ವಿಜಯಪುರ: ಸಂಸ್ಕೃತದಲ್ಲಿ ಶ್ಲೋಕದ ರೂಪದಲ್ಲಿರುವ ಆಯುರ್ವೇದ ಔಷಧಿಗಳ ಮಾಹಿತಿಯನ್ನು ಯುವವೈದ್ಯರು ಮತ್ತು ಸಂಶೋಧಕರಿಗೆ ಸರಳವಾಗಿ ಅಧ್ಯಯನ ಮಾಡಲು ‘ಅಗದ ಸಮುಚ್ಚಯ’ ಪುಸ್ತಕ ವರದಾನವಾಗಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ ಹೇಳಿದ್ದಾರೆ.
ಗುರುವಾರ ವಿವಿ ಕಚೇರಿಯಲ್ಲಿ ಎ. ವಿ. ಎಸ್ ಆಯುರ್ವೇದ ಕಾಲೇಜಿನ ಅಗದ ತಂತ್ರವಿಭಾಗದ ಮುಖ್ಯಸ್ಥೆ ಡಾ. ಮಲ್ಲಮ್ಮ ಬಿರಾದಾರ ಅವರು ರಚಿಸಿದ ‘ಅಗದ ಸಮುಚ್ಚಯ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ವಿಷಜಂತುಗಳು ಕಚ್ಚಿದಾಗ ನೀಡಲಾಗುವ ಚಿಕಿತ್ಸೆಗೆ ಆಯುರ್ವೇದ ಪದ್ದತಿಯಲ್ಲಿರುವ ಔಷಧಿಗಳ ಕುರಿತು ಈ ಪುಸ್ತಕದಲ್ಲಿ ಸಮಗ್ರ ಮಾಹಿತಿ ನೀಡಲಾಗಿದೆ. ಅಲ್ಲದೇ, ಗಿಡಮೂಲಿಕೆಗಳಿಂದ ಗುಣಪಡಿಸಬಹುದಾದ ಕಾಯಿಲೆಗಳ ಕುರಿತು ಅತ್ಯಂತ ಸರಳ ರೀತಿಯಲ್ಲಿ ವಿವರಿಸಲಾಗಿದೆ. ಇದರಿಂದ ಆಯುರ್ವೇದ ಯುವವೈದ್ಯರಿಗೆ ಮತ್ತು ಸಂಶೋಧಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಒಟ್ಟಾರೆ ಈ ಪುಸ್ತಕ ಶಾಸ್ತ್ರೋಕ್ತವಾಗಿ, ಸಂಶೋಧನಾತ್ಮಕವಾಗಿ ನಡೆಸಲಾದ ಅಧ್ಯಯನದಿಂದ ಕೂಡಿದ ವಿರಳ ಮತ್ತು ಸರಳ ಕೈಪಿಡಿಯಾಗಿದೆ ಎಂದು ಅವರು ಹೇಳಿದರು.
ಡಾ. ಮಲ್ಲಮ್ಮ ಬಿರಾದಾರ ಮಾತನಾಡಿ, ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಆಯುರ್ವೇದ ವಿಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಈ ಪುಸ್ತಕದಲ್ಲಿ ಆಯುರ್ವೇದದಲ್ಲಿ ಉಲ್ಲೇಖಿಸಿರುವ ಬಹಳಷ್ಟು ವನಸ್ಪತಿ ಮತ್ತು ಗಿಡಮೂಲಿಕೆಗಳ ಮಾಹಿತಿ ಇದೆ. ಒಂದೇ ಹೆಸರನ್ನು ಹಲವಾರು ಗಿಡಮೂಲಿಕೆಗಳಿಗೆ ಬಳಸಿರುವುದರಿಂದ ನಿಜವಾದ ವಿಷನಾಶಕ ದ್ರವ್ಯ ಯಾವುದು? ಯಾವ ಭಾಗದಲ್ಲಿ ಉತ್ಕೃಷ್ಟ ಗುಣಗಳಿವೆ? ಎಂಬುದನ್ನು ಸವಿಸ್ತಾರವಾಗಿ ತಿಳಿಸಲಾಗಿದೆ. ವಿಷಜಂತುಗಳಿಂದ ಅಪಾಯ ಎದುರಾದ ಸಂದರ್ಭದಲ್ಲಿ ತುರ್ತಾಗಿ ಕೈಗೊಳ್ಳಬೇಕಿರುವ ಕ್ರಮಗಳು, ಔಷಧಿ ಬಳಕೆ ವಿಧಾನದ ಕುರಿತು ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತಾಧಿಕಾರಿಗಳಾದ ಎಸ್.ಎಚ್.ಲಗಳಿ, ವಿಲಾಸ ಬಗಲಿ, ಡಾ. ಮಹಾಂತೇಶ ಬಿರಾದಾರ ಮತ್ತು ಡಾ. ಪ್ರಲ್ಹಾದ ಪಾಟೀಲ ಉಪಸ್ಥಿತರಿದ್ದರು.