ವಿಜಯಪುರ: ಬಂಜಾರಾ ಸಮಾಜ ಬಸವಾದಿ ಶರಣರ ಕಾಯಕ ತತ್ವ ಪಾಲಿಸುವುದರ ಜೊತೆಗೆ ಅದರದೇ ಆದ ಸಂಸ್ಕೃತಿಯನ್ನೂ ಮುಂದುವರೆಸಿಕೊಂಡು ಬರುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಬುಧವಾರ ರಾತ್ರಿ ತಿಕೋಟಾ ತಾಲೂಕಿನ ಜಾಲಗೇರಿ ಎಲ್. ಟಿ.-1 ರಲ್ಲಿ ದುರ್ಗಾದೇವಿ ಜಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಂಜಾರಾ ಸಮಾಜ ಅದರದೇ ಆದ ವಿಭಿನ್ನ ಸಂಸ್ಕೃತಿ ಹೊಂದಿದ್ದು, ದುಡಿಮೆಯ ಕುರಿತು ಬಸವಾದಿ ಶರಣರು ಮತ್ತು ಅಣ್ಣ ಬಸವಣ್ಣನವರು ಹೇಳಿದಂತೆ ಕಾಯಕ ತತ್ವಕ್ಕೆ ಮಹತ್ವ ಕೊಡುತ್ತದೆ. ಶ್ರಮ ಜೀವಿಗಳಾಗಿರುವ ಈ ಸಮಾಜದ ಜನರು ಶ್ರಮವಹಿಸಿ ದುಡಿದು ತಂತಮ್ಮ ತಾಂಡಾಗಳಲ್ಲಿ ಅಷ್ಟೇ ಶ್ರದ್ಧಾ ಭಕ್ತಿಯಿಂದ ದೇವರ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಕಾಯಕಕ್ಕೆ ನೀಡುವಷ್ಟೇ ಮಹತ್ವವನ್ನು ಸಂಸ್ಕೃತಿಗೂ ನೀಡುತ್ತಿದೆ. ಬಹಳಷ್ಟು ಸಮುದಾಯಗಳು ತಮ್ಮ ಸಂಸ್ಕೃತಿಯನ್ನು ಮರೆಯುತ್ತಿರುವ ಇಂದಿನ ದಿನಗಳಲ್ಲಿ ಬಂಜಾರಾ ಸಮುದಾಯದ ತಾಯಂದಿರು, ಸಹೋದರಿಯರು ಇವತ್ತಿಗೂ ತಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿದಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
2013-18ರಲ್ಲಿ ಜಲಸಂಪನ್ಮೂಲ ಸಚಿವನಾಗಿದ್ದಾಗ ನಾನು ಪ್ರತಿ ತಾಂಡಾಗಳಿಗೆ ಕನಿಷ್ಠ ರೂ. 50 ಲಕ್ಷದಿಂದ ರೂ. 1 ಕೋ. ವರೆಗೆ ದೇವಸ್ಥಾನ, ಸಮುದಾಯ ಭವನಗಳ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ಅಲ್ಲದೇ, ವಿಜಯಪುರ ನಗರದಲ್ಲಿ ಸೇವಾಲಾಲ, ರಾಮರಾವ ಮಹಾರಾಜರ ಹೆಸರಿನಲ್ಲಿ ಭವನ ನಿರ್ಮಾಣಕ್ಕೆ ಅನುದಾನ ನೀಡಿದ್ದೇನೆ. ಅಲ್ಲದೇ, ಹಾಮುಲಾಲ ದೇವಸ್ಥಾಕ್ಕೆ ನಿವೇಷನ ಒದಗಿಸಿ ದೇವಸ್ಥಾನ ನಿರ್ಮಾಣಕ್ಕೆ ಹಾಗೂ ಅಥಣಿ ತಾಲೂಕಿನಲ್ಲಿರುವ ಮೂಲ ಗದ್ದುಗೆಯ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ನಮ್ಮ ಪ್ರಯತ್ನದ ಫಲವಾಗಿ ಈ ಬಾರಿ ಜಾಲಗೇರಿ ಕೆರೆ ಸಂಪೂರ್ಣವಾಗಿ ಭರ್ತಿಯಾಗಿದೆ ಎಂದು ಸಚಿವರು ತಿಳಿಸಿದರು.
ನಮ್ಮ ತಂದೆಯವರ ಕಾಲದಿಂದಲೂ ಈ ಸಮುದಾಯ ನಮಗೆ ಪ್ರೀತಿ ತೋರಿಸುತ್ತ ಬಂದಿದೆ. ನಮ್ಮ ಜೊತೆ ನೀವಿದ್ದೀರಿ. ನಿಮ್ಮ ಜೊತೆ ನಾವಿದ್ದೇವೆ. ಸಮಾಜದ ಕೆಲಸಗಳಿಗೆ ಈ ಹಿಂದೆಯೂ ಸ್ಪಂದಿಸಿದ್ದೇನೆ. ಇಂದು ಮತ್ತು ಮುಂದೆಯೂ ಸ್ಪಂದಿಸುತ್ತೇನೆ. ಈ ದೇವಸ್ಥಾನದ ಅಭಿವೃದ್ಧಿಗೂ ನೆರವು ನೀಡುತ್ತೇನೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ ಮಹಾರಾಜರು, ಅರ್ಜುನ ರಾಠೋಡ, ರಾಜಶೇಖರ ಪವಾರ, ವಾಮನ ಚವ್ಹಾಣ, ಧನಸಿಂಗ್ ಚವ್ಹಾಣ, ತಾವರು ರಾಠೋಡ, ರಾಮು ಕಾರಬಾರಿ, ಅಮಸಿದ್ಧ ನಾಯಕ, ಗ್ರಾ. ಪಂ. ಸದಸ್ಯರು, ಸೋಮು ಢಾವ, ಸೋಮು ಡಾವ, ಜಾಲಗೇರಿ ಗ್ರಾ. ಪಂ. ಸದಸ್ಯರು, ತಾಂಡಾದ ಮುಖಂಡರು, ಹಿರಿಯರು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.