ನಾನಾ ಬೇಡಿಕೆ ಈಡೇರಿಸಲು ಆಗ್ರಹ- ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಮನವಿ ಪತ್ರ ಸಲ್ಲಿಕೆ

ವಿಜಯಪುರ: ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ವತಿಯಿಂದ ವಿಧಾನ ಪರಿಷತ ಮಾಜಿ ಶಾಸಕ ಅರುಣ ಶಹಾಪುರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. 

ಖಾಸಗಿ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ ವೇತನ, ನಿವೃತ್ತಿ ವೇತನ ಮತ್ತು ಇತರೆ ಸೌಲಭ್ಯಗಳ ನಿಯಂತ್ರಣ ವಿಧೇಯಕ- 2014ಕ್ಕೆ ತಿದ್ದುಪಡಿ ತಂದು ಅಥವಾ ರದ್ದುಪಡಿಸಿ ಭವಿಷ್ಯವರ್ತಿಯಾಗಿ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳುವ ಮೂಲಕ 01.04.2006ರ ಪೂರ್ವದಲ್ಲಿ ನೇಮಕವಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರ ಅನುದಾನಕ್ಕೂ ಪೂರ್ವದ ಸೇವೆಯನ್ನು ಕೇವಲ ಪಿಂಚಣಿ ಸೌಲಭ್ಯಕ್ಕೆ ಮಾತ್ರ ಪರಿಗಣಿಸಿ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ ನೀಡಬೇಕು.  ರಾಜ್ಯ ಸರಕಾರ ರಾಜ್ಯದ ಸರಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಎನ್ ಪಿಎಸ್ ರದ್ದು ಮಾಡಿ ಓಪಿಎಸ್ ಜಾರಿಗೆ ತರುವ ಭರವಸೆ ನೀಡಬೇಕು.

01.04.2006ಕ್ಕೂ ಪೂರ್ವ ನೇಮಕಾತಿ ಅಧಿಸೂಚನೆಗಳ ಮೂಲಕ ನೇಮಕವಾಗಿ 01.04.2006ರ ನಂತರ ಸೇವೆಗೆ ಸೇರಿದ ಸರಕಾರಿ ನೌಕರರಿಗೆ ನೀಡಿರುವಂತೆ ಹಳೆಯ ಡಿಫೈನ್ಸ್ ಪಿಂಚಣಿ ಸೌಲಭ್ಯವನ್ನು ಅನುದಾನಿತ ಸಂಸ್ಥೆಗಳಲ್ಲಿರುವ ಸಮಾನ ಪ್ರಕರಣಗಳಿಗೂ ಸಹ ಅನ್ವಯಿಸಿ ಹಳೆಯ ನಿಶ್ಚಿತ ಪಿಂಚಣಿ ನೀಡಬೇಕು.  ಓಪಿಎಸ್ ಜಾರಿ ವಿಳಂಬವಾದಲ್ಲಿ ರಾಜ್ಯ ಸರಕಾರಿ ನೌಕರರಿಗೆ ನೀಡುತ್ತಿರುವಂತೆ ಎನ್‌ಪಿಎಸ್ ಯೋಜನೆಯನ್ನು ಯಥಾವತ್ತಾಗಿ ಅನುದಾನಿತ ನೌಕರರಿಗೂ ನೀಡಬೇಕು.  ನೇಮಕಾತಿ ಪ್ರಾಧಿಕಾರದ ಪಾಲಿನ ವಂತಿಗೆಯನ್ನು ಆಡಳಿತ ಮಂಡಳಿಗಳ ಬದಲಿಗೆ ಸರಕಾರವೇ ಭರಿಸಲು ಕ್ರಮ ಕೈಗೊಳ್ಳಬೇಕು.  ಅನುದಾನಿತ ನೌಕರರಿಗೂ ಕೂಡ ಸರಕಾರಿ ನೌಕರರಿಗೆ ನೀಡುವ ಆರೋಗ್ಯ ಸಂಜೀವಿನಿ ಮತ್ತಿತರ ವೈದ್ಯಕೀಯ ಸೌಲಭ್ಯಗಳನ್ನು ಜಾರಿ ಮಾಡಬೇಕು.

