ಬಡ, ಪ್ರತಿಭಾವಂತ ಐದು ವಿದ್ಯಾರ್ಥಿಗಳಿಗೆ ಸಚಿವ ಎಂಬಿಪಿ ಸಹಾಯ ಹಸ್ತ- ವೈದ್ಯರಾಗುವ ಕನಸು ನನಸಾಗಲು ಆರ್ಥಿಕ ನೆರವು

ವಿಜಯಪುರ: ನೀಟ್ ಪಾಸಾಗಿ ಸರಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಸೀಟು ಪಡೆದರೂ ಶುಲ್ಕ ಭರಿಸಲಾಗದೆ ಹಣದ ಸಮಸ್ಯೆ ಎದುರಿಸುತ್ತಿದ್ದ ಐದು ಜನ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗ ಕೋರ್ಸಿಗೆ ಅಗತ್ಯವಾಗಿರುವ ಸಂಪೂರ್ಣ ಆರ್ಥಿಕ ನೆರವು ನೀಡುವ ಮೂಲಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸಹಾಯ ಹಸ್ತ ಚಾಚಿದ್ದಾರೆ.

ಇಂದು ಸೋಮವಾರ ವಿಜಯಪುರದಲ್ಲಿರುವ ಗೃಹ ಕಚೇರಿಯಲ್ಲಿ ತಿಕೋಟಾ ತಾಲೂಕಿನ ಬಾಬಾನಗರದ ವಿಶಾಲ ರಾಯಗೊಂಡ ಕೋರೆಗಾಂವ, ಅರಕೇರಿಯ ಕರಣ ಪಂಡಿತ ಸಿಂಧೆ ಮತ್ತು ಯಶವಂತ ಮಾರುತಿ ಮೋಹಿತೆ, ಬಬಲೇಶ್ವರ ತಾಲೂಕಿನ ಕಾರಜೋಳ ತಾಂಡಾದ ಅಜೀತ ಪರಶುರಾಮ ರಾಠೋಡ ಹಾಗೂ ಕಂಬಾಗಿಯ ರಾಜಶ್ರೀ ಮಲ್ಲಿಕಾರ್ಜುನ ಮಠ ಅವರಿಗೆ ಸಚಿವರು ಮೊದಲ ಕಂತಾಗಿ ಎಂ. ಬಿ. ಬಿ. ಎಸ್. ಕೋರ್ಸಿನ ಮೊದಲ ವರ್ಷದ ಬೋಧನೆ ಶುಲ್ಕ, ಹಾಸ್ಟೆಲ್ ಶುಲ್ಕ ಮತ್ತು ಊಟದ ಶುಲ್ಕಕ್ಕೆ ಅಗತ್ಯವಾಗಿರುವ ಹಣದ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ಆರ್. ವಿ ಕುಲಕರ್ಣಿ, ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತ ಕಚೇರಿಯ ಅಧೀಕ್ಷಕ ಎಸ್. ಎ. ಬಿರಾದಾರ(ಕನ್ನಾಳ) ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

ಬಾಬಾನಗರದ ವಿದ್ಯಾರ್ಥಿ ವಿಶಾಲ ಕೋರೆಗಾಂವ ನೀಟ್ ಪರೀಕ್ಷೆಯಲ್ಲಿ 72357ನೇ ಪಡೆದಿದ್ದು, ಚಿತ್ರದುರ್ಗ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದಿದ್ದಾನೆ. ಈ ವಿದ್ಯಾರ್ಥಿಯ ತಂದೆ ರಾಯಗೊಂಡ ಮತ್ತು ತಾಯಿ ವಿಲಾಸಮತಿ ರೈತರಾಗಿದ್ದು, ಬಡಕುಟುಂಬಕ್ಕೆ ಸೇರಿದ್ದಾರೆ. ಈ ವಿದ್ಯಾರ್ಥಿಯ ಕೋರ್ಸಿನ ಪ್ರಥಮ ವರ್ಷದ ಬೋಧನೆ, ಹಾಸ್ಟೇಲು ಮತ್ತು ಊಟದ ವೆಚ್ಚ ಸೇರಿ ಮೊದಲ ಕಂತಿನ ರೂ. 1 ಲಕ್ಷ 54 ಸಾವಿರದ 600 ಚೆಕ್ ನ್ನು ಸಚಿವರು ವಿತರಿಸಿದರು.

