ಮನಗೂಳಿ ಅಗಸಿ ಬಳಿ ದಲಿತರಿಗಾಗಿ ಮನೆ ನಿರ್ಮಿಸಿ ಕೊಡುವೆ- ಶಾಸಕ ಯತ್ನಾಳ

ವಿಜಯಪುರ: ನಗರದ ಮನಗೂಳಿ ಅಗಸಿ ಬಳಿ ದಲಿತರಿಗೆ ಮನೆಗಳನ್ನು ನಿರ್ಮಿಸಿ ಕೊಡುತ್ತೇನೆ.  ಯಾವುದೇ ಶಕ್ತಿ ಅಡ್ಡ ಬಂದರೂ ಲೆಕ್ಕಿಸದೇ ಸಮುದಾಯದ ಹಿತ ಕಾಪಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ನಗರದ ವಾರ್ಡ ಸಂಖ್ಯೆ 35ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಮಾರ್ಗದಲ್ಲಿ ನೂತನವಾಗಿ ನಿರ್ಮಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವೃತ್ತದಲ್ಲಿ ನೇತಾಜಿ ಪುತ್ಥಳಿ ಅನಾವರಣ ಮತ್ತು ವೃತ್ತ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ನಗರದ ಮನಗೂಳಿ ಅಗಸಿ ಬಳಿ ದಲಿತ ಕುಟುಂಬಗಳು ನೂರಾರು ವರ್ಷಗಳಿಂದ ವಾಸಿಸುತ್ತಿವೆ.  ಈ ಮನೆಗಳ ಬಳಿ ಇರುವ ಕಂದಾಯ ಇಲಾಖೆಯ ಏಳು ಎಕರೆ ಆಸ್ತಿಯನ್ನು, ವಕ್ಫ್ ಆಸ್ತಿಯಾಗಿ ಮಾಡಿಕೊಂಡಿದ್ದಾರೆ.  ಆದರೆ, ಈ ಪ್ರದೇಶವನ್ನು ಕರ್ನಾಟಕ ಸ್ಲಂ ಬೋರ್ಡ ಎಂದು ಉತಾರೆ ಮಾಡಿಕೊಡಿ.  ಅಲ್ಲಿ ದಲಿತರಿಗಾಗಿ 200 ಆಶ್ರಯ ಮನೆಗಳನ್ನು ನಿರ್ಮಿಸುವುದಾಗಿ ಜಿಲ್ಲಾಧಿಕಾರಿಗಳಿಗೆ ತಿಳಿಸಿರುವೆ ಎಂದು ಅವರು ಹೇಳಿದರು.

ವಿಜಯಪುರ ನಗರದ ವಾರ್ಡ ಸಂಖ್ಯೆ 35ರಲ್ಲಿ ನೇತಾಜಿ ಸುಭಾಷಚಂದ್ರ ಬೋಸ್ ಪುತ್ಥಳಿಯನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅನಾವರಣ ಮಾಡಿದರು. 

ಜಗತ್ತಿನ ಯಾವ ಶಕ್ತಿ ಅಡ್ಡ ಬಂದರೂ ಲೆಕ್ಕಿಸದೇ ದಲಿತರಿಗಾಗಿ ಮನೆಗಳನ್ನು ಕಟ್ಟುವೆ.  ಅದಕ್ಕೆ ಡಾ. ಅಂಬೇಡ್ಕರ್ ನಗರ ಎಂದು ಹೆಸರಿಡುವೆ.  ಭಾರತೀಯ ಸೇನೆ, ರೈಲ್ವೆ ಬಿಟ್ಟರೆ ದೇಶದಲ್ಲಿ ಅತೀ ಹೆಚ್ಚು ಆಸ್ತಿ ವಕ್ಫ್ ಹೆಸರಿನಲ್ಲಿದೆ.  ಇದು ಒಂದು ಪಾಕಿಸ್ತಾನಕ್ಕಿಂತಲೂ ಹೆಚ್ಚು ವಿಸ್ತಿರ್ಣವಾಗಿರುವುದು ಯೋಚಿಸಬೇಕಾದ ವಿಚಾರವಾಗಿದೆ.  ಮನಸ್ಸಿಗೆ ಬಂದಂತೆ ಸರಕಾರದ ಆಸ್ತಿಯನ್ನು ವಕ್ಫ್ ಆಸ್ತಿಯನ್ನಾಗಿ ಮಾಡಿಕೊಂಡಿರುವನ್ನು ತಡೆಯಲು ಕೇಂದ್ರ ಸರಕಾರ ವಕ್ಫ್ ಕಾಯಿದೆಗೆ ತಿದ್ದುಪಡಿಗೆ ಮುಂದಾಗಿದೆ.  ವಕ್ಫ್ ಆಸ್ತಿ ಮುಕ್ತಗೊಳಿಸಿ, ಕಂದಾಯ ಇಲಾಖೆಗೆ ನೀಡಬೇಕು.  ಅದರಲ್ಲಿಯ ಅರ್ಧ ಆಸ್ತಿ ದಲಿತರಿಗೆ ಮನೆ ಕಟ್ಟಿಸಿಕೊಳ್ಳಲು ನೀಡಬೇಕು ಎಂದು ಪ್ರಧಾನಿಗೆ ಪತ್ರ ಬರೆಯುವೆ ಎಂದು ಶಾಸಕರು ಹೇಳಿದರು.

