ವಿಜಯಪುರ: ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ. ಎನ್. ಫಣೀಂದ್ರ ಅವರು ಆ. 22ರಂದು ನಗರದ ಸ್ಟೇಶನ್ ರಸ್ತೆಯ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ನಡೆಸಲಿದ್ದು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವುದರಿಂದ ವ್ಯವಸ್ಥಿತವಾಗಿ ನಿರ್ವಹಣೆ ಮಾಡುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕರ್ನಾಟಕದ ಉಪ ಲೋಕಾಯುಕ್ತರು ಅಂದು ಬೆಳಿಗ್ಗೆ 10 ರಿಂದ 1-30ರವರೆಗೆ ಹಾಗೂ ಮಧ್ಯಾಹ್ನ 2-30ರಿಂದ 5 ಗಂಟೆಯವರೆಗೆ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ವಿಚಾರಣೆ ನಡೆಸಲಿದ್ದು ಅಹವಾಲು ಕಾರ್ಯಕ್ರಮ ವ್ಯವಸ್ಥಿತವಾಗಿ ನಿರ್ವಹಣೆಗೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸಿ ಅಹವಾಲುಗಳನ್ನು ಸಲ್ಲಿಸುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಹವಾಲುಗಳ ಸ್ವೀಕಾರ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು. ಪ್ರತ್ಯೇಕವಾಗಿ ನಾಲ್ಕು ಕೌಂಟರ್‌ಗಳನ್ನು ತೆರೆಯುವ ಮೂಲಕ ಅಹವಾಲುಗಳ ಸ್ವೀಕಾರ ಸುಗಮಗೊಳಿಸಬೇಕು. ಕಾರ್ಯಕ್ರಮದಲ್ಲಿ 500 ಕ್ಕೂ ಹೆಚ್ಚು ಜನರು ಆಗಮಿಸುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ, ವೇದಿಕೆ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ತನಿಖೆ-ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಕಾನೂನು ರಿತ್ಯ ಆ.23ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30ರ ವರೆಗೆ ಮತ್ತು ಮ. 2.30 ರಿಂದ ಸಂ. 5 ಗಂಟೆಯವರೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿಚಾರಣೆ ನಡೆಸಲಿರುವುದರಿಂದ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಎಲ್ಲ ಅಗತ್ಯ ಮಾಹಿತಿಯೊಂದಿಗೆ ಹಾಜರಿರಬೇಕು ಎಂದು ಅವರು ಸೂಚನೆ ನೀಡಿದರು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಲೋಕಾಯುಕ್ತ ಡಿವೈಎಸ್‌ಪಿ ಸುರೇಶ ರೆಡ್ಡಿ, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಲೋಕಾಯುಕ್ತ ಪೊಲೀಸ್ ಇನನ್ಸಪೆಕ್ಟರ್ ಆನಂದ ಠಕ್ಕಣ್ಣವರ, ಆನಂದ ಡೋಣಿ, ಹೆಸ್ಕಾಂ ಅಧೀಕ್ಷಕ ಸಿದ್ಧಪ್ಪ ಬಿಂಜಗೇರಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.