ಇದೇ ವೇಳೆ ಅರಕೇರಿಯ ವಿದ್ಯಾರ್ಥಿ ಕರಣ ಸಿಂಧೆ ನೀಟ್ ಪರೀಕ್ಷೆಯಲ್ಲಿ 75075ನೇ ರ‌್ಯಾಂಕ್ ಪಡೆದಿದ್ದು, ಹಾವೇರಿ ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆದಿದ್ದಾನೆ. ಈ ವಿದ್ಯಾರ್ಥಿಯ ತಂದೆ ಪಂಡಿತ ಮತ್ತು ಬಾನಾಬಾಯಿ ಕೂಲಿ ಕಾರ್ಮಿಕರಾಗಿದ್ದಾರೆ. ಈ ವಿದ್ಯಾರ್ಥಿಯ ಕಾಲೇಜು, ಹಾಸ್ಟೇಲು ಹಾಗೂ ಊಟದ ಶುಲ್ಕ ಸೇರಿ ಒಟ್ಟು ರೂ. 1 ಲಕ್ಷ 91 ಸಾವಿರದ 250 ಚೆಕ್ ನ್ನು ಸಚಿವರು ವಿತರಿಸಿದರು.

ಇದೇ ಗ್ರಾಮದ ಮತ್ತೋರ್ವ ವಿದ್ಯಾರ್ಥಿ ಯಶವಂತ ಮೋಹಿತೆ ನೀಟ್ ಪರೀಕ್ಷೆಯಲ್ಲಿ 92618ನೇ ರ‌್ಯಾಂಕ್ ಪಡೆದಿದ್ದು, ಶಿವಮೊಗ್ಗ ಮೆಡಿಕಲ್ ಕಾಲೇಜಿಗೆ ಆಯ್ಜೆಯಾಗಿದ್ದಾನೆ. ಈತನ ತಂದೆ ಮಾರುತಿ ದರ್ಜಿ(ಟೇಲರ್) ಆಗಿದ್ದು, ತಾಯಿ ವಂದನಾ ಗೃಹಿಣಿಯಾಗಿದ್ದಾರೆ. ಈ ವಿದ್ಯಾರ್ಥಿಯ ಕಾಲೇಜು, ಹಾಸ್ಟೇಲು ಹಾಗೂ ಊಟದ ಶುಲ್ಕ ರೂ. 3 ಲಕ್ಷ 9 ಸಾವಿರದ 321 ಚೆಕ್ ನ್ನು ಸಚಿವರು ವಿತರಿಸಿದರು.

ಬಬಲೇಶ್ವರ ತಾಲೂಕಿನ ಕಾರಜೊಳ ತಾಂಡಾದ ಅಜೀತ ರಾಠೋಡ ನೀಟ್ ಪರೀಕ್ಷೆಯಲ್ಲಿ 139412 ರ‌್ಯಾಂಕ್ ಪಡೆದಿದ್ದು, ಕಾರವಾರ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದಿದ್ದಾನೆ. ಈತನ ತಂದೆ ಪರಶುರಾಮ ಮತ್ತು ತಾಯಿ ಪ್ರೇಮಾ ಕೃಷಿ ಕಾರ್ಮಿಕರಾಗಿದ್ದು, ಉದ್ಯೋಗ ಅರಸಿ ಮಹಾರಾಷ್ಟ್ರಕ್ಕೆ ಗುಳೆ ಹೋಗುತ್ತಿರುತ್ತಾರೆ‌. ಈತನ ಕಾಲೇಜು ಮತ್ತು ಹಾಸ್ಟೇಲ್ ಶುಲ್ಕಕ್ಕೆ ಅಗತ್ಯವಾದ ರೂ. 1 ಲಕ್ಷ 35 ಸಾವಿರ ಹಣದ ಚೆಕ್ ನ್ನು ಸಚಿವರು ವಿತರಿಸಿದರು.

