ವಿಜಯಪುರ: ನೀಟ್ ಪಾಸಾಗಿ ಸರಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಸೀಟು ಪಡೆದರೂ ಶುಲ್ಕ ಭರಿಸಲಾಗದೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ವಿದ್ಯಾರ್ಥಿನಿಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಸಹಾಯಹಸ್ತ ಚಾಚಿದ್ದು, ಕೋರ್ಸಿನ ಸಂಪೂರ್ಣ ವೆಚ್ಚವನ್ನು ಭರಿಸಲಿದ್ದಾರೆ.
ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಭಾಗ್ಯಶ್ರಿ ದೇವರ ಎಂಬ ವಿದ್ಯಾರ್ಥಿನಿ ನೀಟ್ ಪರೀಕ್ಷೆಯಲ್ಲಿ 49707 ರ್ಯಾಂಕ್ ಪಡೆದಿದ್ದು, ಚಿಕ್ಕಬಳ್ಳಾಪುರ ಇನಸ್ಟಿಟ್ಯೂಟ್ ಆಫ್ ಸಾಯಿನ್ಸ್ ನಲ್ಲಿ ವೈದ್ಯಕೀಯ ಸೀಟು ಪಡೆದಿದ್ದಾಳೆ. ಈ ವಿದ್ಯಾರ್ಥಿನಿಗೆ ಪೋಷಕರಿಗೆ ಸಂಸ್ಥೆಯ ವತಿಯಿಂದ ಎಂ.ಬಿ.ಬಿ.ಎಸ್. ಕೋರ್ಸಿನ ಮೊದಲ ವರ್ಷದ ಶೈಕ್ಷಣಿಕ ಶುಲ್ಕ, ಹಾಸ್ಟೆಲ್ ಮತ್ತು ಊಟದ ಖರ್ಚಿಗೆ ಅಗತ್ಯವಾಗಿರುವ ಪ್ರಥಮ ಕಂತಿನ ಹಣ ರೂ. 1 ಲಕ್ಷ 57 ಸಾವಿರದ 250 ಚೆಕ್ ನ್ನು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಸೋಮವಾರ ವಿತರಿಸಿದರು. ವಿದ್ಯಾರ್ಥಿನಿಯ ತಂದೆ ಶಂಕರ ಮತ್ತು ತಾಯಿ ರಾಜೇಶ್ವರಿ ಅವರು ತಮ್ಮ ಮಗಳ ಪರವಾಗಿ ಚೆಕ್ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುನೀಲಗೌಡ ಪಾಟೀಲ, ವಿದ್ಯಾರ್ಥಿನಿ ಭವಿಷ್ಯದಲ್ಲಿ ಉತ್ತಮ ವೈದ್ಯೆಯಾಗಿ ಹೆಸರು ಮಾಡಲಿ. ಅಲ್ಲದೇ, ಈ ಭಾಗದ ಬಡ ರೋಗಿಗಳ ಸೇವೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ವಿದ್ಯಾರ್ಥಿನಿಯ ತಂದೆ ಶಂಕರ ದೇವರ ಮತ್ತು ತಾಯಿ ಜಯಶ್ರೀ ದೇವರ ಮಾತನಾಡಿ, ನಮ್ಮದು ಬಡ ಕುಟುಂಬ. ಮೊದಲ ಮಗ ವಿಶ್ವನಾಥ ಡಿಪ್ಲೋಮಾ ಓದುತ್ತಿದ್ದಾನೆ. ಎರಡನೇ ಪುತ್ರ ವಿನಾಯಕ ಪ್ರಥಮ ಪಿಯುಸಿ ಓದುತ್ತಿದ್ದಾನೆ. ಹೀಗಾಗಿ ನಮಗೆ ಮಗಳ ಕನಸು ನನಸು ಮಾಡಲು ಧನಸಹಾಯ ಮಾಡಿರುವ ಸಚಿವ ಎಂ. ಬಿ. ಪಾಟೀಲ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅವರ ಉಪಕಾರವನ್ನು ಎಂದೂ ಮರೆಯುವುದಿಲ್ಲ ಎಂದು ಹೇಳಿದರು.
ನಮ್ಮ ಗೋಳು ಹೇಳಿಕೊಂಡಾಗ ಸಚಿವ ಎಂ. ಬಿ. ಪಾಟೀಲ ಮತ್ತು ಸುನೀಲಗೌಡ ಪಾಟೀಲ ಅವರು ಆಪತ್ಕಾಲದಲ್ಲಿ ನಮಗೆ ಆರ್ಥಿಕ ಸಹಾಯ ನೀಡುವ ಮೂಲಕ ನೆರವಾಗಿದ್ದಾರೆ. ಇದರಿಂದ ನಮ್ಮ ಮಗಳು ವೈದ್ಯಳಾಗಬೇಕೆಂಬ ಕನಸು ನನಸು ಮಾಡಲು ಕಾರಣರಾಗಿದ್ದಾರೆ. ಅವರಿಗೆ ಚಿರಋಣಿಯಾಗಿದ್ದೇವೆ ಎಂದು ಹೇಳಿದರು.