ಹಿಂದೂಗಳು ಜಾತಿಯ ಹೆಸರಿನಲ್ಲಿ ಕಚ್ಚಾಡುವುದನ್ನು ಬಿಟ್ಟು ಒಂದಾಗದಿದ್ದರೆ ಮತ್ತು ಅವರು ಶೇ. 50 ರಷ್ಟಾದರೆ, ನಿಮ್ಮನ್ನು ಸುಮ್ಮನೆ ಬಿಡಲ್ಲ.  ಸುರಕ್ಷತೆಗಾಗಿ ಹಿಂದುತ್ವ, ದೇಶಕ್ಕಾಗಿ ಕೆಲಸ ಮಾಡುವವರನ್ನು ಬೆಂಬಲಿಸಿ ಮತ ಹಾಕಿ.  ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯವನ್ನು ಬಿಜೆಪಿ ಮತ್ತು ಹಿಂದು ಸಂಘಟನೆಗಳನ್ನು ಹೊರತು ಪಡಿಸಿದರೆ ಬೇರೆ ಯಾರೂ ಖಂಡಿಸಿಲ್ಲ.  ರಾಹುಲ ಗಾಂಧಿ ಹೊಸ ಪ್ರಧಾನಿಗೆ ಅಭಿನಂದನೆ ಸಲ್ಲಿಸಿದರೆ, ಮೋಧಿಯವರು ಅಭಿನಂದನೆ ಜೊತೆಗೆ ಅಲ್ಲಿನ ಹಿಂದೂಗಳು, ಸಿಖ್ಖರು ಮತ್ತು ಕ್ರೈಸ್ತರು ಸೇರಿದಂತೆ ಅಲ್ಪಸಂಖ್ಯಾತರ ರಕ್ಷಣೆ ನಿಮ್ಮ ಜವಾಬ್ದಾರಿ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತದೆ ಎಂದು ಪ್ರತಿಪಕ್ಷಗಳು ನಿರಂತರವಾಗಿ ಅಪಪ್ರಚಾರ ಮಾಡುತ್ತಿವೆ.  ಸೂರ್ಯ ಚಂದ್ರರು ಇರುವವರೆಗೂ ಅದು ಸಾಧ್ಯವಿಲ್ಲ.  ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್ ಅವರ ನಿಜವಾದ ಸೇವೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಕೇವಲ ಚರಕಾ ಸುತ್ತುವುದರಿಂದ ದೇಶಕ್ಕೆ ಸ್ವಾತಂತ್ರ್ಯ ಸಿಗಲಿಲ್ಲ.  ನೇತಾಜಿ ಸುಭಾಷಚಂದ್ರ ಬೋಸ್ ಅವರ ಭಯಕ್ಕೆ ಸ್ವಾತಂತ್ರ್ಯ ಸಿಕ್ಕಿದೆ.  ಗಾಂಧೀಜಿ ಮಹಾತ್ಮನಲ್ಲ.  ಹಾಗೇ ಕರೆಯಲೂಬಾರದು ಎಂದು ಡಾ. ಬಿ. ಆರ್. ಅಂಬೇಡ್ಕರ್ ಅಂದೇ ಹೇಳಿದ್ದಾರೆ.  ಶ್ರೀಮಂತನಾದ ನೇತಾಜಿ ಸುಭಾಷಚಂದ್ರ ಬೋಸ್ ಅವರು ಇಂದಿನ ಐಎಎಸ್ ಗೆ ಸಮವಾದ ಐಸಿಎಸ್ ತ್ಯಜಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಬಲಿಷ್ಠ ಸೈನ್ಯ ಹುಟ್ಟು ಹಾಕಿ ಶ್ರಮಿಸಿದ ಮಹಾನ್ ನಾಯಕರಾಗಿದ್ದಾರೆ.  ಈಗ ನನ್ನನ್ನು ಹೇಗೆ ತುಳಿಯಲು ಯತ್ನಿಸುತ್ತಿದ್ದಾರೋ, ಹಾಗೆಯೇ ನಿರಂತರವಾಗಿ ಅವರನ್ನು ತುಳಿಯುತ್ತಲೇ ಬಂದರು.  ಇಲ್ಲಿಯವರೆಗೂ ಅವರ ಸಾವಿನ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ.  ಲಾಲ ಬಹದ್ದೂರ ಶಾಸ್ತ್ರಿ ಅವರು ರಷ್ಯಾದಲ್ಲಿ ಹೇಗೆ ನಿಧನರಾದರು ಎಂಬುದೂ ತಿಳಿಯದಿರುವುದು ನೋವಿನ ಸಂಗತಿ ಎಂದು ಶಾಸಕರು ಹೇಳಿದರು.

