ವಿಜಯಪುರ: ಐತಿಹಾಸಿಕ ವಿಜಯಪುರ ನಗರವನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ತಾಜಬಾವಡಿ ಸುತ್ತಲಿನ ಪ್ರದೇಶದ ಅತಿಕ್ರಮಣವನ್ನು ಮಹಾನಗರ ಪಾಲಿಕೆ ವತಿಯಿಂದ ತೆರವುಗೊಳಿಸಲಾಯಿತು.
ಐತಿಹಾಸಿಕ ತಾಜಬಾವಡಿ ಹತ್ತಿರದ ಸುತ್ತಮುತ್ತಲಿನ ಸಾರ್ವಜನಿಕ ರಸ್ತೆ, ಸರ್ಕಾರಿ ಜಾಗೆ ಮೆಲೆ ಅನಧಿಕೃತವಾಗಿ ಒತ್ತು ಮಾಡಿ ನಿರ್ಮಿಸಿದ ಕಟ್ಟಡಗಳ ಭಾಗ- ರಚನೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮಹಾನಗರ ಪಾಲಿಕೆ ವತಿಯಿಂದ ಶುಕ್ರವಾರ ಕೈಗೊಳ್ಳಲಾಯಿತು. ಅನಧಿಕೃತವಾಗಿ ಒತ್ತುವರಿ ಮಾಡಿ ನಿರ್ಮಿಸಿದ ಕಟ್ಟಡಗಳ ಭಾಗ-ರಚನೆಗಳನ್ನು ತೆರವುಗೊಳಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ರಸ್ತೆ ಉನ್ನತೀಕರಿಸುವ ಕಾರ್ಯ ಕೈಗೊಳ್ಳುವುದು ಅವಶ್ಯಕವಿದ್ದ ಕಾರಣ ಈಗಾಗಲೇ ರಸ್ತೆ ಅತಿಕ್ರಮಣ ಮಾಡಿ ಕಟ್ಟಡ ನಿರ್ಮಿಸಿದ ಭಾಗಗಳನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿ ಸೂಚನೆ ಸಹ ನೀಡಲಾಗಿತ್ತು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತೆರವು ಕಾರ್ಯಾಚರಣೆ ಪರಿಶೀಲನೆ ನಡೆಸಿ, ಐತಿಹಾಸಿಕ ತಾಜ್‌ಬಾವಡಿ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸಂರಕ್ಷಣೆ ಮಾಡಲು ವರ್ಲ್ಡ ಮಾನುಮೆಂಟ್ ಫಂಡ್ ಇಂಡಿಯಾ ಅಸೋಸಿಯೇಶನ್ ಸಂಸ್ಥೆ ನಿರ್ಧರಿಸಿದ್ದು, ಈ ಕಾರ್ಯಕ್ಕೆ ಟಿಸಿಎಸ್ ಫೌಂಡೇಶನ್ ಸಂಸ್ಥೆ ಸಿ.ಎಸ್.ಆರ್. ನಿಧಿಯಡಿ ಅಭಿವೃದ್ದಿಗೊಳಿಸಲು ಉದ್ದೇಶಿಸಲಾಗಿದೆ.ಮುಂಬರುವ ದಿನಗಳಲ್ಲಿ ಕೂಡ ನಗರದ ವಿವಿಧೆಡೆ ಒತ್ತುವರಿಯಾಗಿರುವ ಪ್ರದೇಶವನ್ನು ಗುರುತಿಸಿ, ನಿಯಮಾನುಸಾರ ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಅತಿಕ್ರಮಣ ತೆರವು ಕಾರ್ಯಾಚರಣೆಯು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಾಲಿಕೆಯ ವಲಯ ಆಯುಕ್ತ ಸುನೀಲ ಪಾಟೀಲ, ಉಪ ಆಯುಕ್ತ ವಿಠ್ಠಲ ಹೊನ್ನಳ್ಳಿ, ಕಾರ್ಯಪಾಲಕ ಅಭಿಯಂತರ ವಿದ್ಯಾಧರ ನ್ಯಾವಗೊಂಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಯಲ್ಲಪ್ಪ ಹಳ್ಳಿ ಸೇರಿದಂತೆ ಪಾಲಿಕೆ ಅಧಿಕಾರಿ-ಸಿಬ್ಬಂದಿಗಳು ಭಾಗವಹಿಸಿದ್ದರು. ಕಾರ್ಯಾಚರಣೆ ಸಹಕಾರ ಹಾಗೂ ಭದ್ರತೆ ಒದಗಿಸಿದ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಪಾಲಿಕೆ ಆಯುಕ್ತರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.