ಸಿಎಂ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಶಕ್ತಿಗಳ ವಿರುದ್ಧ ಆ. 6 ರಂದು ಬೃಹತ್ ಪ್ರತಿಭಟನೆ- ಅಹಿಂದ ಮುಖಂಡರ ಹೇಳಿಕೆ

ವಿಜಯಪುರ: ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಷಡ್ಯಂತ್ರ ನಡೆಸುತ್ತಿರುವ ಶಕ್ತಿಗಳ ವಿರುದ್ಧ ಆ. 6 ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಯಾತ್ರೆ ನಡೆಸಲಾಗುವುದು ಎಂದು ಅಹಿಂದ ಮುಖಂಡರು ಆರೋಪಿಸಿದ್ದಾರೆ.

ನಗರದಲ್ಲಿ ಅಹಿಂದ ಮತ್ತು ಕಾಂಗ್ರೆಸ್ ಮುಖಂಡರಾದ ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರಿಫ್, ಮಲ್ಲಿಕಾರ್ಜುನ ಲೋಣಿ, ಎಸ್. ಎಂ. ಪಾಟೀಲ ಗಣಿಹಾರ, ಅಬ್ದುಲ್ ರಜಾಕ್ ಹೊರ್ತಿ, ಅಡಿವೆಪ್ಪ ಸಾಲಗಲ, ಶಿವಾಜಿ ಮೆಟಗಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮತ್ತು ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರಿಫ್ ಮಾತನಾಡಿ, ಸಿಎಂ ಸಾಮಾಜಿಕ ನ್ಯಾಯವನ್ನೇ ಉಸಿರಾಗಿಸಿಕೊಂಡಿದ್ದಾರೆ.  ಆದರೆ, ಅವರ ವಿರುದ್ದ ಆಧಾರ ರಹಿತ ಆರೋಪ ಮಾಡಿ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸಾಮಾಜಿಕ ನ್ಯಾಯ ತತ್ವದಡಿ ಸಿಎಂ ಎಲ್ಲ ವರ್ಗಗಳ ಪ್ರಗತಿಗೆ ಶ್ರಮಿಸುತ್ತಿದ್ದಾರೆ.  ಇದನ್ನು ಸಹಿಸದ ಅವರ ವಿರೋಧಿ ಶಕ್ತಿಗಳು ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿವೆ.  ಈ ಷಡ್ಯಂತ್ರದ ವಿರುದ್ದ ಆ. 6 ರಂದು ಬೆ. 10ಕ್ಕೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು.  ಜಿಲ್ಲೆಯ ಎಲ್ಲ‌ ಕಾಂಗ್ರೆಸ್ ಶಾಸಕರು, ವಿಧಾನ ಪರಿಷತ್‌ ಶಾಸಕರು ಸೇರಿದಂತೆ 10 ರಿಂದ 15 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಅಹಿಂದ ಮುಖಂಡ ಎಸ್. ಎಂ. ಪಾಟೀಲ ಗಣಿಹಾರ, ಸಿಎಂ ಎಸ್. ಸಿದ್ದರಾಮಯ್ಯ ಅವರ ಜನಪ್ರೀಯತೆ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ನವರಿಗೆ ಹೊಟ್ಟೆಯುರಿ ಇದೆ.  ಹೀಗಾಗಿ ಅವರ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಪಾದಯಾತ್ರೆಯಲ್ಲಿದ್ದವರೇ ಮಹಾನ್ ಭ್ರಷ್ಟಾಚಾರಿಗಳಿದ್ದಾರೆ.  ಅಲ್ಲದೇ, ಭ್ರಷ್ಟಾಚಾರದ ಪಿತಮಹರಾಗಿದ್ದಾರೆ.  ವಿಜಯೇಂದ್ರ ಅದರ ನೇತೃತ್ವ ವಹಿಸಿದ್ದಾರೆ. ಜೆಡಿಎಸ್‌ ನವರನ್ನು ಒತ್ತಾಯ‌ಮಾಡಿ ಹೋರಾಟ ಮಾಡಿಸುತ್ತಿದ್ದಾರೆ.  ಮುಡಾದಲ್ಲಿ ನಡೆದ ಹಗರಣ  ವಾಸ್ತವದಲ್ಲಿ ‌ಬಿಜೆಪಿ ಸರಕಾರದಲ್ಲಿ ನಡೆದ ಘಟನೆ.   ಇದರಲ್ಲಿ ಸಿದ್ದರಾಮಯ್ಯ ‌ಹಾಗೂ ಅದಕ್ಕೂ‌ ಸಂಬಂಧಿಸಿದ್ದಲ್ಲ ಎಂದು ಅವರು ಆರೋಪಿಸಿದರು.  ‌

ದೇವೇಗೌಡರ‌ ಕುಟುಂಬದ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ.  ಭೂಹರಣ‌ ಮಾಡಿದ ಮೊದಲ‌ ವ್ಯಕ್ತಿಯೇ ಎಚ್. ಡಿ.‌ ಕುಮಾರಸ್ವಾಮಿ.‌  ಆದರೆ, ಇವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಅವರ ಅಧಿಕಾರವಧಿಯಲ್ಲಿ ನಡೆದ ಹಗರಣ ಬಗ್ಗೆ ಚಕಾರ ಎತ್ತುತ್ತಿಲ್ಲ.  ಬೊಮ್ಮಾಯಿ‌ ಅವಧಿಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ.  ಈ ಎಲ್ಲ ಹಗರಣಗಳನ್ನು ಬಯಲಿಗೆಳೆಯಬೇಕು.  ಸಿಎಂ ಸಿದ್ದರಾಮಯ್ಯ ಇಡೀ ರಾಷ್ಟ್ರದಲ್ಲಿ ಮಾದರಿ ಮುಖ್ಯಮಂತ್ರಿಯಾಗಿದ್ದಾರೆ.  ಅವರ ಸಮರ್ಥ ನಾಯಕತ್ವವನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಅವರು ಆರೋಪಿಸಿದರು.