ಇತ್ತೀಚೆಗೆ 2020ರ ಡಿಸೆಂಬರ್ 31ರ ವರೆಗೆ ಪ್ರೌಢಶಾಲೆ, ಪಿಯು ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿ ನೀಡಿರುವುದು ಸ್ವಾಗತಾರ್ಹವಾಗಿದೆ.  ಅದೇ ರೀತಿ 2002 ರಿಂದ 2020ರ ವರೆಗೆ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಮರಣ, ನಿವೃತ್ತಿ, ರಾಜೀನಾಮೆ ಮತ್ತೀತರ ಕಾರಣಗಳಿಂದಾಗಿ ಖಾಲಿ ಇರುವ ಶಿಕ್ಷಕ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿ ನೀಡಬೇಕು.  ಸರಕಾರಿ ಶಾಲಾ ಕಾಲೇಜುಗಳ ಮತ್ತು ಅನುದಾನಿತ ಶಾಲಾ- ಕಾಲೇಜುಗಳ ಮಕ್ಕಳು ಮತ್ತು ನೌಕರರಿಗೆ ನೀಡುವ ಸೌಲಭ್ಯಗಳಲ್ಲಿ ಯಾವುದೇ ತಾರತಮ್ಯವನ್ನು ಮಾಡದಂತೆ ಸಮಾನವಾಗಿ ಸೌಲಭ್ಯಗಳನ್ನು ನೀಡಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ.

ಈ ಬೇಡಿಕೆಗಳನ್ನು ಈಡೇರಿಸುವಂತೆ ಸಂಘ ಈಗಾಗಲೇ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದೆ.  ಆದರೂ ಈವರೆಗೆ ಸರಕಾರವು ಮಾನವೀಯ ದೃಷ್ಟಿಯಿಂದ, ಕಾನೂನು ದೃಷ್ಟಿಯಿಂದ ಮತ್ತು ಚುನಾವಣಾ ಪೂರ್ವದಲ್ಲಿ ನೀಡಿರುವ ಭರವಸೆ ಪರಿಗಣಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ.  ಇದರಿಂದ ಶಿಕ್ಷಕರ ಮನಸ್ಸಿಗೆ ತುಂಬಾ ನೋವಾಗಿದೆ.  ಅಲ್ಲದೇ, ಸೇವಾ ಭದ್ರತೆ ಇಲ್ಲದಂತಾಗಿದೆ.  ಹೀಗಾಗಿ ಈ ಮಾನವೀಯ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಯ ಒಳಗಾಗಿ ಈಡೇರಿಸಬೇಕು.  ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಏಕಕಾಲಕ್ಕೆ ಶಾಲಾ- ಕಾಲೇಜುಗಳನ್ನು ಬಂದ್ ಮಾಡಿ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸಲಾಗುವುದು.  ಆಗ ಮುಂದಿನ ಆಗುಹೋಗುಗಳಿಗೆ ಸರಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಶಿಕ್ಷಕರು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಪುತ್ರ ಕಿರನಳ್ಳಿ, ಬಸಯ್ಯ ಹಿರೇಮಠ, ಶಿವಾನಂದ ಹಿರೇಕುರಬರ, ವಿಜಯಕುಮಾರ ವಪ್ಪಾರಿ, ಪ್ರಧಾನ ಕಾರ್ಯದರ್ಶಿ ಗಿರೀಶ ಬಿರಾದಾರ, ಆರ್. ಎಸ್. ತುಂಗಳ, ಎಸ್. ಜಿ. ಹಂಚಿನಾಳ, ಮಲ್ಲನಗೌಡ ಹಡಲಗೇರಿ, ಆನಂದ ಕುಲಕರ್ಣಿ, ಸಂಜೀವ ಫುಲಾರಿ. ವಿ. ಎನ್. ಚವ್ಹಾಣ, ರಮೇಶ ಗಂಗನಳ್ಳಿ, ಎಸ್. ಅರ್. ಮಠ, ಎನ್. ಎಸ್. ಕಾಳೆ, ಎನ್. ಎಸ್. ಕುಂದರಗಿ, ಅಶೋಕ ಕಟ್ಟಿ, ಮೌನೇಶ ಗೌಂಡಿ, ಶಿವಲಿಂಗ ಉಮ್ಮರಗಿ, ಮಂಜು ನಾಯ್ಕೋಡಿ, ಮಲ್ಲಿಕಾರ್ಜುನ ಲೋಣಿ ಸೇರಿದಂತೆ ಸಂಘದ ನಾನಾ ತಾಲೂಕುಗಳ ಪಾಧಿಕಾರಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