ಮಹಾರಾಷ್ಚ್ರದಲ್ಲಿ ಮಳೆ ತುಂಬಿ ಹರಿಯುತ್ತಿದೆ ಭೀಮಾ ಹೊಳೆ- ಗಡಿಯಲ್ಲಿರುವ ಎಂಟೂ ಬ್ಯಾರೇಜುಗಳು ಮುಳಗಡೆ

ವಿಜಯಪುರ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ನದಿಗಳು ಉಕ್ಕಿ ಹರಿಯುವಂತೆ ಮಾಡಿದೆ. 

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿದ ಮಳೆಯಿಂದಾಗಿ ಮಹಾರಾಷ್‌ಟರ ಕೋಯ್ನಾ ಜಲಾಷಯದಿಂದ ನೀರು ಬಿಡುಗಡೆ ಮಾಡಿದ್ದರಿಂದಾಗಿ ಈಗಾಗಲೇ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ.  ಈಗ ಪುಣೆ ಮತ್ತೀತರ ಕಡೆಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮಹಾರಾಷ್ಟ್ರ ಉಜನಿ ಮತ್ತೀತರ ಜಲಾಷಯಗಳಿಂದ 1.20 ಲಕ್ಷ್ಯ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ಈಗ ಭೀಮಾ ನದಿಯೂ ತುಂಬಿ ಹರಿಯುತ್ತಿದೆ.

ಸೋಮವಾರ ಸಂಜೆಯಿಂದಲೇ ಬಸವನಾಡು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗಡಿಯ ಕೊನೆಯ ಗ್ರಾಮ ದಸೂರ ಮೂಲಕ ಭೀಮಾ ನದಿ ನೀರು ಕರ್ನಾಟಕ ಪ್ರವೇಶಿಸಿದೆ.  ಇದರಿಂದಾಗಿ ಕರ್ನಾಟಕದ ವಿಜಯಪುರ ಮತ್ತು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಗಳಲ್ಲಿ  ಸಮಾನಾಂತರ ಗಡಿಗಳಲ್ಲಿ ಹರಿಯುವ ಭೀಮಾ ನದಿಗೆ ನಿರ್ಮಿಸಲಾಗಿರುವ ಎಲ್ಲ ಎಂಟೂ ಬ್ಯಾರೇಜುಗಳು ನೀರಿನಲ್ಲಿ ಮುಳುಗಡೆಯಾಗಿವೆ.  ಕೆಲವೆಡೆ ನದಿ ತೀರದ ಹೊಲಗಳಿಗೂ ನೀರು ನುಗ್ಗಿದ್ದು, ಬೆಳೆಗಳು ನೀರಿನಲ್ಲಿ ನಿಂತಿವೆ.

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ಗ್ರಾಮದ ಬಳಿ ನಿರ್ಮಿಸಲಾಗಿರುವ ಬ್ಯಾರೇಜು ನೀರಿನಲ್ಲಿ ಮುಳುಗಿರುವುದು.

ವಿಜಯಪುರ ಮತ್ತು ಸೋಲಾಪುರ ಸಮಾನಾಂತರ ಗಡಿಯಲ್ಲಿ ಭೀಮಾ ನದಿಗೆ ಗೋವಿಂದಪುರ-ಭಂಡಾರಕವಟೆ, ಉಮರಾಣಿ-ಲವಗಿ, ಔಜ-ಶಿರನಾಳ, ಚಿಂಚಪೂರ-ಧೂಳಖೇಡ, ಚಣೆಗಾಂವ-ಬರೂರ, ಹಿಂಗಣಿ-ಆಳಗಿ, ಖಾನಾಪುರ-ಪಡನೂರ ಹಾಗೂ ಹಿಳ್ಳಿ-ಗುಬ್ಬೇವಾಡ ಬಳಿ ಬ್ಯಾರೇಜುಗಳನ್ನು ನಿರ್ಮಿಸಲಾಗಿದೆ.  ಈ ಬ್ಯಾರೇಜುಗಳಲ್ಲಿ ಮೊದಲಿನ ಎರಡು ಅಂದರೆ ಗೋವಿಂದಪುರ- ಭಂಡಾರಕವಟೆ ಮತ್ತು ಉಮರಾಣಿ-ಲವಗಿ ಬ್ಯಾರೇಜುಗಳನ್ನು ಕರ್ನಾಟಕ ನಿರ್ಮಿಸಿದೆ.  ನಂತರ ಬರುವ 3 ಮತ್ತು ನಾಲ್ಕನೇ ಬ್ಯಾರೇಜುಗಳಾದ ಔಜ್-ಶಿರನಾಳ, ಚಿಂಚಪೂರ-ಧೂಳಖೇಡ ಬಾಂದಾರಗಳನ್ನು ಮಹಾರಾಷ್ಟ್ರ ನಿರ್ಮಿಸಿದ್ದರೆ, 5 ಮತ್ತು 6ನೇ ಬ್ಯಾರೇಜುಗಳಾದ ಚಣೆಗಾಂವ-ಬರೂರ ಹಾಗೂ ಹಿಂಗಣಿ-ಆಳಗಿ ಕರ್ನಾಟಕ ನಿರ್ಮಿಸಿದೆ.  ಅದೇ ರೀತಿ ಖಾನಾಪುರ-ಪಡನೂರ ಹಾಗೂ ಹಿಳ್ಳಿ-ಗುಬ್ಬೇವಾಡ ಬಳಿ ಬ್ಯಾರೇಜುಗಳನ್ನು ಮಹಾರಾಷ್ಟ್ರ ನಿರ್ಮಿಸಿದೆ.