ಬಬಲೇಶ್ವರ ತಾಲೂಕಿನ ಕಂಬಾಗಿ ಗ್ರಾಮದ ವಿದ್ಯಾರ್ಥಿನಿ ರಾಜಶ್ರೀ ಮಠ ನೀಟ್ ಪರೀಕ್ಷೆಯಲ್ಲಿ 56262ನೇ ಪಡೆದಿದ್ದು, ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆದಿದ್ದಾಳೆ. ಈಕೆಯ ತಂದೆ ಮಲ್ಲಿಕಾರ್ಜುನ ಮತ್ತು ತಾಯಿ ಜಯಶ್ರೀ ರೈತರಾಗಿದ್ದಾರೆ. ಈ ವಿದ್ಯಾರ್ಥಿನಿಯ ಕಾಲೇಜು, ಹಾಸ್ಟೇಲು ಹಾಗೂ ಊಟದ ಶುಲ್ಕ ರೂ. 1 ಲಕ್ಷ 56 ಸಾವಿರದ 815 ಚೆಕ್ ನ್ನು ಸಚಿವರು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ. ಬಿ. ಪಾಟೀಲ ಅವರು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಪೋಷಕರು, ಊರು, ಜಿಲ್ಲೆ ಮತ್ತು ರಾಜ್ಯಕ್ಕೆ ಹೆಸರು ತರುಬೇಕು. ವೈದ್ಯರಾದ ನಂತರ ಉತ್ತಮ ಸೇವೆ ಸಲ್ಲಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳ ಪೋಷಕರು ಮಾತನಾಡಿ ಬಡವರಾದ ಮಕ್ಕಳ ಭವಿಷ್ಯ ಬಗ್ಗೆ ಚಿಂತೆ ಉಂಟಾಗಿತ್ತು. ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ನಮ್ಮ ಮಕ್ಕಳು ಎಂ.ಬಿ.ಬಿ.ಎಸ್. ಸೀಟು ಪಡೆದರೂ ಹಣವಿಲ್ಲದ ಕಾರಣ ಸಂಕಷ್ಟದಲ್ಲಿದ್ದೇವು. ಇಂಥ ಕಠಿಣ ಪರಿಸ್ಥಿತಿಯಲ್ಲಿ ಸಚಿವ ಎಂ. ಬಿ. ಪಾಟೀಲ‌ ಅವರು ನಮ್ಮ ಪಾಲಿಗೆ ದೇವರ ರೂಪದಲ್ಲಿ ಬಂದು ಆಪದ್ಬಾಂಧವರಾಗಿದ್ದಾರೆ. ಆರ್ಥಿಕ ನೆರವು ನೀಡುವ ಮೂಲಕ ಸಹಾಯ ಹಸ್ತ ಚಾಚಿ ನಮ್ಮ ಮಕ್ಕಳು ವೈದ್ಯರಾಗಬೇಕು ಎಂಬ ಕನಸು ನನಸಾಗಲು‌ ಕಾರಣರಾಗಿದ್ದಾರೆ. ಅವರಿಗೆ ಸದಾ ಋಣಿಯಾಗಿದ್ದೇವೆ. ದೇವರು ಅವರಿಗೆ ಸದಾ ಒಳಿತನ್ನು ಮಾಡಲಿ ಎಂದು ಹೇಳಿದರು.

ಈ ಮುಂಚೆಯಿಂದಲೂ ಬಡ ವಿದ್ಯಾರ್ಥಿಗಳು ವೈದ್ಯರಾಗುವ ಕನಸಿಗೆ ನೆರವು ನೀಡುತ್ತ ಬಂದಿರುವ ಸಚಿವ ಎಂ. ಬಿ. ಪಾಟೀಲ ಅವರು ಕಳೆದ ತಿಂಗಳು‌ ಇಬ್ಬರು ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳಿಗೆ ಕಾಲೇಜು ಮತ್ತು ಹಾಸ್ಟೇಲಿನ ಶುಲ್ಕವನ್ನು ಭರಿಸಿ ನೆರವಾಗಿದ್ದರು. ಇಂದು ಮತ್ತೆ ಐದು ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚುವ ಮೂಲಕ ನೆರವಾಗಿದ್ದಾರೆ.

Leave a Reply

ಹೊಸ ಪೋಸ್ಟ್‌