ವಿಜಯಪುರ: ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ. ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಾನಾ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ನರ್ಸರಿಯಿಂದ ಹಿಡಿದು 5ನೇ ತರಗತಿಯವರೆಗೆ ಪ್ರತಿಯೊಂದು ಮಕ್ಕಳು ರಾಧಾ- ಕೃಷ್ಣ, ವಾಸುದೇವ- ದೇವಕಿ ವೇಷ ಧರಿಸಿ ಆಗಮಿಸುವ ಮೂಲಕ ಇಡೀ ಶಾಲೆಯಲ್ಲಿ ನಂದಗೋಕುಲ ವಾತಾವರಣವನ್ನು ಸೃಷ್ಟಿಸಿದ್ದರು. ಎಲ್.ಕೆ.ಜಿ ಪುಟ್ಟ ಬಾಲಕಿ ತೃಪ್ತಿ ಹಚಡದ ಭರತ ನಾಟ್ಯದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ಯು.ಕೆ.ಜಿ ವಿದ್ಯಾರ್ಥಿನಿ ಕನಸು ಜೆಟ್ಟಗಿ ಭಗವದ್ಗೀತೆಯ ಶ್ಲೋಕ ಹೇಳುವ ಮೂಲಕ ಎಲ್ಲರನ್ನು ನಿಬ್ಬೆರಾಗುವಂತೆ ಮಾಡಿದಳು. ಪಾಲಕರೂ ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನಂದಗೋಕುಲದ ಒಂದು ಭಾಗ ಎಂಬಂತೆ ಕೋಲಾಟ ಆಡುವ ಮೂಲಕ ಗಮನ ಸೆಳೆದರು. 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಕೃಷ್ಣ ಜನ್ಮಾಷ್ಟಮಿಯ ಮುಖ್ಯ ಆಕರ್ಷಣೆಯ ಭಾಗವಾದ ಮೊಸರಿನ ಗಡಿಗೆ ಒಡೆಯುವ ಶಾಲಾ ಅಂತರ್ ಸದನ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದಲ್ಲಿ ಸೇರಿದ ಜನರ ಮೈನವಿರೇಳುವಂತೆ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯ ಶೈಜೂ ನಾಯರ ಮತ್ತು ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ ಅವರು ಸ್ಪರ್ಧೆಯಲ್ಲಿ ಗೆಲುವ ಸಾಧಿಸಿದ ಮಕ್ಕಳಿಗೆ ಬಹುಮಾನ ವಿತರಿಸಿದರು.
ಯು.ಕೆ.ಜಿ ವಿದ್ಯಾರ್ಥಿಗಳಾದ ಸಾಹಿತ್ಯ ಬಿರಾದಾರ ಸ್ವಾಗತಿದರು. ಜೀವಿಕಾ ವಂದಸಿದರು.