ಭೀಮೆಯಲ್ಲಿ ಮುಳುಗಿದ ಬ್ಯಾರೇಜುಗಳು, ಪಂಪಸೆಟ್ ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿರುವ ರೈತರು

ಈ ಮಧ್ಯೆ ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದಾಗಿ ಎಂಟೂ ಬ್ಯಾರೇಜುಗಳ ಮೇಲೆ ಸುಮಾರು ಮೂರ್ನಾಲ್ಕು ಅಡಿಗಿಂತಲೂ ಹೆಚ್ಚು ನೀರು ಹರಿಯುತ್ತಿದೆ.  ಇದರಿಂದಾಗಿ ಈ ಬಾಂದಾರುಗಳ ಮೂಲಕ ಕರ್ನಾಟಕದಿಂದ ಮಹಾರಾಷ್ಟ್ರ ಮತ್ತು ಮಹಾರಾಷ್ಟ್ರದಿಂದ ಕರ್ನಾಟಕದ ಗ್ರಾಮಗಳಿಗೆ ದಿನ ನಿತ್ಯದ ಕೃಷಿ ಮತ್ತು ವ್ಯವಹಾರಗಳಿಗಾಗಿ ಸಂಚರಿಸುವ ಉಭಯ ರಾಜ್ಯಗಳ ಜನರ ಸಂಚಾರಕ್ಕೆ ತೊಂದರೆ ಉಂಟಾಗಿದೆ.  ನಿಗದಿತ ಗ್ರಾಮಗಳಿಗೆ ತೆರಳಲು ರೈತರು ಮತ್ತು ಸಾರ್ವಜನಿಕರು ಹಲವಾರು ಕಿ. ಮೀ. ಸುತ್ತು ಹಾಕಿಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಉಮರಾಣಿಯ ರೈತ ಲಕ್ಷ್ಮಣ ಚಿಂಚೋಳಿ ಬಸವನಾಡು ವೆಬ್ ಗೆ ಮಾಹಿತಿ ನೀಡಿದ್ದಾರೆ.

 

ಹಲವಾರು ಕಡೆಗಳಲ್ಲಿ ರೈತರ ಪಂಪಸೆಟ್ ಗಳು ನೀರು ಏರಿಕೆಯಾದ ಕಾರಣ ನದಿ ನೀರಿನಲ್ಲಿ ಮುಳುಗಡೆಯಾಗಿವೆ.  ಕೆಲವು ಕಡೆ ಪಂಪಸೆಟ್ ಗಳು ಕೊಚ್ಚಿಕೊಂಡು ಹೋಗಿವೆ.  ಭೀಮಾ ನದಿಯಲ್ಲಿ ಮಹಾಪುರ ಉಂಟಾಗುವ ಮಾಹಿತಿ ತಿಳಿದ ಇನ್ನುಳಿದ ಗ್ರಾಮಗಳ ರೈತರು ಜಮೀನಿನಲ್ಲಿ ಅಳವಡಿಸಲಾಗಿದ್ದ ಪಂಪ್ ಸೆಟ್ ಗಳನ್ನು ಹೊರ ತೆಗೆದು ಸುರಕ್ಷಿತ ಸ್ಥಳಗಳಿಗೆ ಸಾಗಿಸುತ್ತಿದ್ದಾರೆ.  ನೀರು ಮತ್ತಷ್ಟು ನೀರು ಏರಿಕೆಯಾದರೆ ರೈತರ ಜಮೀನಿನಲ್ಲಿ ಬೆಳೆಯಲಾಗಿರುವ ಬೆಳೆಗಳು ನೀರು ಪಾಲಾಗುವ ಆತಂಕ ಎದುರಾಗಿದೆ.

ಈಗಾಗಲೇ ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಭೀಮಾ ನದಿಯ ಪ್ರವಾಹದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದ್ದಾರೆ.

