ಬಜೆಟ್ ನಲ್ಲಿ ಯುವ ಸಬಲೀಕರಣಕ್ಕೆ ಹೆಚ್ಚಿನ ಹಣ ಕೊಡಿ- ಕೇಂದ್ರ ಸಚಿವ ಮನ್ಸೂಖ್ ಮಾಂಡವೀಯ ವೈಷ್ಣವ ಭೇಟಿ ಮಾಡಿದ ರಾಷ್ಟ್ರೀಯ ಯುವ ಸಲಹಾ ಸಮಿತಿ ಪದಾಧಿಕಾರಿಗಳ ನಿಯೋಗ

ವಿಜಯಪುರ: ಯುವ ಸಬಲೀಕರಣಕ್ಕೆ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಒದಗಿಸುವುದು, ಯುವ ಸಬಲೀಕರಣ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ಸೇರಿದಂತೆ ಯುವಕರ ಶ್ರೇಯೋಭಿವೃದ್ದಿಗೆ ಸಂಬಂಧಿಸಿದ ಹಲವಾರು ಯುವಕರ ಪರ  ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒತ್ತಾಯಿಸಿ  ರಾಷ್ಟ್ರೀಯ ಯುವ ಸಲಹಾ ಸಮಿತಿ ಪದಾಧಿಕಾರಿಗಳ ನಿಯೋಗ ಕೇಂದ್ರ ಯುವ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ನವದೆಹಲಿಯಲ್ಲಿರುವ ಶ್ರಮ ಶಕ್ತಿ ಭವನದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.

ಯುವಕರ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಮಹತ್ವದ ವಿಷಯಗಳನ್ನು ಇದೇ ಸಂದರ್ಭದಲ್ಲಿ ಚರ್ಚಿಸಲಾಯಿತು.

ನಿಯೋಗದ ನೇತೃತ್ವ ವಹಿಸಿದ್ದ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರ ಫೆಡರೇಶನ್ ಅಧ್ಯಕ್ಷ ಡಾ. ಜಾವೀದ ಜಮಾದಾರ ಮಾತನಾಡಿ, ಯುವ ಸಬಲೀಕರಣಕ್ಕೆ ಕಡಿಮೆ ಅನುದಾನ ವಿನಿಯೋಗಿಸಲಾಗುತ್ತಿದೆ.  ಕ್ರೀಡಾ ಚಟುವಟಿಕೆಗಳಿಗೆ ದೊರಕುವ ಅನುದಾನ ಮಾದರಿಯಲ್ಲಿಯೇ ದೊಡ್ಡ ಅನುದಾನ ಯುವ ಸಬಲೀಕರಣಕ್ಕೆ ಒದಗಿಸಿದರೆ ಯುವಕರ ವಿಕಾಸ ಸಾಧ್ಯವಾಗುತ್ತದೆ, ಯುವಕರ ವಿಕಾಸದಲ್ಲಿಯೇ ಭಾರತದ ವಿಕಾಸ ಅಡಗಿದೆ ಎಂದು ಹೇಳಿದರು.

ಪ್ರಶಸ್ತಿ ಪುರಸ್ಕೃತರು ತಾವು ಜಿಲ್ಲೆ ಮತ್ತು ರಾಜ್ಯಗಳಲ್ಲಿ ಸ್ವಯಂ ಪ್ರೇರಿತವಾಗಿ ಅನುಷ್ಠಾನ ಮಾಡುತ್ತಿರುವ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಅವರು ವಿವರಿಸಿದರು.

ಈ ಉಪಕ್ರಮಗಳು ಸರಕಾರದ ಯೋಜನೆಗಳನ್ನು ಉತ್ತೇಜಿಸುವಲ್ಲಿ ಮತ್ತು ಜಾಗೃತಿ ಮೂಡಿಸುವಲ್ಲಿ, ವಿಶೇಷವಾಗಿ ಗ್ರಾಮೀಣ ಜನರಲ್ಲಿ ರಾಷ್ಟ್ರದ ಅಭಿವೃದ್ಧಿಯಲ್ಲಿ ಹೆಚ್ಚು ಸಂಪೂರ್ಣವಾಗಿ ಭಾಗವಹಿಸಲು ಪ್ರೇರಣೆ ದೊರಕಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ವಿಜಯಪುರ ಒಂದು ಐತಿಹಾಸಿಕ ನಗರಿಯಾಗಿದ್ದು, ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಂಡಿದೆ, ಹೀಗಾಗಿ ವಿಜಯಪುರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ, ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ವತಿಯಿಂದ ಉನ್ನತ ತರಬೇತಿ ಕೇಂದ್ರ ಪ್ರಾರಂಭಿಸುವಂತೆ ಜಾವೀದ ಜಮಾದಾರ ಈ ಸಭೆಯಲ್ಲಿ ಪ್ರಬಲವಾಗಿ ಒತ್ತಾಯಿಸಿದರು.

ನಿಯೋಗದ ಬೇಡಿಕೆ ಆಲಿಸಿದ ಸಚಿವ ಮನ್ಸೂಖ್ ಮಾಂಡವೀಯ, ಯುವಕರು ರಾಷ್ಟ್ರೀಯ ಅಭಿವೃದ್ಧಿಗೆ ನಿರ್ಣಾಯಕ ಸಂಪನ್ಮೂಲ, ಅವರ ಸಬಲೀಕರಣಕ್ಕೆ ಸರ್ಕಾರ ಸಂಪೂರ್ಣ ಬದ್ದವಾಗಿದ್ದು ಈ ವಿಷಯದಲ್ಲಿ ಬದ್ದತೆ ಪ್ರದರ್ಶಿಸಲಿದೆ.  ಮೈ ಭಾರತ್ ಪೋರ್ಟಲ್ ಅನ್ನು ಉತ್ತೇಜಿಸಲು ಮತ್ತು ಫಲಾನುಭವಿಗಳನ್ನು ನೋಂದಾಯಿಸಲು ಸಹಕಾರ ನೀಡಬೇಕು ಎಂದು ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ಸಂಸದ ಹಾಗೂ ಯುವ ಕ್ರೀಡಾ ಮಂತ್ರಾಲಯದ ಸಂಸದೀಯ ಸ್ಥಾಯಿ ಸಮಿತಿ ಸದಸ್ಯ ಜಗನ್ನಾಥ ಸರಕಾರ, ಎನ್.ವೈ.ಎ.ಎಫ್.ಐ. ರಾಷ್ಟ್ರೀಯ ಸಂಯೋಜಕ ಡಾ. ಅನುಜ್ ವಿಲಿಯಮ್ಸ್ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