಳನ್ನು ಬಳಸಿಕೊಂಡು ಜಿಲ್ಲೆಯ ಶಾಲಾ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಅವರು ಹೇಳಿದರು.

ಪ್ರಸಕ್ತ ಶೈಕ್ಷಣಿಕ ವರ್ಷದ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಿರುವ ಶಿಕ್ಷಕರು ಆನ್-ಲೈನ್ ಪ್ರಕ್ರಿಯೆ ಮೂಲಕ ಸ್ಥಳ ಆಯ್ಕೆ ಮಾಡಿಕೊಳ್ಳುವ ಶಿಕ್ಷಕರಿಗೆ ಸ್ಥಳ ಆಯ್ಕೆ ಮಾಡಿಕೊಂಡಿರುವ ಆದೇಶಗಳನ್ನು ನೀಡಿದರು. ಪ್ರಸಕ್ತ ಸಾಲಿನ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಶಿಕ್ಷಕರು ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವುದನ್ನು ಖುದ್ದಾಗಿ ಪರಿವೀಕ್ಷಿಸಿ ಶಿಕ್ಷಕರ ಅಭಿಪ್ರಾಯವನ್ನು ಆಲಿಸಿದರು.

ವಿಜಯಪುರದಲ್ಲಿ ನಡೆದ ಕೌನ್ಸೆಲಿಂಗ್ ನಲ್ಲಿ ವರ್ಗಾವಣೆಯಾದ ಶಿಕ್ಷಕರಿಗೆ ಜಿ. ಪಂ. ಸಿಇಓ ರಿಷಿ ಆನಂದ ಆದೇಶ ಪತ್ರ ನೀಡಿದರು.

ಶಿಕ್ಷಕರ ವರ್ಗಾವಣೆಯು 24.07.2024 ರಿಂದ 26.07.2024ರ ವರೆಗೆ ನಡೆಯಲಿದ್ದು, ಪ್ರಸಕ್ತ ವರ್ಷದಲ್ಲಿ ವರ್ಗಾವಣೆ ಕೋರಿ ಪ್ರಾಥಮಿಕ ವಿಭಾಗದಲ್ಲಿ ವಿಶೇಷ ಶಿಕ್ಷಕರು-1, ದೈಹಿಕ ಶಿಕ್ಷಕರು-51, ಮುಖ್ಯ ಶಿಕ್ಷಕರು-65 ಹಾಗೂ ಸಹ-ಶಿಕ್ಷಕರು-1950 ಹೀಗೆ ಒಟ್ಟು -2067 ಶಿಕ್ಷಕರು ಅರ್ಜಿ ಸಲ್ಲಿಸಿರುತ್ತಾರೆ. ಅದರಂತೆಯೇ ಪ್ರೌಢ ಶಾಲೆ ವಿಭಾಗದಲ್ಲಿ ವಿಶೇಷ ಶಿಕ್ಷಕರು-16, ದೈಹಿಕ ಶಿಕ್ಷಕರು-32 ಹಾಗೂ ಸಹ-ಶಿಕ್ಷಕರು ಗ್ರೇಡ್2 -379 ಹೀಗೆ ಒಟ್ಟು-427 ಶಿಕ್ಷಕರು ಅರ್ಜಿ ಸಲ್ಲಿಸಿರುವುದನ್ನು ಪರಿಶೀಲನೆ ನಡೆಸಿದರು.

ಸಿಇಒ ಅವರು ಭೇಟಿ ನೀಡಿದ ಅವಧಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ವಿಶೇಷ ಶಿಕ್ಷಕರು–01, ದೈಹಿಕ ಶಿಕ್ಷಣ ಶಿಕ್ಷಕರು–51, ಮುಖ್ಯ ಶಿಕ್ಷಕರು-65 ಹಾಗೂ ಸಹ ಶಿಕ್ಷಕರು 700 ಶಿಕ್ಷಕರು ಕೌನ್ಸಲಿಂಗ್‌ನಲ್ಲಿ ಭಾಗವಹಿಸಿ ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿದ್ದರು.  ಶಿಕ್ಷಕರು ಯಾವುದೇ ಆತಂಕ ಇಲ್ಲದೇ ತಮಗೆ ಬೇಕಾದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು.  ಕಚೇರಿಯ ಆವರಣದಲ್ಲಿ ಕೌನ್ಸಲಿಂಗ್ ಪ್ರಕ್ರಿಯೆಯನ್ನು ಅವಲೋಕಿಸಲು ಎರಡು ಪ್ರತ್ಯೇಕ ಸ್ಥಳಗಳಲ್ಲಿ ಎಲ್ಇಡಿ ಸ್ಕ್ರೀನ್ ಅಳವಡಿಸಲಾಗಿತ್ತು.  ಅಲ್ಲಿ ಶಿಕ್ಷಕರು ತಮ್ಮ ಸರದಿ ಮತ್ತು ಖಾಲಿ ಹುದ್ದೆಗಳ ನಿಖರವಾದ ಮಾಹಿತಿಯನ್ನು ಗುರುತಿಸಿಕೊಳ್ಳುತ್ತಿದ್ದರು. ಕೌನ್ಸಲಿಂಗ್ ಪ್ರಕ್ರಿಯೆಯನ್ನು ನಿಯಮಾನುಸಾರವಾಗಿ ಮತ್ತು ಕ್ರಮಬದ್ಧವಾಗಿ ಶಿಸ್ತುಬದ್ಧ ರೀತಿಯಲ್ಲಿ ನಡೆಸಲಾಗುತ್ತಿರುವುದನ್ನು ಅವಲೋಕಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಮಯದಲ್ಲಿ ಮಂಡಳಿಯಿಂದ ಬಂದಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆ-3ರ ಗೌಪ್ಯ ಸಾಮಗ್ರಿಗಳ ತಾಲೂಕುವಾರು ವಿತರಣೆ ಕಾರ್ಯವು ನಡೆಯಿತು.  ತಾಲೂಕು ಖಜಾನೆಗಳಲ್ಲಿ ದಾಸ್ತಾನುಗೊಳಿಸುವ ಸಂಬಂಧ ಉಪನಿರ್ದೇಶಕರಿಂದ ಗೌಪ್ಯ ಸಾಮಗ್ರಿಗಳನ್ನು ಪಡೆದುಕೊಂಡು ಎಲ್ಲ ಕ್ಷೇತ್ರ, ಶಿಕ್ಷಣಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದ ಪ್ರಕ್ರಿಯೆಯನ್ನೂ ಕೂಡ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಉಪನಿರ್ದೇಶಕ ಎನ್. ಎಚ್. ನಾಗೂರ, ಜಿ. ಪಂ. ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ಎಲ್ಲ ತಾಲೂಕುಗಳ ಶಿಕ್ಷಣಾಧಿಕಾರಿಗಳು, ನಾನಾ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಮತ್ತು ವರ್ಗಾವಣೆ ಪ್ರಕ್ರಿಯೆ, ಎಸ್. ಎಸ್. ಎಲ್. ಸಿ ಪರೀಕ್ಷೆಯ ಜಿಲ್ಲಾ ನೋಡಲ್ ಅಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