ಸಂಪಾದಕರು ಸಂಘಟಿತರಾಗಿ ಸರಕಾರಿ ಸೌಲಭ್ಯಗಳನ್ನು ಪಡೆಯಬೇಕಾಗಿದೆ: ರಾಜ್ಯಾಧ್ಯಕ್ಷ ಎ. ಸಿ. ತಿಪ್ಪೇಸ್ವಾಮಿ

ತುಮಕೂರು: ಸಂಪಾದಕರು ಸಂಘಟಿತರಾಗಿ ಸರಕಾರಿ ಸವಲತ್ತನ್ನು ಪಡೆಯಬೇಕಾಗಿದೆ ಎಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ. ಸಿ. ತಿಪ್ಪೇಸ್ವಾಮಿ ಹೇಳಿದ್ದಾರೆ.

ನಗರದ ಶಿರಾಗೇಟ್ ರಸ್ತೆಯ ಹೊನ್ನೇನಹಳ್ಳಿ ಬಳಿಯಿರುವ ಪರಂ ರೀಟ್ರೀಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಹಾಗೂ ಗದಗದಲ್ಲಿ ನಡೆಯುವ ರಾಜ್ಯ ಸಮ್ಮೇಳನದ ಪೂರ್ವಭಾವಿ ಚರ್ಚೆ ಹಾಗೂ ತುಮಕೂರು ಜಿಲ್ಲಾ ಘಟಕದ ನೂತನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಪಾದಕರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಂಘಟಿತರಾಗಿ ಸಂಘವನ್ನು ಬಲಪಡಿಸಬೇಕು. ಇದರಿಂದ ಸರ್ಕಾರದ ಮಟ್ಟದಲ್ಲಿ ಹೋರಾಡಿ ನಮಗೆ ಸಿಗಬೇಕಾದ ಸವಲತ್ತುಗಳನ್ನು ನಾವು ಪಡೆಯಬಹುದು.  ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಉಳಿಯಬೇಕೆಂದರೆ ನಾವು ಸಂಘಟಿತರಾಗಿ ಹೋರಾಡಬೇಕಿದೆ ಎಂದು ಅವರು ಹೇಳಿದರು.

ಕಳೆದ ಎರಡು ವರ್ಷಗಳಿಂದ ಇಲಾಖೆಯ ಮಾಧ್ಯಮ ಪಟ್ಟಿಗೆ ಸೇರಿದ್ದ ಎಸ್ಸಿ, ಎಸ್ಟಿ ಪತ್ರಿಕೆಗಳಿಗೆ ನೀಡಬೇಕಿದ್ದ ಪ್ರತಿ ತಿಂಗಳ ಒಂದು ಪುಟ ಜಾಹೀರಾತನ್ನು ಅಧಿಕಾರಿಗಳ ಮಲತಾಯಿಧೋರಣೆಯಿಂದ ತಡೆಹಿಡಿಯಲಾಗಿತ್ತು. ರಾಜ್ಯದ ಎಲ್ಲಾ ಸಂಪಾದಕರ ಜೊತೆಗೂಡಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿಂದಿನ ಆಯುಕ್ತರ ಜೊತೆ ಚರ್ಚಿಸಿ ಜಾಹೀರಾತು ನೀತಿಯಲ್ಲಿನ ನಿಯಮಗಳ ಮನವರಿಕೆ ಮಾಡುಕೊಟ್ಟ ಪರಿಣಾಮ ಪುನರ್ ಆದೇಶ ಮಾಡಿಸಿದ್ದರ ಫಲವಾಗಿ ಇಂದು ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಪಾದಕರು ಒಂದು ಪುಟದ ಜಾಹೀರಾತನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.ಐದು ವರ್ಷ ಪೂರೈಸಿದ ಒಬಿಸಿ ಪತ್ರಿಕೆಗಳಿಗೆ ಸಹ ಎರಡು ಪುಟಗಳ ಜಾಹೀರಾತು ಆದೇಶ ಮಾಡಿಸಲಾಯಿತು ಎಂದು ಅವರು ಹೇಳಿದರು.

ಐದು ವರ್ಷ ಪೂರೈಸಿದ ಹಿಂದುಳಿದ ವರ್ಗ ಹಾಗೂ ಬ್ರಾಹ್ಮಣ ಪತ್ರಿಕೆಗಳಿಗೆ ಎರಡು ಪುಟ ಜಾಹಿರಾತು ನೀಡುತ್ತಿದ್ದು, 5 ವರ್ಷದೊಳಗಿನ ಮಾಧ್ಯಮಪಟ್ಟಿಯಲ್ಲಿರುವ ಎಲ್ಲಾ ಪತ್ರಿಕೆಗಳಿಗೂ ಸಹ ಪ್ರತಿ ತಿಂಗಳು ಒಂದು ಪುಟ ಜಾಹಿರಾತು ನೀಡಿ ಪ್ರೋತ್ಸಾಹಿಸುವಂತೆ ಈಗಾಗಲೇ ಆಯುಕ್ತರಿಗೆ, ಸರ್ಕಾರಕ್ಕೆ, ಮುಖ್ಯಮಂತ್ರಿಯವರಿಗೆ ಮನವಿ ನೀಡಲಾಗಿದೆ.ಈ ಬಗ್ಗೆ ಪರಿಶೀಲಿಸಿ ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದ್ದು, ಇದರ ಮುಂದುವರೆದ ಭಾಗವಾಗಿ ಮತ್ತೊಮ್ಮೆ ಆಯುಕ್ತರನ್ನು ಭೇಟಿ ಮಾಡಿ ಚರ್ಚಿಸಲಾಗುವುದು.  ಇದರ ಜೊತೆಗೆ ಗಡಿನಾಡು ಪತ್ರಿಕೆಗಳಿಗೂ ಒಂದು ಪುಟ ಜಾಹಿರಾತು ನೀಡುವ ಸಂಬಂಧ ಆಯುಕ್ತರೊಂದಿಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.