ಭೀಮಾ ಬ್ಯಾರೇಜುಗಳ ಇತಿಹಾಸ

ಈ ಬ್ಯಾರೇಜುಗಳ ನಿರ್ಮಾಣಕ್ಕೆ ಪ್ರಮುಖ ಕಾರಣ ರೈತ ಮುಖಂಡ ಪಂಚಪ್ಪ ಕಲಬುರ್ಗಿ ಅಧ್ಯಕ್ಷತೆಯ ಭೀಮಾ ನದಿ ನೀರು ರಕ್ಷಣಾ ರೈತವರ್ಗ ಸಮಿತಿಯ ಹೋರಾಟ.  2000-2002ರ ವರೆಗೆ ಬೀದಿ ಹೋರಾಟ ನಡೆಸಿದ ಈ ಸಮಿತಿ ಮುಂದೆ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿ ಕಳೆದ 25 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮತ್ತು ಕರ್ನಾಟಕಕ್ಕೆ ನ್ಯಾಯಯುತವಾಗಿ ಪ್ರತಿವರ್ಷ ಮಹಾರಾಷ್ಟ್ರ ಬಿಡಬೇಕಿದ್ದ 15 ಟಿಎಂಸಿ ನೀರು ಮತ್ತು ಅದರ ಸದ್ಭಳಕೆಗೆ ಬ್ಯಾರೇಜು ಮತ್ತು ಇತರ ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿತ್ತು.  ಈ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮುಂದೆ ಜಲಚರ, ಪ್ರಾಣಿ ಮತ್ತು ಪಕ್ಷಿಗಳಿಗೆ ಕುಡಿಯಲು ನೀರು ಬಿಡಬೇಕು ಎಂದು ನೈಸರ್ಗಿಕ ವಾದವನ್ನು ಸಮಿತಿ ಮಂಡಿಸಿತ್ತು.  ಆಗ ಮಧ್ಯಂತರ ಆದೇಶ ಹೊರಡಿಸಿ ಅಂದಿನ ದಿನಗಳಲ್ಲಿ ಪ್ರತಿದಿನ 200 ಕ್ಯೂಸೆಕ್ ನೀರನ್ನು ಮಹಾರಾಷ್ಟ್ರ ಬಿಡುಗಡೆ ಮಾಡಬೇಕು ಎಂದು ಆದೇಶ ನೀಡಿತ್ತು.  ಸಮಿತಿಯ ಹೋರಾಟ ಯಶಸ್ವಿಯಾಗಿ ಅಂದು ಒಣಗಿದ್ದ ಭೀಮಾ ನದಿಗೆ ನೀರು ಹರಿದಿತ್ತು.  ಅಲ್ಲದೇ, ಸುಪ್ರಿಂ ಕೋರ್ಟ್ ಅಂದು ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇಂದ್ರ ಸರಕಾರಕ್ಕೆ ಈ ನಿಟ್ಟಿನಲ್ಲಿ ನೋಟೀಸ್ ಕೂಡ ಜಾರಿ ಮಾಡಿತ್ತು.

ಅಂದಿನ ನೀರವಾರಿ ಸಚಿವ ಎಚ್. ಕೆ. ಪಾಟೀಲ ಈ ಭಾಗದ ನೀರಾವರಿ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವುದಾಗಿ ಸುಪ್ರೀಂ ಕೋರ್ಟಿಗೆ ಭರವಸೆ ನೀಡಿದ್ದರು.  ಅದರಂತೆ, 2003ರಲ್ಲಿ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ 4 ಬ್ಯಾರೇಜುಗಳು ಪೂರ್ಣಗೊಂಡವು.  ಅಲ್ಲದೇ, ಕಲಬುರಗಿ ಜಿಲ್ಲೆಯ ವ್ಯಾಪ್ತಿಯಲ್ಲಿ ಇದೇ ಭೀಮಾ ನದಿಗೆ 13 ಬ್ಯಾರೇಜುಗಳೂ ಪೂರ್ಣಗೊಂಡವು.

ನಂತರ ತನ್ನ ಅಂತಿಮ ತೀರ್ಪನ್ನು ನೀಡಿದ ಸುಪ್ರೀಂ ಕೋರ್ಟ್ ಭೀಮಾ ನದಿಯಲ್ಲಿ ಪ್ರತಿವರ್ಷ 1.50 ಟಿಎಂಸಿ ನೀರನ್ನು ನೈಸರ್ಗಿಕ ಹರಿವು ಕಾಪಾಡಿಕೊಳ್ಳಲು ಬಳಸಬೇಕು ಎಂದು ಆದೇಶ ನೀಡಿತ್ತು.  ಅದರಂತೆ ಈಗ ಪ್ರತಿವರ್ಷ ಭೀಮಾ ನದಿಯಲ್ಲಿ ನೀರು ಹರಿಯುತ್ತಿದೆ.

ಮಹಾರಾಷ್ಟ್ರದಲ್ಲಿ ಹೆಚ್ಚಿಗೆ ಮಳೆ ಸುರಿದರೆ ಕರ್ನಾಟಕದ ಭೀಮಾ ಪ್ರವಾಹ ಉಂಟಾಗಿ ಜನ, ಜಾನುವಾರುಗಳಿಗೆ ತೊಂದರೆಯಾಗುತ್ತಿರುವುದು ಸಾಮಾನ್ಯವಾಗಿದೆ.

Leave a Reply

ಹೊಸ ಪೋಸ್ಟ್‌