ಮುಖಂಡ ಅಬ್ದುಲ್‌ ರಜಾಕ್ ಹೊರ್ತಿ ಮಾತನಾಡಿ, ಆ. 6 ರಂದು ನಗರದ ಶ್ರೀ ಸಿದ್ದೇಶ್ವರ ದೇವಾಲಯದಿಂದ ಪ್ರತಿಭಟನೆ ನಡೆಯಲಿದೆ.  ಜಿಲ್ಲೆಯ‌ ಎಲ್ಲ ಮುಖಂಡರೂ ಭಾಗವಹಿಸಿದ್ದಾರೆ.  ಮೋದಿ ಸುಳ್ಳಿನ ಸರದಾರ.  ಆದರೆ, ಸಿದ್ದರಾಮಯ್ಯ ಅವರು‌ ಕಳಂಕಿತ ವ್ಯಕ್ತಿಯಿಲ್ಲ.  ಈ ತನಿಖೆಯಲ್ಲಿ ಸಿದ್ದರಾಮಯ್ಯ ಗೆಲ್ಲುತ್ತಾರೆ ಎಂದು ಅವರು ಹೇಳಿದರು.

‌ಡಿ ಎಸ್ ಎಸ್ ಮುಖಂಡ ಅಡಿವೆಪ್ಪ ಸಾಲಗಲ ಮಾತನಾಡಿ, ಸಂವಿಧಾನದ ಆಶಯ ಈಡೇರಿಸುವಲ್ಲಿ ಸಿದ್ದರಾಮಯ್ಯ‌ ಮುಂಚೂಣಿಯಲ್ಲಿದ್ದಾರೆ.  ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯದ‌ ಹರಿಕಾರರಾಗಿದ್ದಾರೆ.  ಅವರ ವಿರುದ್ಧ ಮಾಡಲಾಗುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ.  ಅವರ‌ ವಿರುದ್ಧದ ಆರೋಪಗಳನ್ನು ಬಿಜೆಪಿಯವರೇ ನಂಬುತ್ತಿಲ್ಲ.  ಬಿಜೆಪಿಯವರು‌ ದಲಿತರನ್ನು ಎತ್ತಿ ಕಟ್ಟುವ‌ ಕೆಲಸ‌ ನಡೆಸಿದ್ದಾರೆ.  ಆದರೆ, ಇದನ್ನು ದಲಿತರು‌ ಗಂಭೀರವಾಗಿ ಪರಿಗಣಿಸಬಾರದು.  ಒಂದು ವೇಳೆ ಬಿಜೆಪಿ ಮತ್ತು ಜೆಡಿಎಸ್ ತಮ್ಮ ವರ್ತನೆ ಮುಂದುವರೆಸಿದರೆ ರಾಜ್ಯಪಾಲರ‌ ಕಚೇರಿಗೆ‌ ಮುತ್ತಿಗೆ ಹಾಕುವುದಾಗಿ ಅವರು ತಿಳಿಸಿದರು.

ಮುಖಂಡ ಶಿವಾಜಿ‌ ಮೆಟಗಾರ ಮಾತನಾಡಿ, ಸಿದ್ದರಾಮಯ್ಯ ಅವರು ಒಂದೇ ವರ್ಗದ ನಾಯಕರಲ್ಲ.  ಅವರನ್ನು ಎಲ್ಲರೂ ಇಷ್ಟಪಡುತ್ತಿದ್ದಾರೆ.  ಕೇಂದ್ರ ಸರಕಾರ ಅಧಿಕಾರ‌ ದುರುಪಯೋಗ‌ ಮಾಡಿಕೊಳ್ಳುತ್ತಿದೆ.  ಸಿದ್ದರಾಮಯ್ಯ ಸತ್ಯ ಹರಿಶ್ಚಂದ್ರನಂತಿದ್ದಾರೆ.  ಅವರನ್ನು ಅಳುಗಾಡಿಸಲು ಸಾಧ್ಯವಿಲ್ಲ.  ಈ ವಿಷಯದಲ್ಲಿ ಬಿಜೆಪಿಗೆ ಅವಮಾನವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸೋಮನಾಥ ಕಳ್ಳಿಮನಿ, ಸುಭಾಸ ಛಾಯಾಗೋಳ, ಎಂ. ಸಿ. ‌ಮುಲ್ಲಾ, ಡಾ. ಗಂಗಾಧರ ಸಂಬಣ್ಣಿ, ಡಾ. ರವಿಕುಮಾರ ಬಿರಾದಾರ, ರಾಜೇಶ್ವರಿ ಯರನಾಳ, ಅಡಿವೆಪ್ಪ‌ ಸಾಲಗಲ, ನಾಗರಾಜ ಲಂಬು, ಫಯಾಜ್ ಕಲಾದಗಿ, ರವಿ ಕಿತ್ತೂರ, ರಾಜು ತೊರವಿ, ಅಕ್ರಂ ಮಾಶ್ಯಾಳಕರ, ಮಹಾದೇವ ರಾವಜಿ, ಮಲ್ಲು ಬಿದರಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