ಟೆಂಡರ್ ಜಾಹಿರಾತುಗಳನ್ನು ಜಿಲ್ಲಾ, ಪ್ರಾದೇಶಿಕ, ರಾಜ್ಯ ಮಟ್ಟದ ಪತ್ರಿಕೆಗಳಿಗೆ ಕಾಮಗಾರಿಗಳ, ಸರಕು ಸೇವೆಗಳ ಮೌಲ್ಯಕ್ಕೆ ಅನುಗುಣವಾಗಿ ಟೆಂಡರ್ ನೀಡಬೇಕೆಂಬ ಸ್ಪಷ್ಟ ಆದೇಶವಿದ್ದರೂ ಸಹ ಜಿಲ್ಲಾ/ಪ್ರಾದೇಶಿಕ ಮಟ್ಟದ ಕೇವಲ ಒಂದು ಪತ್ರಿಕೆಗೆ ಅಥವಾ ಎರಡು ಪತ್ರಿಕೆಗಳಿಗೆ ನೀಡಲಾಗುತ್ತಿದೆ. ಹೆಚ್ಚಿನ ಟೆಂಡರ್ ಗಳು ರಾಜ್ಯ ಮಟ್ಟದ ಪತ್ರಿಕೆಗಳಿಗೆ ಇಲಾಖೆಯಿಂದ ನೀಡಿ ಸ್ಥಳೀಯ ಪತ್ರಿಕೆಗಳನ್ನು ಕಡೆಗಣಿಸಲಾಗುತ್ತಿದೆ. ಪ್ರಶ್ನಿಸಿದರೆ ಬಜೆಟ್‌ಲ್ಲಿ ದುಡ್ಡಿಲ್ಲ ಎನ್ನುತ್ತಾರೆ. ಲಕ್ಷಾಂತರ, ಕೋಟ್ಯಾಂತರ ರೂಗಳ ಕಾಮಗಾರಿಗಳಿಗೆ ಹಣವಿದ್ದಾಗ ಟೆಂಡರ್ ಜಾಹೀರಾತು ಪತ್ರಿಕೆಗಳಲ್ಲಿ ಪ್ರಕಟವಾದ ನಂತರ ಪಾವತಿಸಲು ಹಣವಿಲ್ಲವೇ? ಎಂದು ಅವರು ಸರಕಾರವನ್ನು ಪ್ರಶ್ನಿಸಿದರು.

ಮಾಧ್ಯಮಪಟ್ಟಿಯಲ್ಲಿರುವ ಪತ್ರಿಕೆಗಳಿಗೆ ಹಲವು ವರ್ಷಗಳಿಂದ ದರ ಹೆಚ್ಚಳ ಮಾಡಿಲ್ಲ.ಶೇ.12 ರಷ್ಟು ದರ ಹೆಚ್ಚಳಕ್ಕಾಗಿ ಆಯುಕ್ತರಿಗೆ ಹಾಗೂ ಸರಕಾರಕ್ಕೆ ಮನವಿ ಮಾಡಲಾಗಿದ್ದು, ಶೀಘ್ರವಾಗಿ ದರ ಪರಿಷ್ಕರಣೆ ಮಾಡಿ ದರ ಹೆಚ್ಚಳ ಮಾಡಬೇಕು.ಆಗಿರುವ ಅನ್ಯಾಯ ಸರಿಪಡಿಸದಿದ್ದರೆ ಸಂಘದಿಂದ ಹೋರಾಟದ ಹಾದಿ ಹಿಡಿಯೋಣ.  ಜಾಹಿರಾತು ಏಜೆನ್ಸಿಗಳು ಶೇ. 15 ರಷ್ಟು ಕಮೀಷನ್ ತೆಗೆದುಕೊಳ್ಳುತ್ತಿದ್ದು, ಶೇ. 5 ಅಥವಾ ರೂ. 1೦ ಕಮಿಷನ್ ಹಣವನ್ನು ಇಳಿಸುವಂತೆ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.  ಸಂಘದಿಂದ 18.01.2024 ರಂದು ನೀಡಿರುವ ಮನವಿ ಪತ್ರದಲ್ಲಿನ ಬೇಡಿಕೆಗಳ ಬಗ್ಗೆ ಕ್ರಮ ಆಗದಿರುವುದಕ್ಕೆ ಅವರು ಬೇಸರ‌ ವ್ಯಕ್ತಡಿಸಿದರು.