2018ರಲ್ಲಿ ನಿಮ್ಮ ಆಶೀರ್ವಾದಿಂದ ಶಾಸಕನಾಗಿದ್ದೇನೆ.  ನಮ್ಮದೇ ಸರಕಾರವಿದ್ದರೂ ಜಗಳವಾಡಿದ ಕಾರಣ ಮಂತ್ರಿ ಆಗಲಿಲ್ಲ.  ಆದರೆ, ನಿರೀಕ್ಷೆ ಮೀರಿ ಅನುದಾನ ತಂದು ವಿಜಯಪುರವನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿ ಮಾಡಿದ್ದೇನೆ.  ನಗರದಲ್ಲಿ ನೇತಾಜಿ ಸೇರಿದಂತೆ ದೇಶಕ್ಕಾಗಿ ಶ್ರಮಿಸಿದ ಅನೇಕ ಮಹಾನ್ ನಾಯಕರ ವೃತ್ತ ನಿರ್ಮಿಸಿ, ಪುತ್ಥಳಿ ಪ್ರತಿಷ್ಠಾಪನೆ, ಮಾರ್ಗಗಳಿಗೆ ಮಹಾಪುರುಷರ ಹೆಸರು ನಾಮಕರಣ ಮಾಡಲಾಗಿದೆ.  ರಾಷ್ಟ್ರ ನಾಯಕರ ಶ್ರಮ, ತತ್ವ ಸಿದ್ಧಾಂತಗಳು, ಸಾಧನೆ ಇಂದಿನ ಯುವ ಪೀಳಿಗೆ ತಿಳಿಸುವುದು ಇದರ ಉದ್ದೇಶವಾಗಿ ಎಂದು ಅವರು ಹೇಳಿದರು.

ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಕುರಿಯವರ ಪ್ರಸ್ತಾವಿಕವಾಗಿ ಮಾತನಾಡಿದರು.

ಇದೇ ವೇಳೆ ವೃತ್ತ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಕಾಳಿದಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ ಜಿದ್ದಿ ಸೇರಿದಂತೆ ಮಾಜಿ ಸೈನಿಕರು ಮತ್ತಿತರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಪೋರೇಟರ್ ಗಳಾದ ಎಂ. ಎಸ್. ಕರಡಿ, ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ಮಹೇಶ ಒಡೆಯರ, ಮುಖಂಡರಾದ ರಾಜೇಶ ದೇವಗಿರಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ನೇತಾಜಿ ಸುಭಾಷಚಂದ್ರ ಬೋಸ ಸಾಮಾಜಿಕ ಸೇವಾ ಸಂಸ್ಥೆಯ ಅಧ್ಯಕ್ಷ ಮಹಾಂತಗೌಡ ಪಾಟೀಲ, ಸಂಘಟನಾ ಕಾರ್ಯದರ್ಶಿ ಆನಂದ ಹಂಜಿ, ಪ್ರವಚನಕಾರ ಬಾಬುರಾವ ಮಹಾರಾಜ ಉಪಸ್ಥಿತರಿದ್ದರು.

ರೇವಣಸಿದ್ದ ಮುಳಸಾವಳಗಿ ಸ್ವಾಗತಿಸಿದರು. ಮರನೂರ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