ವಿಜಯಪುರ: ಆಗಸದಲ್ಲಿ ಹಾರಾಡುತ್ತಿದ್ದ ಪರಿಕರವೊಂದು ರೈತರೊಬ್ಬರ ಜಮೀನಿನಲ್ಲಿ ಬಿದ್ದು ಆತಂಕ ಸೃಷ್ಠಿಸಿದ ಘಟನೆ ಚಡಚಣ ತಾಲೂಕಿನ ಮರಗೂರ ಬಳಿ ನಡೆದಿದೆ.
ಪ್ಯಾರಾಚೂಟ್ ಮಾದರಿಯ ಈ ಪರಿಕರ ಕಂಡು ರೈತರು ಗಾಬರಿಯಾಗಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಗ್ರಾಮದ ಜನರು ಅದರ ಮೇಲೆ ಬರೆಯಲಾದ ಮಾಹಿತಿ ತಿಳಿದು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ.
ಪರಿಶೀಲನೆ ನಡೆಸಿದಾಗ ಇದು ಲೋ ಇನ್ಟೆನ್ಸಿಟಿ ವೆದರ್ ಮಾನಿಟರರಿಂಗ್ ಸಿಸ್ಟಮ್ ಪರಿಕರವಾಗಿದ್ದು, ಬೆಂಗಳೂರಿನ ಇಸ್ರೋದಿಂದ ಕೆಲ ದಿನಗಳ ಹಿಂದೆ ಉಡಾವಣೆ ಮಾಡಲಾಗಿತ್ತು ಎನ್ನಲಾಗಿದೆ. ಲೋ ಲ್ಯಾಟಿಟ್ಯೂಡ್ ವೆದರ್ ಮಾನಿಟರಿಂಗ್ ಮಾಡುವ ಈ ಸಾಧನ ಸ್ಥಳೀಯ ಪ್ರದೇಶಗಳ ಹವಾಮಾನ ಮಾಹಿತಿ ಸಂಗ್ರಹಿಸಿ ಸಂಬಂಧಿಸಿದವರಿಗೆ ರವಾನೆ ಮಾಡುತ್ತದೆ. ತೆಲಂಗಾಣದ ಹೈದರಾಬಾದಿನ ಇಸ್ರೋ ಕಚೇರಿಯ ಅಧಿಕಾರಿಗಳು ಈ ಪರಿಕರದ ಮೇಲೆ ನಿಗಾ ವಹಿಸಿರುತ್ತಾರೆ.
ಸ್ಥಳಕ್ಕಾಗಮಿಸಲಿರುವ ಇಸ್ರೊ ವಿಜ್ಞಾನಿಗಳು
ಈ ಪರಿಕರ ಮರಗೂರ ಬಳಿ ನೆಲಕ್ಕಪ್ಪಳಿಸಿರುವ ವಿಷಯ ತಿಳಿದಿರುವ ಇಸ್ರೊದ ವಿಜ್ಞಾನಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ವಿಜ್ಞಾನಿಗಳು ಮತ್ತು ತಂತ್ರಜ್ಞರು ಆಗಮಿಸಿ ಪರಿಶೀಲನೆ ಬಳಿಕ ಇದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ರಾಕೇಶ ಜೈನಾಪೂರ ಮಾಹಿತಿ ನೀಡಿದ್ದಾರೆ.
ಆತಂಕ ಬೇಡ ಎಂದ ಜಿಲ್ಲಾಧಿಕಾರಿ ಟಿ. ಭೂಬಾಲನ
ಈ ಮಧ್ಯೆ ಚಡಚಣ ತಾಲೂಕಿನ ಮರಗೂರ ಬಳಿ ನೆಲಕ್ಕಪ್ಪಳಿಸಿರುವ ಬಾಹ್ಯಾಕಾಶ ಪರಿಕರ ಕೇಂದ್ರ ಸರಕಾರದ ಪರಮಾಣು ಶಕ್ತಿ ಇಲಾಖೆಯ ಅಧೀನದಲ್ಲಿರುವ ಹೈದರಾಬಾದ ಮೂಲದ ಟಾಟಾ ಮೂಲಭೂತ ಸಂಶೋಧನೆ ಸಂಸ್ಥೆ (ಟಾಟಾ ಇನ್ ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್) ಸೇರಿದೆ. ಇದು ಹವಾಮಾನ ಮತ್ತು ವಾತಾವರಣ ಅಧ್ಯಯನಕ್ಕಾಗಿ ಉಡಾವಣೆ ಮಾಡಿದ ಹವಾಮಾನ ಅಧ್ಯಯನಾಶೀಲ ವೈಜ್ಞಾನಿಕ ಉಪಕರಣ ( ಪೇಲೋಡ್) ವಾಗಿದೆ. ಪ್ಯಾರಾಚೂಟ್ ನೆರವಿನಿಂದ ಚಡಚಣ ತಾಲೂಕಿನ ಗ್ರಾಮವೊಂದರ ಜಮೀನಿನಲ್ಲಿ ಬಂದಿಳಿದಿದೆ.
ಜಿಲ್ಲಾಡಳಿತವು ಈ ಪರಿಕರಕ್ಕೆ ಸಂಬಂಧಿಸಿದ ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸಿ ಈಗಾಗಲೇ ಮಾಹಿತಿ ಒದಗಿಸಿದೆ. ಸಂಸ್ಥೆಯ ಅಧಿಕಾರಿಗಳ ತಂಡ ಸದ್ಯದಲ್ಲಿಯೇ ವಿಜಯಪುರಕ್ಕೆ ಆಗಮಿಸಲಿದೆ. ಅಲ್ಲದೆ, ಜಮೀನಿನಲ್ಲಿ ಬಿದ್ದಿರುವ ಪ್ಯಾರಾಚ್ಯೂಟ್ ಮತ್ತು ಪೆಲೋಡ್ ಹಾಗೂ ಅದಕ್ಕೆ ಸಬಂಧಿಸಿದ ಸಾಧನಾ ಸಲಕರಣೆಗಳನ್ನು ತೆಗೆದುಕೊಂಡು ಹೋಗಲಿದೆ.
ಆದಕಾರಣ, ಈ ಬಗ್ಗೆ ಯಾರೂ ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಈ ಪರಿಕರದ ಬಗ್ಗೆ ಜಿಲ್ಲಾಡಳಿತ ಸಂಪೂರ್ಣ ಮಾಹಿತಿ ಸಂಗ್ರಹಿಸಿತ್ತಿದೆ. ಹೈದರಾಬಾದಿನಿಂದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದ ನಂತರ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಕೆಲವು ವರ್ಷಗಳ ಹಿಂದ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಹಡಗಲಿ ಗ್ರಾಮದ ಬಳಿ ಕುತ್ತಿಗೆಗೆ ಕಾಲರ್ ಹೊಂದಿದ ಪಕ್ಷಿಯೊಂದು ನಲಕ್ಕಪ್ಪಳಿಸಿ ಸಾವಿಗೀಡಾಗಿತ್ತು. ಆ ಪಕ್ಷಿ ಎಲ್ಲಿಂದ ಬಂದಿದೆ ಎಂಬುದು ಆತಂಕ ಮತ್ತು ಅಚ್ಚರಿಗೂ ಕಾರಣವಾಗಿತ್ತು. ಆದರೆ, ಈಗ ಚಡಚಣ ಬಳಿ ನೆಲಕ್ಕಪ್ಪಳಿಸಿರುವ ಬಾಹ್ಯಾಕಾಶ ಅಧ್ಯಯನಕ್ಕೆ ಸಂಬಂಧಿಸಿದ ಪರಿಕರದ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿರುವುದು ಆತಂಕವನ್ನು ನಿವಾರಿಸಿದಂತಾಗಿದೆ.