ತುಮಕೂರಿನಲ್ಲಿ ನಡೆದ ಸಂಪಾದಕರ ಸಂಘದ ಸಭೆಯಲ್ಲಿ ಜಿಲ್ಲೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳ ಟೆಂಡರ್‌ ಜಾಹಿರಾತುಗಳು ಸ್ಥಳೀಯ ಪತ್ರಿಕೆಗಳಿಗೆ ಬರುತ್ತಿಲ್ಲ. ಹೀಗಾಗಿ ಜಿಲ್ಲಾ ಘಟಕಗಳ ಜಾಹೀರಾತು ನೀತಿಯನ್ನು ಉಲ್ಲಂಘಿಸುತ್ತಿರುವ ಪಿಡಿಒಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಪಂಚಾಯತಿ ಸಿಇಒ ಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಬೇಕು.  ಗದಗದಲ್ಲಿ ನಡೆಯಲಿರುವ ರಾಜ್ಯ ಸಮ್ಮೇಳನಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ಮುಖ್ಯಮಂತ್ರಿಗಳು ದಿನಾಂಕ ನೀಡುವುದೊಂದೇ ಬಾಕಿ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳನ್ನು ಮತ್ತೊಮ್ಮೆ ಭೇಟಿ ಮಾಡಿ ಮನವಿ ಮಾಡಲಾಗುವುದು ಎ. ಸಿ. ತಿಪ್ಪೇಸ್ವಾಮಿ ತಿಳಿಸಿದರು.

ಇದೇ ವೇಳೆ ಸಭೆಗೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಂಪಾದಕರು ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಕಾರ್ಯದರ್ಶಿ ಟಿ. ಎಸ್.  ಷ್ಣಮೂರ್ತಿ ಮಾತನಾಡಿ , ವು ಸರ್ಕಾರದ ಜಾಹಿರಾತುಗಳ ಬಗ್ಗೆ ಮಾತನಾಡುತ್ತಿದ್ದೇವೆಯೇ ಹೊರತು ಸಂಘವನ್ನು ಸದೃಢವಾಗಿ ಕಟ್ಟಲು ಯಾರೂ ಮಾತನಾಡುತ್ತಿಲ್ಲ.  ಮೊದಲು ಸಂಘವನ್ನು ಬಲಪಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯೋನ್ಮುಖರಾಗೋಣ. ಸರ್ಕಾರದ ಸವಲತ್ತು ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ ತುಮಕೂರು ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಜಿಲ್ಲಾಧ್ಯಕ್ಷರಾಗಿ ಕರುಣಾಕರ, ಪ್ರಧಾನ ಕಾರ್ಯದರ್ಶಿಯಾಗಿ ಸಿ. ರಂಗನಾಥ್, ಉಪಾಧ್ಯಕ್ಷರಾಗಿ ಪಿ. ಎಸ್. ಮಲ್ಲಿಕಾರ್ಜುನಸ್ವಾಮಿ, ಪಿ. ಎನ್. ಮಂಜುನಾಥ್, ಸಂಘಟನಾ ಕಾರ್ಯದರ್ಶಿಯಾಗಿ ಮಹೇಶ, ಕಾರ್ಯದರ್ಶಿಯಾಗಿ ಜಯಣ್ಣ, ಖಜಾಂಚಿಯಾಗಿ ಕಂಬಣ್ಣ ಆಯ್ಕೆಯಾದರು.

ಈ ಸಭೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಡಾ. ಜಿ. ವೈ. ಪದ್ಮ ನಾಗರಾಜ,ಗೋವಿಂದಪ್ಪ, ರಾಮಕೃಷ್ಣ, ಭೀಮರಾಯ ಹದ್ದಿನಾಳ, ಮೊಹಮದ್ ಯುನೂಸ್, ರಾಜ್ಯ ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪ, ರಾಜ್ಯ ಕಾರ್ಯದರ್ಶಿ ಟಿ. ಎಸ್. ಕೃಷ್ಣಮೂರ್ತಿ, ಅನುಪ್ ಕುಮಾರ್, ನರಸಿಂಹರಾಜು ಎನ್., ಖಜಾಂಚಿ ಖಾನ್ ಸಾಬ್ ಮೊಮಿನ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕುಚ್ಚಂಗಿ ಪ್ರಸನ್ನ, ಪಿ. ಎನ್. ಮಂಜುನಾಥಗೌಡ, ವಿಜಯಪುರ, ಕೊಪ್ಪಳ, ಬಳ್ಳಾರಿ, ಬೆಂಗಳೂರು, ಚಿತ್ರದುರ್ಗ, ಬಾಗಲಕೋಟೆ,ಮಂಡ್ಯ,
ರಾಮನಗರ ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಸಂಘದ ಪದಾಧಿಕಾರಿಗಳು, ಸಂಪಾದಕರು ಭಾಗವಹಿಸಿದ್ದರು.

Leave a Reply

ಹೊಸ ಪೋಸ್ಟ್‌