ಹೂಗಾರ ನಿಗಮಕ್ಕೆ ರೂ. 100 ಕೋ. ಅನುದಾನ ನೀಡಿ: ಡಾ. ಮಹಾದೇವ ಹೂಗಾರ

ವಿಜಯಪುರ: ಹೂಗಾರ ಸಮಾಜದ ಅಭಿವೃದ್ಧಿಗೆ ರೂ. 1೦೦ ಕೋ. ಹಣ ಮೀಸಲಿಡಬೇಕು.  ಕರ್ನಾಟಕದ ಪೂಜಾರ, ಗುರವ, ಜೀರ, ಮಾಲಗಾರ, ಹೂಗಾರ ಅಭಿವೃದ್ಧಿ ನಿಗಮಕ್ಕೆ ಹೂಗಾರ ಸಮಾಜದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಿಡಗುಂದಿಯಲ್ಲಿ ಹೂಗಾರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಮಾಜದ ಕಾರ್ಯಕರ್ತರು, ಹೂಗಾರ ಸಮಾಜವು ಅತ್ಯಂತ ಹಿಂದುಳಿದಿದ್ದು, ಅಭಿವೃದ್ಧಿಗೆ ಯಾರೂ ಸ್ಪಂದಿಸುತ್ತಿಲ್ಲ.  ಸಮಾಜದ ಅಭಿವೃದ್ಧಿ ನಿಗಮಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲು ಇಡದೆ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸಮಾಜದ ಅಭಿವೃದ್ಧಿಗೆ ಹಣ ನೀಡಬೇಕು, ಅಲ್ಲದೇ ಕರ್ನಾಟಕ ಮಾಲಿ, ಮಾಲಗಾರ, ಪೂಜಾರ ಹಾಗೂ ಹೂಗಾರ ನಿಗಮಕ್ಕೆ ಕನಿಷ್ಠ ರೂ. 100 ಕೋ. ಅನುದಾನ ಬಿಡುಗಡೆ ಮಾಡಬೇಕು,.  2023ರಲ್ಲಿಯೇ ಈ ನಿಗಮವನ್ನ ಸ್ಥಾಪಿಸಲಾಗಿದ್ದರೂ ಈವರೆಗೂ ಅನುದಾನ ಬಿಡುಗಡೆ ಮಾಡಿಲ್ಲ.  ಹೀಗಾಗಿ ಅಭಿವೃದ್ದಿ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ.  ಈ ಕುರಿತು ಅಧಿವೇಶನದಲ್ಲಿ ತೀರ್ಮಾನಿಸಿ ನಿಗಮಕ್ಕೆ ಅನುದಾನ ನೀಡಬೇಕು.  ನಿಗಮಕ್ಕೆ ಸಮಾಜದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಅವರು ಆಗ್ರಹಿಸಿದರು.

ಬಳಿಕ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಎ. ಡಿ. ಅಮರವಾಡಗಿ ಅವರಿಗೆ ನೀಡಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಡಾ. ಮಹಾದೇವ ಹೂಗಾರ, ಗುರುಸಿದ್ದಪ್ಪ ಹೂಗಾರ, ಹನುಮಂತ ಹೂಗಾರ, ಗ್ರಾ. ಪಂ. ಸದಸ್ಯ ಬಸು ಹೂಗಾರ, ರಾಚಪ್ಪ ಹೂಗಾರ, ಬಸವರಾಜ ಹೂಗಾರ, ಸಂಗಪ್ಪ ಹೂಗಾರ, ಸಂತೋಷ ಹೂಗಾರ, ಮಹಾಂತೇಶ ಪೂಜಾರ, ಮಾನಿಂಗಪ್ಪ ಹೂಗಾರ ಮುಂತಾದವರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