ವಿಜಯಪುರ: ಮುಡಾ ಹಗರಣ ವಿಷಯದಲ್ಲಿ ಸಿಎಂ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ಖಂಡಿಸಿ ನಾಳೆ ಆಗಷ್ಟ 19 ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಮತ್ತು ಲೋಕಸಭೆ ಚುನಾವಣೆವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರೊ. ರಾಜು ಆಲಗೂರ ತಿಳಿಸಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲ ಧಾವರಚಂದ ಗೆಹ್ಲೋಟ್ ಅವರು ಸಿಎಂ ಎಸ್. ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿರುವದನ್ನು ವಿರೋಧಿಸಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಸೋಮವಾರ ಬೆಳಿಗ್ಗೆ 11 ಗಂಟೆಗೆ ನಗರದ ಗ್ರಾಮದೇವತೆ ಶ್ರೀ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಗಾಂಧಿಚೌಕ್, ಬಸವೇಶ್ವರ ಚೌಕ್ ಮತ್ತು ಅಂಬೇಡ್ಕರ್ ಚೌಕ್ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಶಾಸಕರು, ಕಾಂಗ್ರೆಸ್ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಮುಡಾ ವಿಚಾರದಲ್ಲಿ ಸಿಎಂ ಯಾವುದೇ ತಪ್ಪು ಮಾಡಿಲ್ಲ. ಅವರ ಪತ್ನಿ ಪಾರ್ವತಿ ಅವರು ಜಮೀನು ನೀಡಿ ನಿವೇಶಗಳನ್ನು ಪಡೆದುಕೊಂಡಿದ್ದಾರೆ. ಆದರೆ ರಾಜಕೀಯ ದುರುದ್ದೇಶದಿಂದ ಕೇಂದ್ರ ಸರಕಾರ ಮತ್ತು ಬಿಜೆಪಿ ಸಿಎಂ ವಿರುದ್ದ ರಾಜ್ಯಪಾಲರ ಮೂಲಕ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡುವಂತೆ ಮಾಡಿದ್ದಾರೆ. ಈಗಾಗಲೇ ಬಿಜೆಪಿಯ ಕೆಲವು ಮುಖಂಡರು, ಮಾಜಿ ಸಚಿವ ಮುರುಗೇಶ ನಿರಾಣಿ, ಜನಾರ್ಧನರೆಡ್ಡಿ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಚಿವ ಅವರ ವಿರುದ್ದ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ. ಆದರೆ, ಅವರ ಪ್ರಕರಣಗಳನ್ನು ಬಿಟ್ಟು ಉದ್ದೇಶಪೂರ್ವಕವಾಗಿ ಸಿಎಂ ವಿಚಾರದಲ್ಲಿ ಪ್ರಾಸಿಕ್ಯೂಷನ್ ಗೆ ಅನಮತಿ ಕೊಟ್ಟಿದ್ದಾರೆ. ನಾವು ಕಾನೂನು ಹೋರಾಟ ಮಾಡುತ್ತೇವೆ. ನಮಗೆ ನ್ಯಾಯಾಲಯದಲ್ಲಿ ಈ ವಿಚಾರದಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಮುಖಂಡ ಅಬ್ದುಲ್ ಹಮ್ಮಿದ್ ಮುಶ್ರೀಫ್ ಮಾತನಾಡಿ, ಬಿಜೆಪಿ ದೇಶದ ನಾನಾ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇಂಥ ಆರೋಪಗಳನ್ನು ಮಾಡುತ್ತ ಸರಕಾರ ಬೀಳಿಸುವ ಹುನ್ನಾರ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ ಬಕ್ಷಿ, ಕಾರ್ಪೊರೇಟರ್ ಅಶ್ಪಾಕ್ ಮನಗೂಳಿ, ಮಾಜಿ ಕಾರ್ಪೋರೇಟರ್ ಅಬ್ದುಲ್ ರಜಾಕ್ ಹೊರ್ತಿ, ಮುಖಂಡ ಸೋಮನಾಥ ಕಳ್ಳಿಮನಿ ಉಪಸ್ಥಿತರಿದ್ದರು.